ಮಡಿಕೇರಿ ಡಿ.15 NEWS DESK : ಕೊಡವ ಕೌಟುಂಬಿಕ ಹಾಕಿ ಉತ್ಸವ ಪ್ರಾರಂಭಗೊಂಡು ಬೆಳ್ಳಿ ಮಹೋತ್ಸವವನ್ನು ಆಚರಿಸಿಕೊಂಡ ಹಿನ್ನೆಲೆಯಲ್ಲಿ, ಕಳೆದ ಇಪ್ಪತ್ತೈದು ವರ್ಷಗಳ ಕಾಲ ನಡೆದ ಪಂದ್ಯಾವಳಿಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ತಂಡಗಳ ನಡುವಣ ‘ಲೆವಿಸ್ಟಾ ಕೊಡವ ಹಾಕಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿ’ಯು ಕೊಡವ ಹಾಕಿ ಅಕಾಡೆಮಿ ಆಶ್ರಯದಲ್ಲಿ ಡಿ.26 ರಿಂದ 30ರವರೆಗೆ ಮೂರ್ನಾಡಿನಲ್ಲಿ ನಡೆಯಲಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಪಂದ್ಯಾವಳಿಯ ಕುರಿತು ವಿವರಗಳನ್ನಿತ್ತ ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಕೆ.ಬೋಪಣ್ಣ, ಈ ಪಂದ್ಯಾವಳಿಯನ್ನು ಹಾಕಿ ಕೂರ್ಗ್, ಎಂ.ಬಾಡಗ ಸ್ಪೋರ್ಟ್ಸ್ ರಿಕ್ರಿಯೇಷನ್ ಸಂಸ್ಥೆ ಮತ್ತು ಮೂರ್ನಾಡು ವಿದ್ಯಾಸಂಸ್ಥೆಯ ಸಹಕಾರದೊಂದಿಗೆ ಮೂರ್ನಾಡಿನ ದಿ.ಬಾಚೆಟ್ಟೀರ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ಲೀಗ್ ಮತ್ತು ನಾಕ್ ಔಟ್ ಮಾದರಿಯಲ್ಲಿ ಆಯೋಜಿಸುತ್ತಿರುವುದಾಗಿ ತಿಳಿಸಿದರು. :: ಯಾವೆಲ್ಲ ಕಟುಂಬಗಳು ಪಾಲ್ಗೊಳ್ಳಲಿವೆ ? :: ಕೊಡವ ಹಾಕಿ ಅಕಾಡೆಮಿ ಗೌರವ ಕಾರ್ಯದರ್ಶಿ ಕುಲ್ಲೇಟಿರ ಅರುಣ್ ಬೇಬ ಅವರು ಮಾತನಾಡಿ, ಕಳೆದ ಇಪ್ಪತ್ತೈದು ವರ್ಷಗಳಲ್ಲಿ ನಡೆದ ಕೌಟುಂಬಿಕ ಕೊಡವ ಹಾಕಿ ಪಂದ್ಯಾವಳಿಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ 13 ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ. ‘ಎ’ ಗುಂಪಿನಲ್ಲಿ ಮಂಡೇಪಂಡ, ಪರದಂಡ, ಕೋಣೇರಿರ, ‘ಬಿ’ ಗುಂಪಿನಲ್ಲಿ ಚೆಪ್ಪುಡಿರ, ಪಳಂಗಂಡ, ಅಂಜಪರವಂಡ, ಮುಕ್ಕಾಟಿರ(ಬೊಂದ), ‘ಡಿ’ ಗುಂಪಿನಲ್ಲಿ ನೆಲ್ಲಮಕ್ಕಡ, ಕುಲ್ಲೇಟಿರ, ಮಾಚಮಾಡ, ‘ಡಿ’ ಗುಂಪಿನಲ್ಲಿ ಕುಪ್ಪಂಡ, ಕೂತಂಡ ಮತ್ತು ಕಲಿಯಂಡ ತಂಡಗಳು ಪಾಲ್ಗೊಳ್ಳಲಿವೆಯೆಂದು ಮಾಹಿತಿಯನ್ನಿತ್ತರು. ಗುಂಪು ಹಂತದಲ್ಲಿ ಲೀಗ್ ಮಾದರಿಯಲ್ಲಿ ಪಂದ್ಯಾವಳಿ ನಡೆಯಲಿದೆ. ಪ್ರತಿ ಗುಂಪಿನಿಂದ ಅಗ್ರಸ್ಥಾನ ಪಡೆಯುವ 4 ತಂಡಗಳು ಸೆಮಿಫೈನಲ್ ಹಂತವನ್ನು ಪ್ರವೇಶಿಸಲಿವೆ. ಸೆಮಿಫೈನಲ್ ಪಂದ್ಯಗಳು ಡಿ.29 ರಂದು ಬೆಳಗ್ಗೆ 10 ಮತ್ತು 11.30 ಗಂಟೆಗೆ ನಡೆಯಲಿದೆ. ಅಂತಿಮ ಪಂದ್ಯ ಡಿ.30ರಂದು ಬೆ.11.30 ಗಂಟೆಗೆ ಆಯೋಜಿತವಾಗಿದೆಯೆಂದು ತಿಳಿಸಿದರು. ಲೀಗ್ ಹಂತದ ಪಂದ್ಯಗಳು ತಲಾ 25 ನಿಮಿಷಗಳ ಎರಡು ಅವಧಿಯ ಒಟ್ಟು 50 ನಿಮಿಷದ್ದಾಗಿದ್ದರೆ, ಅಂತಿಮ ಪಂದ್ಯ ನಾಲ್ಕು ಕ್ವಾರ್ಟರ್ ಒಳಗೊಂಡಂತೆ 60 ನಿಮಿಷಗಳ ಪಂದ್ಯವಾಗಿರುತ್ತದೆಂದರು. :: ವಿಜೇತ ತಂಡಕ್ಕೆ 2 ಲಕ್ಷ ನಗದು :: ಪಂದ್ಯಾವಳಿ ವಿಜೇತ ತಂಡಕ್ಕೆ 2 ಲಕ್ಷ ರೂ., ದ್ವಿತೀಯ ಸ್ಥಾನ ಪಡೆಯುವ ತಂಡಕ್ಕೆ 1 ಲಕ್ಷ ರೂ., ಸೆಮಿಫೈನಲ್‍ಗೆ ಅರ್ಹತೆ ಪಡೆಯುವ ತಂಡಕ್ಕೆ ತಲಾ 50 ಸಾವಿರ ರೂ. ಹಾಗೂ ಉಳಿದ 9 ತಂಡಗಳಿಗೆ ತಲಾ 25 ಸಾವಿರ ರೂ. ಬಹುಮಾನ ಮತ್ತು ಸ್ಮರಣಿಕೆಯನ್ನು ಬಹುಮಾನವಾಗಿ ನೀಡಲಾಗುತ್ತದೆ. ಇದರೊಂದಿಗೆ ಅತ್ಯುತ್ತಮ ಫಾರ್ವರ್ಡ್, ಫುಲ್ ಬ್ಯಾಕ್, ಹಾಫ್ ಮತ್ತು ಗೋಲ್ ಕೀಪರ್ ಪ್ರಶಸ್ತಿಗಳನ್ನು ನಿಡಲಾಗುತ್ತದೆಂದು ವಿವರಗಳÀನ್ನಿತ್ತರು. :: ಗೌರವಾರ್ಪಣೆ :: ಉದ್ಘಾಟನಾ ಸಮಾರಂಭದಲ್ಲಿ, ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯ ಆರಂಭಿಕ ಪಂದ್ಯಾವಳಿ 1997 ರಲ್ಲಿ ನಡೆಯುವ ಸಂದರ್ಭ ತಾಂತ್ರಿಕ ಸಮಿತಿಯಲ್ಲಿ ಕಾರ್ಯನಿರ್ವಹಿಸಿದವರನ್ನು ಹಾಗೂ ವೀಕ್ಷಕ ವಿವರಣೆಗಾರರನ್ನು ಗುರುತಿಸಿ, ಅವರನ್ನು ಗೌರವಿಸಲಾಗುವುದು. ಸಮಾರಂಭದಲ್ಲಿ ಮೂರು ಬಾರಿಯ ಒಲಂಪಿಯನ್ ಬೊಳ್ಳಂಡ ಪ್ರಮೀಳ ಅಯ್ಯಪ್ಪ, ಭಾರತದ ಹಾಕಿ ತಂಡವನ್ನು ಪ್ರತಿನಿಧಿಸಿದ್ದ ಪಾಂಡಂಡ ಪುಷ್ಪಾ ಸುಬ್ಬಯ್ಯ ಅವರು ಪಾಲ್ಗೊಳ್ಳಲಿದ್ದಾರೆಂದು ಹೇಳಿದರು. :: ಸನ್ಮಾನ :: ಸಮಾರೋಪ ಸಮಾರಂಭದಲ್ಲಿ ಕಳೆದ 25 ವರ್ಷ ಹಾಕಿ ಹಬ್ಬವನ್ನು ಯಶಸ್ವಿಯಾಗಿ ಆಯೋಜಿಸಿರುವ ಇಪ್ಪತ್ತೈದು ಕೊಡವ ಕುಟುಂಬಗಳ ಪಟ್ಟೆದಾರರನ್ನು ಸನಾನಿಸಿ ಗೌರವಿಸಲಾಗುತ್ತದೆಂದು ತಿಳಿಸಿದರು. :: ಹಾಕಿ ಮತ್ತು ಕಾಫಿಗೆ ಕೊಡುಗೆ :: ಅಕಾಡೆಮಿಯ ಉಪಾಧ್ಯಕ್ಷರಾದ ಕುಂಡ್ಯೋಳಂಡ ರಮೇಶ್ ಮುದ್ದಯ್ಯ ಮಾvನಾಡಿ, ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯ ಜನಕ ಪಾಂಡಂಡ ಕುಟ್ಟಪ್ಪ ಅವರು ಹಾಕಿ ಕ್ಷೇತ್ರಕ್ಕೆ ಪಂದ್ಯಾವಳಿ ಆರಂಭಿಸುವ ಮೂಲಕ ಅಮೂಲ್ಯ ಕೊಡುಗೆ ನೀಡಿದ್ದಾರೆ. ಇದರೊಂದಿಗೆ ಅವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಅಧಿಕಾರಿಯಾಗಿ ಮಡಿಕೇರಿಯಲ್ಲಿ ಕಾರ್ಯನಿರ್ವಹಿಸಿದ 90 ರ ದಶಕÀದಲ್ಲಿ ಜಮ್ಮಾ ಜಾಗ ಹೊಂದಿದ್ದ ಕಾಫಿ ಬೆಳೆಗಾರಿಗೂ ಸಾಲ ಸೌಲಭ್ಯದ ಅನುಕೂಲತೆ ಕಲ್ಪಿಸುವ ಮೂಲಕ ಕಾಫಿ ಕೃಷಿಯ ಅಭಿವೃದ್ಧಿಗೂ ಕಾರಣರಾದವರೆಂದು ಸ್ಮರಿಸಿದರು. ಸುದ್ದಿಗೋಷ್ಠಿಯಲ್ಲಿ ಕೊಡವ ಹಾಕಿ ಅಕಾಡೆಮಿಯ ವಿರಾಜಪೇಟೆ ತಾಲ್ಲೂಕು ಉಪಾಧ್ಯಕ್ಷರಾದ ಕೂತಂಡ ಸುರೇಶ್ ಅಪ್ಪಯ್ಯ, ಸೋಮವಾರಪೇಟೆ ತಾಲ್ಲೂಕು ಉಪಾಧ್ಯಕ್ಷ ಬಾಚಿನಾಡಂಡ ಪ್ರದೀಪ್ ಪೂಣಚ್ಚ ಹಾಗೂ ನಿರ್ದೇಶಕ ಮುಕ್ಕಾಟಿರ ಸೋಮಯ್ಯ ಉಪಸ್ಥಿತರಿದ್ದರು.











