- ಮಡಿಕೇರಿ ಡಿ.15 NEWS DESK : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನ ಕರ್ನಾಟಕ ದಕ್ಷಿಣ ಪ್ರಾಂತದ 45ನೇ ಪ್ರಾಂತ ಸಮ್ಮೇಳನ ಡಿ.17, 18 ಮತ್ತು 19 ರಂದು ಮಡಿಕೇರಿಯ ಕೊಡಗು ಗೌಡ ಸಮಾಜದಲ್ಲಿ ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಬಿವಿಪಿಯ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯದರ್ಶಿ ಪ್ರವೀಣ್ ಎಚ್.ಕೆ ಅವರು ಸಮ್ಮೇಳನದಲ್ಲಿ ಕರ್ನಾಟಕ ದಕ್ಷಿಣ ಪ್ರಾಂತದ 9 ಸಂಘಟನಾತ್ಮಕ ವಿಭಾಗಗಳಿಂದ ಸುಮಾರು 600 ವಿದ್ಯಾರ್ಥಿಗಳು ಹಾಗೂ ಆಧ್ಯಾಪಕರು ಭಾಗವಹಿಸಲಿದ್ದಾರೆ. ಡಿ.17 ರ ಬೆಳಗ್ಗೆ 10 ಗಂಟೆಗೆ ಧ್ವಜಾರೋಹಣ ನೆರವೇರಲಿದ್ದು, ಪ್ರದರ್ಶಿನಿ ಉದ್ಘಾಟನೆಗೊಳ್ಳಲಿದೆ ಎಂದರು. ಜನರಲ್ ತಿಮ್ಮಯ್ಯ ಪ್ರದರ್ಶನಿಯನ್ನು ಪದ್ಮಶ್ರೀ ಪುರಸ್ಕೃತ ಕಲಾವಿದೆ ರಾಣಿ ಮಾಚಯ್ಯ ಉದ್ಘಾಟಿಸಲಿದ್ದಾರೆ. ನಂತರ ಮಧ್ಯಾಹ್ನ 12 ಗಂಟೆಗೆ ಪ್ರಾಂತ ಸಮ್ಮೇಳನ ಉದ್ಘಾಟನೆಗೊಳ್ಳಲಿದೆ. ಮುಖ್ಯ ಅತಿಥಿಗಳಾಗಿ ಅಖಿಲ ಭಾರತೀಯ ಸಹ ಸಂಘಟನಾ ಕಾರ್ಯದರ್ಶಿ ಬಾಲಕೃಷ್ಣ ಹಾಗೂ ಅಭಿಮನ್ಯು ಅಕಾಡೆಮಿಯ ಸಿಇಓ ಅರ್ಜುನ್ ದೇವಯ್ಯ ಭಾಗವಹಿಸಲಿದ್ದಾರೆ. ಡಿ.19 ರಂದು ನಡೆಯುವ ಯುವ ಪುರಸ್ಕಾರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮೀಡಿಯಾ ಮಾಸ್ಟರ್ಸ್ ಯುಟ್ಯೂಬ್ ಚಾನೆಲ್ ನ ಸಂಸ್ಥಾಪಕ ರಾಘವೇಂದ್ರ ಜೋಶಿ ಪಾಲ್ಗೊಳ್ಳಲಿದ್ದಾರೆ. ಈ ಸಾಲಿನ ಸಾಮಾಜಿಕ ಸೇವಾ ಕ್ಷೇತ್ರದ ಯುವ ಪುರಸ್ಕಾರ ಪ್ರಶಸ್ತಿಯನ್ನು ಬೆಂಗಳೂರಿನ ಮನೋಜ್ ನಂದೀಶಪ್ಪ ಅವರಿಗೆ ಪ್ರದಾನ ಮಾಡಲಾಗುವುದು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹ ಪ್ರಾಂತ ಪ್ರಚಾರಕ ನಂದೀಶ್ ಅವರು ‘ಆರ್ಎಸ್ಎಸ್-100 ಪಂಚ ಪರಿವರ್ತನೆ’ ಕುರಿತು ಹಾಗೂ ಪ್ರಜ್ಞಾ ಪ್ರವಾಹ ಅಖಿಲ ಭಾರತೀಯ ಸಹ ಸಂಯೋಜಕ್ ರಘುನಂದನ್ ಅವರು ‘ವಂದೇ ಮಾತರಂ-150’ ಕುರಿತು ವಿಶೇಷ ಭಾಷಣ ಮಾಡಲಿದ್ದಾರೆ. ರಾಜ್ಯದ ಶೈಕ್ಷಣಿಕ ಪರಿಸ್ಥಿತಿ, ರಾಜ್ಯದ ಪ್ರಸಕ್ತ ವರ್ತಮಾನ ಸ್ಥಿತಿಗತಿ, ಸರ್ಕಾರಿ ಉದ್ಯೋಗಗಳ ಶೀಘ್ರ ನೇಮಕಾತಿಗೆ ಅಗ್ರಹಿಸಿ ಹಾಗೂ ಶಿಕ್ಷಣದಲ್ಲಿ ಕೃತಕ ಬುದ್ಧಿಮತ್ತೆಯ ನೈತಿಕ ಮತ್ತು ನ್ಯಾಯಯುತ ಸಂಯೋಜನೆ ಕುರಿತಾಗಿ 4 ನಿರ್ಣಯಗಳನ್ನು ಮಂಡಿಸಿ ಅಂಗೀಕರಿಸಲಾಗುವುದು ಎಂದು ತಿಳಿಸಿದರು. ಡಿ.18 ರಂದು ಸಂಜೆ 4 ಗಂಟೆಗೆ ಮಡಿಕೇರಿ ನಗರದ ಪ್ರಮುಖ ರಸ್ತೆಗಳಲ್ಲಿ ಸಮ್ಮೇಳನದ ಭವ್ಯ ಶೋಭಾಯಾತ್ರೆ ಹಾಗೂ ಗಾಂಧಿ ಮೈದಾನದಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ. ಮುಖ್ಯ ಭಾಷಣಕಾರರಾಗಿ ವಿದ್ಯಾರ್ಥಿ ಪರಿಷತ್ ನ ರಾಷ್ಟ್ರೀಯ ಕಾರ್ಯದರ್ಶಿ, ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ಶ್ರವಣ್ ಬಿ.ರಾಜ್ ಅವರು ಭಾಗವಹಿಸಲಿದ್ದಾರೆ. ಸಮ್ಮೇಳನದ ಸಮಾನಾಂತರ ಗೋಷ್ಠಿ ಅವಧಿಗಳಲ್ಲಿ ಆಪರೇಷನ್ ಸಿಂಧೂರ್, ಅಕ್ರಮ ಬಾಂಗ್ಲಾದೇಶ ನುಸುಳುಕೋರರು, ಎಐ ಹಾಗೂ ಶಿಕ್ಷಣ, ಎಸ್ ಐ ಆರ್ ಮತ್ತು ಜನಸಂಖ್ಯಾ ಅಸಮತೋಲನದ ಕುರಿತಾಗಿ ವಿಷಯಗಳನ್ನು ಮಂಡನೆ ಮಾಡಲಾಗುವುದು. ಸುಮಾರು 600 ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು. 45ನೇ ಪ್ರಾಂತ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಈಶ್ವರ್ ಭಟ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ರಮೇಶ್ ಹೊಳ್ಳ ಕಾರ್ಯನಿರ್ವಹಿಸಲಿದ್ದಾರೆ ಎಂದು ಪ್ರವೀಣ್ ಎಚ್.ಕೆ ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಎಬಿವಿಪಿ ಮಂಗಳೂರು ವಿಭಾಗದ ಕಲಾಮಂಚ್ ಪ್ರಮುಖ್ ಕೌಸಲ್ಯ ಹಾಗೂ ಸ್ವಾಗತ ಸಮಿತಿಯ ಅಧ್ಯಕ್ಷ ಈಶ್ವರ ಭಟ್ ಉಪಸ್ಥಿತರಿದ್ದರು.











