ಮಡಿಕೇರಿ ಡಿ.15 NEWS DESK : ನಗರದ ಸಂತ ಮೈಕಲರ ದೇವಾಲಯದ ಬೆಳ್ಳಿ ಮಹೋತ್ಸವ ಹಾಗೂ ವಾರ್ಷಿಕೋತ್ಸವವು ಸಂಭ್ರಮದಿಂದ ನಡೆಯಿತು. ಸಂಜೆ ಅಲಂಕೃತ ವಾಹನದಲ್ಲಿ ದೇವರ ವಿಗ್ರಹಗಳನ್ನು ಕುಳ್ಳಿರಿಸಿ ಸಹಸ್ರಾರು ಸಂಖ್ಯೆಯ ಕ್ರಿಶ್ಚಿಯನ್ ಬಾಂಧವರು ನಗರದಲ್ಲಿ ಮೆರವಣಿಗೆ ನಡೆಸಿದರು. ಭಕ್ತರು ಉರಿಯುತ್ತಿದ್ದ ಮೇಣದ ಬತ್ತಿ ಹಿಡಿದು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಮಕ್ಕಳು, ಮಹಿಳೆಯರಾದಿಯಾಗಿ ಜನಾಂಗದ ಮಂದಿ ಸಂತ ಮೈಕಲರ ದೇವಾಲಯದಿಂದ ಹೊರಟ ಮೆರವಣಿಗೆ ಮಂಗೇರೀರ ಮುತ್ತಣ್ಣ ವೃತ್ತ, ಸ್ಕ್ವಾಡರ್ ಲೀಡರ್ ಅಜ್ಜಮಾಡ ದೇವಯ್ಯ ವೃತ್ತದ ಮೂಲಕ ಚೌಕಿವರೆಗೆ ಸಾಗಿ ಮತ್ತೆ ಅದೇ ರಸ್ತೆ ಮೂಲಕ ದೇವಾಲಯಕ್ಕೆ ಹಿಂತಿರುಗಿತು. ದೇವಾಲಯಕ್ಕೆ 25 ವರ್ಷ ತುಂಬಿದ ಸಂದರ್ಭದಲ್ಲಿ ವಿಶೇಷ ಪ್ರಾರ್ಥನೆಗಳು ನಡೆದವು. ವಾರ್ಷಿಕೋತ್ಸವ ಅಂಗವಾಗಿ ದೇವಾಲಯವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.











