ನಾಪೋಕ್ಲು ಡಿ.15 NEWS DESK : ಕಕ್ಕಬ್ಬೆಯ ಡಾ. ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯ ಸಭಾಂಗಣದಲ್ಲಿ ಕೊಡವ ಮುಸ್ಲಿಂ ಸ್ಪೋಟ್ರ್ಸ್ ಅಕಾಡೆಮಿ (ಕೆ.ಎಂ.ಎಸ್.ಎ.) ಅನ್ನು ಉದ್ಘಾಟಿಸಲಾಯಿತು. ಕೊಡಗು ಜಿಲ್ಲಾ ಕೆಡಿಪಿ ಸದಸ್ಯರಾದ ಬಾಚಮಂಡ ಲವ ಚಿಣ್ಣಪ್ಪ ಮಕ್ಕಳಿಗೆ ವಿವಿಧ ಕ್ರೀಡಾ ಪರಿಕರಗಳನ್ನು ವಿತರಿಸುವುದರ ಮೂಲಕ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕೊಡವ ಮುಸ್ಲಿಂ ಸ್ಪೋರ್ಟ್ಸ್ ಅಕಾಡೆಮಿ (ಕೆ.ಎಂ.ಎಸ್.ಎ.) ಅನ್ನು ಉದ್ಘಾಟಿಸಿ, ಮಾತನಾಡಿ ಗ್ರಾಮೀಣ ಪ್ರದೇಶಗಳಲ್ಲಿ ಸಾಕಷ್ಟು ಪ್ರತಿಭಾನ್ವಿತ ಕ್ರೀಡಾಪಟುಗಳಿದ್ದಾರೆ. ಆದರೆ ಅವರಿಗೆ ಪೂರಕ ವ್ಯವಸ್ಥೆ ಇಲ್ಲದಿರುವ ಕಾರಣ ಯಶಸ್ಸು ಸಾಧಿಸಲಾಗುತ್ತಿಲ್ಲ. ಆದ್ದರಿಂದ ಅರ್ಹ ಕ್ರೀಡಾ ಪ್ರತಿಭಗಳಿಗೆ ಸರಕಾರೇತರ ಸಂಘ ಸಂಸ್ಥೆಗಳ ಪ್ರೋತ್ಸಾಹ ತೀರಾ ಅಗತ್ಯ ಎಂದರು. ಕ್ರೀಡೆಗಳು ಸಮಾಜದಲ್ಲಿ ಬಹು ಆಯಾಮದ ಪಾತ್ರವನ್ನು ವಹಿಸುತ್ತವೆ. ಇದು ದೇಶದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಅತ್ಯಗತ್ಯ ಅಂಶವಾಗಿದೆ. ಕ್ರೀಡೆಗಳಲ್ಲಿ ಪರಿಣಾಮಕಾರಿಯಾಗಿ ತೊಡಗಿಸಿಕೊಳ್ಳುವುದರಿಂದ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಬಹುದು. ಕ್ರೀಡೆ ಜೀವನದಲ್ಲಿ ಮನುಷ್ಯನಿಗೆ ಶಿಸ್ತನ್ನು ಕಲಿಸುತ್ತದೆ ಎಂದರಲ್ಲದೆ ಕೊಡವ ಮುಸ್ಲಿಂ ಸ್ಪೋರ್ಟ್ಸ್ ಅಕಾಡೆಮಿಯ ಪದಾಧಿಕಾರಿಗಳ ಸಾಮಾಜಿಕ ಚಿಂತನೆ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ಪ್ರಧಾನ ಕಾರ್ಯದರ್ಶಿ ಈತಲತಂಡ ರಫೀಕ್ ತೂಚಮಕೇರಿ ಮಾತನಾಡಿ, ಕೊಡವ ಮುಸ್ಲಿಂ ಸ್ಪೋಟ್ರ್ಸ್ ಅಕಾಡೆಮಿ ಕೇವಲ ಒಂದು ಸಮುದಾಯಕ್ಕೆ ಮಾತ್ರ ಸೀಮಿತವಾಗಿರಬಾರದು. ಅಕಾಡೆಮಿ ವತಿಯಿಂದ ಆಯೋಜಿಸುವ ವಿವಿಧ ಕ್ರೀಡಾಕೂಟಗಳ ಪೈಕಿ ಎಲ್ಲಾ ಸಮುದಾಯದವರನ್ನು ಒಳಗೊಂಡ ಕ್ರೀಡಾಕೂಟವನ್ನು ಆಯೋಜಿಸಿ ಸಮಾಜಕ್ಕೆ ಐಕ್ಯತೆಯ ಸಂದೇಶ ರವಾನಿಸುವಂತಿರಬೇಕು. ಇದನ್ನು ಅಕಾಡೆಮಿ ಪ್ರತಿ ವರ್ಷ ಮುಂದುವರಿಸಬೇಕು ಎಂದು ಸಲಹೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಅಧ್ಯಕ್ಷರಾದ ಆಲೀರ ರಶೀದ್ ವಹಿಸಿ ಮಾತನಾಡಿ, ಕೆ.ಎಂ.ಎಸ್.ಎ. ಪೂರ್ಣರೂಪದ ಕ್ರೀಡಾ ಸಂಸ್ಥೆಯಾಗಿದೆ. ಇದನ್ನು ಇಡೀ ಜಿಲ್ಲೆಯಲ್ಲಿ ಮಾದರಿ ಕ್ರೀಡಾ ಸಂಘಟನೆಯಾಗಿ ರೂಪುಗೊಳಿಸುವ ಗುರಿ ಹೊಂದಲಾಗಿದೆ ಎಂದರು. ಈ ಸಂದರ್ಭ ಕೆ.ಎಂ.ಎಸ್.ಎ. ಲೋಕಾರ್ಪಣೆಯ ನೆನಪಿಗಾಗಿ ಕಕ್ಕಬೆಯ ಸರಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಲಿಚಿ ಗಿಡವೊಂದನ್ನು ನೆಟ್ಟು ಅದನ್ನು ಪೋಷಿಸಿ ಬೆಳೆಸುವ ಪ್ರತಿಜ್ಞೆ ಕೈಗೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಕೆ.ಎಂ.ಎಸ್.ಎ. ಉಪಾಧ್ಯಕ್ಷರಾದ ಕುಂಡಂಡ ಎ.ರಜ್ಹಾಕ್, ಕೋಶಾಧಿಕಾರಿ ಆಲೀರ ಎ.ಅಜ್ಹಿಜ್ಹ್, ಜಂಟಿ ಕಾರ್ಯದರ್ಶಿ ಕಣ್ಣಪ್ಪಣೆ ವೈ.ಅಶ್ರಫ್, ನಿರ್ದೇಶಕರಾದ ಆಲೀರ ಎ.ಹುಸೈನ್, ಕೋಳುಮಂಡ ರಫೀಕ್, ಆಲೀರ ಬಿ.ಮೂಸಾ, ಪುಂಜೆರ ಹೆಚ್. ಅಬ್ದುಲ್ಲ, ಕುಪ್ಪೆಂಡಂಡ ಮಹಮ್ಮದ್, ಮಂದಮಾಡ ರಫೀಕ್ (ಮುನ್ನ), ಪರವಂಡ ಎ.ಸಿರಾಜುದ್ದೀನ್, ಕಕ್ಕಬ್ಬೆ ಡಾ. ಅಂಬೇಡ್ಕರ್ ವಸತಿ ಶಾಲೆಯ ಮುಖ್ಯ ಶಿಕ್ಷಕಿ ಎಂ.ಹೆಚ್.ರಜ್ಹಿನಾ, ಸಹ ಶಿಕ್ಷಕರಾದ ನಸೀಮ, ಜಲಜಾಕ್ಷಿ ಮೊದಲಾದವರು ಉಪಸ್ಥಿತರಿದ್ದರು. ಕೆ.ಎಂ.ಎಸ್.ಎ. ಪ್ರಧಾನ ಕಾರ್ಯದರ್ಶಿ ಮೀತಲತಂಡ ಇಸ್ಮಾಯಿಲ್ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಸಂಸ್ಥೆಯ ಕ್ರೀಡಾ ಸಂಚಾಲಕರಾದ ಕತ್ತಣಿರ ಹೆಚ್.ಅಬ್ದುಲ್ ರಹಿಮಾನ್ (ಅಂದಾಯಿ) ವಂದಿಸಿದರು.
ವರದಿ : ದುಗ್ಗಳ ಸದಾನಂದ.











