ಮಡಿಕೇರಿ ಡಿ.11 NEWS DESK : ನಗರದ ಮಹದೇವಪೇಟೆಯಲ್ಲಿರುವ ಶ್ರೀರಾಜೇಶ್ವರಿ ವಿದ್ಯಾಲಯದ ವತಿಯಿಂದ ಜ.10 ಮತ್ತು 11 ರಂದು ‘’ಎಸ್‌ಆರ್‌ವಿ ಕನೆಕ್ಟ್- ಹಳೆಯ ವಿದ್ಯಾರ್ಥಿಗಳ ಕ್ರೀಡಾಕೂಟ’ ನಡೆಯಲಿದೆ ಎಂದು ಶ್ರೀ ರಾಜೇಶ್ವರಿ ವಿದ್ಯಾಲಯ ಮ್ಯಾನೆಜಿಂಗ್ ಟ್ರಸ್ಟಿ ಸಚಿನ್ ವಾಸುದೇವ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ನಗರದ ಗಾಂಧಿ ಮೈದಾನದಲ್ಲಿ ಶ್ರೀ ರಾಜೇಶ್ವರಿ ವಿದ್ಯಾಲಯದ 1991 ಬ್ಯಾಚ್‍ನಿಂದ 2024ರ ವರೆಗಿನ ವಿದ್ಯಾರ್ಥಿಗಳಿಗೆ ಕ್ರೀಡಾಕೂಟ ಆಯೋಜಿಸಲಾಗಿದ್ದು, ವಿದ್ಯಾಲಯದ ಹಳೆ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕ್ರೀಡೋತ್ಸವವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು. ಕ್ರಿಡೋತ್ಸವದಲ್ಲಿ ಕ್ರಿಕೆಟ್ ಹಾಗೂ ವಾಲಿಬಾಲ್ ತಂಡಗಳಿಗೆ ತಲಾ 8 ಹಾಗೂ ಫುಟ್ಬಾಲ್‍ಗೆ 12 ಫ್ರ್ರಾಂಚೈಸ್‍ಗಳಿದ್ದು, ಥ್ರೋಬಾಲ್ ಹಾಗೂ ಶಾಲಾ ಮಟ್ಟದ ಅಂಡರ್ 16 ಬಾಲಕ ಬಾಲಕಿಯರಿಗೆ 5ಎ ಸೈಡ್ ಫುಟ್ಬಾಲ್ ಪಂದ್ಯಾವಳಿ ನಡೆಯಲಿದೆ. ಅಲ್ಲದೇ ಹಳೆ ವಿದ್ಯಾರ್ಥಿಗಳಿಗೆ ವಿವಿಧ ಕ್ರೀಡೆ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು. ಹಳೇ ವಿದ್ಯಾರ್ಥಿ ಸಂಘದ ಖಜಾಂಚಿ ಬೊಟ್ಟೋಳಂಡ ನಿವ್ಯ ಕಾವೇರಮ್ಮ ಮಾತನಾಡಿ, ಓದಿದ ಶಾಲೆ ಹಾಗೂ ಗುರುಗಳನ್ನು ಗೌರವಿಸುವ ಉದ್ದೇಶದಿಂದ, ಹಳೆಯ ವಿದ್ಯಾರ್ಥಿಗಳನ್ನು ಒಟ್ಟುಗೂಡಿಸಲು ಮತ್ತು ಹಳೆಯ ವಿದ್ಯಾರ್ಥಿಗಳು ಮತ್ತು ಸಂಸ್ಥೆಯ ನಡುವಿನ ಬಾಂಧವ್ಯವನ್ನು ಬಲಪಡಿಸಲು ಹಾಗೂ ಶಾಲೆಯ ಅಭಿವೃದ್ಧಿಗೆ ಸಹಕರಿಸುವ ಸಲುವಾಗಿ ಶ್ರೀ ರಾಜೇಶ್ವರಿ ಹಳೆ ವಿದ್ಯಾರ್ಥಿ ಸಂಘವನ್ನು ರಚನೆ ಮಾಡಲಾಗಿದೆಯೆಂದು ತಿಳಿಸಿದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಪ್ರದೀಪ್ ಕರ್ಕೆರ, ಉಪಾಧ್ಯಕ್ಷರಾಗಿ ಪಂಕಜ, ಕಾರ್ಯದರ್ಶಿಯಾಗಿ ಲೋಹಿತ್ ಎಂ.ಜಿ., ಖಜಾಂಚಿಗಳಾಗಿ ನಿರಂಜನ್ ಮತ್ತು ನಿವ್ಯ ಕಾವೇರಮ್ಮ ಕಾರ್ಯನಿರ್ವಹಿಸುತ್ತಿದ್ದಾರೆ. ಸಮಿತಿ ಸದಸ್ಯರುಗಳಾಗಿ ಹರೀಶ್, ಕವನ್, ಭೂತಾನೀಸ್, ಚರಣ್ ಕುಮಾರ್, ಅನುಷಾ ಎಂ.ಜಿ., ಅಕೀಬ್, ಎಸ್.ಎ.ಸುಬ್ರಮಣಿ, ಜೈದ್ ಬಿ.ಎಂ., ರಾಬಿನ್, ರಮ್ಯಾ, ಮೊಹಮ್ಮದ್ ಕೈಫ್, ಸುಹೈಲ್, ಜೈನುಲ್ ಅಬ್ದಿ, ಸುನಿಲ್, ವಾಹಿದ್, ಸುಜಿತ್ ಶೆಟ್ಟಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು. ಸಂಘದ ಸದಸ್ಯ ಎಂ.ಎಂ.ಚರಣ್ ಕುಮಾರ್ ಮಾತನಾಡಿ, ಜ.11 ರಂದು ನಗರದ ಹೋಟೆಲ್ ರಾಜ್‍ದರ್ಶನ್‍ನಲ್ಲಿ ಹಳೆ ವಿದ್ಯಾರ್ಥಿಗಳಿಗಾಗಿ ಸಮ್ಮಿಲನ ಕಾರ್ಯಕ್ರಮ ಹಾಗೂ ಭೋಜನಕೂಟವನ್ನು ಏರ್ಪಡಿಸಲಾಗಿದ್ದು, ಶ್ರೀ ರಾಜೇಶ್ವರಿ ವಿದ್ಯಾಲಯದ 1992 ಬ್ಯಾಚ್‍ನಿಂದ 2024ರ ವಿದ್ಯಾರ್ಥಿಗಳು ಕುಟುಂಬ ಸಹಿತ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಶ್ರೀ ರಾಜೇಶ್ವರಿ ವಿದ್ಯಾಲಯ ಅಧ್ಯಕ್ಷ ಗೋವಿಂದರಾಜು, ಹಳೆ ವಿದ್ಯಾರ್ಥಿ ಸಂಘ ಅಧ್ಯಕ್ಷ ಪ್ರದೀಪ್ ಕರ್ಕೆರ, ಖಜಾಂಚಿ ನಿರಂಜನ್ ಉಪಸ್ಥಿತರಿದ್ದರು.











