ಮಡಿಕೇರಿ ಡಿ.11 NEWS DESK : ಕೊಡವ ಜಮ್ಮಾ ಮುಸ್ಲಿಂ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಅಸೋಸಿಯೇಷನ್‍ನ ಸಹಯೋಗದೊಂದಿಗೆ ಪುಡಿಯಂಡ ದೇವಣಗೇರಿ-ಕೊಂಡಂಗೇರಿ ಕುಟುಂಬಸ್ಥರ ವತಿಯಿಂದ 2026ನೇ ಸಾಲಿನ ಏ.24 ರಿಂದ ಮೇ 1ರ ವರೆಗೆ ಕೊಡವ ಜಮ್ಮಾ ಮುಸ್ಲಿಂ ಕುಟುಂಬಸ್ಥರಿಗೆ 3ನೇ ಆವೃತ್ತಿಯ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದು ಪುಡಿಯಂಡ ಕುಟುಂಬದ ಅಧ್ಯಕ್ಷರಾದ ಪುಡಿಯಂಡ ಉಸ್ಮಾನ್ ತಿಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಾಮಿಯಾಲ-ಅರಮೇರಿ ಗ್ರಾಮದಲ್ಲಿರುವ ಎಸ್.ಎಂ.ಎಸ್. ಶಾಲಾ ಮೈದಾನದಲ್ಲಿ ಪಂದ್ಯಾವಳಿ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಸಂಸದರು, ವಿಧಾನ ಪರಿಷತ್ ಸದಸ್ಯರು, ಶಾಸಕರುಗಳು ಎಲ್ಲಾ ರಾಜಕೀಯ ಪಕ್ಷದ ಮುಖಂಡರುಗಳು, ಕೊಡವ ಜಮ್ಮಾ ಮುಸ್ಲಿಂ ಸಂಘಟನೆ ಆಡಳಿತ ಮಂಡಳಿ, ಕೆ.ಎಂ.ಎ ಆಡಳಿತ ಮಂಡಳಿ, ಕುಟುಂಬದ ಎಲ್ಲಾ ತಕ್ಕ ಮುಖ್ಯಸ್ಥರುಗಳು ಹಾಗೂ ಎಲ್ಲಾ ಜನಾಂಗದ ಮುಖ್ಯಸ್ಥರುಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಜಿಲ್ಲೆಯ ಜಮ್ಮಾ ಮುಸ್ಲಿಂ ಸಮುದಾಯದ ಯುವಕರ ಪ್ರತಿಭೆ ಪ್ರದರ್ಶಿಸಲು ಪಂದ್ಯಾವಳಿ ಅವಕಾಶಕಲ್ಪಿಲಿದೆ. ಇದರೊಂದಿಗೆ ಶಿಕ್ಷಣಕ್ಕೆ ಒತ್ತು ನೀಡುವುದು ನಮ್ಮ ಪ್ರಮುಖ ಧ್ಯೇಯವಾಗಿದೆ ಎಂದು ಹೇಳಿದರು. ಕ್ರೀಡಾಕೂಟವು ಪುಡಿಯಂಡ ಕುಟುಂಬದ ತಕ್ಕ ಮುಖ್ಯಸ್ಥರಾದ ಮಹಮ್ಮದ್ ಹಾಜಿ, ಅಬ್ದುಲ್ಲ ಹಾಜಿ, ಕಾರ್ಯಕಾರಿಣಿ ಸದಸ್ಯರುಗಳಾದ ಬಶೀರ್ ಸಅದಿ, ಲಿಯಾಕತ್ ಅಲಿ, ಸಾದಲಿ ಅವರ ಮಾರ್ಗದರ್ಶನದಲ್ಲಿ ನಡೆಯಲಿದ್ದು, ಪುಡಿಯಂಡ ಕುಟುಂಬದ ವಿದೇಶದಲ್ಲಿ ಉದ್ಯೋಗದಲ್ಲಿರುವವರು ಸೇರಿ ಸರ್ವ ಸದಸ್ಯರುಗಳು ಸಮಿತಿ ಸದಸ್ಯರುಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು. ಪುಡಿಯಂಡ ಕುಟುಂಬದ ಕಾರ್ಯದರ್ಶಿ ರಹೀಂ ಮಾತನಾಡಿ, ಮೊದಲ ವರ್ಷ ಕುವಲೆರ, ಚಾಮಿಯಾಲ ಕುಟುಂಬ ಮತ್ತು ಎರಡನೇ ವರ್ಷ ಆಲಿರ ಕುಟುಂಬಸ್ಥರು ಕ್ರಿಕೆಟ್ ಕ್ರೀಡಾಕೂಟವನ್ನು ಆಯೋಜಿಸಿದ್ದು, 70 ಕುಟುಂಬಸ್ಥರು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು ಎಂದು ತಿಳಿಸಿದರು. ಕ್ರೀಡಾಕೂಟ ವಿಜೇತ ತಂಡಕ್ಕೆ 1,22,222 ರೂ. ನಗದು ಮತ್ತು ಟ್ರೋಫಿ, ದ್ವಿತೀಯ 66,666 ರೂ., ತೃತೀಯ 33,333 ರೂ. ಹಾಗೂ 4ನೇ ಥಾನ ಪಡೆಯುವ ತಂಡಕ್ಕೆ 22,222 ರೂ. ನಗದು ಬಹುಮಾನ ನೀಡಲಾಗುತ್ತದೆಂದು ತಿಳಿಸಿದರು. ಗೋಷ್ಠಿಯಲ್ಲಿ ಪುಡಿಯಂಡ ಕುಟುಂಬಸ್ಥರಾದ ಶಾದಲಿ, ಸಮದ್, ಅಯಮದ್, ಮೊಯ್ದು ಹಾಜರಿದ್ದರು.











