ಮಡಿಕೇರಿ ಡಿ.16 NEWS DESK : ಜನನ ಮತ್ತು ಮರಣ ನಾಗರಿಕ ನೋಂದಣಿ ಪದ್ಧತಿಯನ್ನು ನಿಖರವಾಗಿ ದಾಖಲಿಸುವಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಸೂಚಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ನಡೆದ ಜನನ ಮತ್ತು ಮರಣ ನಾಗರಿಕ ನೋಂದಣಿ ಪದ್ಧತಿಯ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರಾಷ್ಟ್ರದ ನಾಗರಿಕ ನೋಂದಣಿ ಜನನ ಮತ್ತು ಮರಣ ಅಧಿನಿಯಮ 1960 ರನ್ವಯ ಕರ್ನಾಟಕ ಜನನ ಮತ್ತು ಮರಣ ನೋಂದಣಿ 1970 ಮತ್ತು ಪುನರ್ ರಚಿತ ಕರ್ನಾಟಕ ಜನನ ಮರಣ ನೋಂದಣಿ ಕಾಯ್ದೆ ನಿಯಮ 1990 ರ ರನ್ವಯ ಜನನ ಮತ್ತು ಮರಣ ನೋಂದಣಿ ಕಡ್ಡಾಯವಾಗಿದ್ದು, ಆ ನಿಟ್ಟಿನಲ್ಲಿ ಕಾಲ ಕಾಲಕ್ಕೆ ಈ ಕಾರ್ಯ ಆಗಬೇಕು ಎಂದು ಸ್ಪಷ್ಟ ನಿರ್ದೇಶನ ನೀಡಿದರು. ಪ್ರಸ್ತುತ ಜನನ ಮತ್ತು ಮರಣ ನೋಂದಣಿಯನ್ನು ಗ್ರಾಮೀಣ ಭಾಗದಲ್ಲಿ 2015 ರ ಏ.1 ರಿಂದ ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಇ-ಜನ್ಮ ತಂತ್ರಾಂಶದ ಮೂಲಕ ಆನ್‍ಲೈನ್ ನೋಂದಣಿಯನ್ನು ನಿರ್ವಹಿಸಲಾಗುತ್ತಿದ್ದು, ಈ ಕಾರ್ಯದ ಪ್ರಗತಿಯನ್ನು ಸಾಧಿಸುವಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಸೂಚಿಸಿದರು. ಜನನ ಮತ್ತು ಮರಣ ನೋಂದಣಿ ಸಂಬಂಧಿಸಿದಂತೆ ಆಯಾಯ ಕಾಲದಲ್ಲಿ ಪಡೆಯುವಂತಾಗಲು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು. ಜನನ ಮತ್ತು ಮರಣ ಪ್ರಮಾಣ ಪತ್ರವನ್ನು ಆಯಾಯ ಕಾಲದಲ್ಲಿಯೇ ಪಡೆದುಕೊಳ್ಳುವಂತಾಗಬೇಕು ಎಂದು ಸಲಹೆ ಮಾಡಿದರು. ಈಗಾಗಲೇ ಜನನ ಮತ್ತು ಮರಣ ನೋಂದಣಿಯನ್ನು ಗ್ರಾ.ಪಂ.ಕಾರ್ಯದರ್ಶಿಯವರನ್ನು ಉಪ ನೋಂದಣಾಧಿಕಾರಿಯಾಗಿ ನೇಮಿಸಲಾಗಿದೆ. ಆ ನಿಟ್ಟಿನಲ್ಲಿ ಗ್ರಾ.ಪಂ.ವ್ಯಾಪ್ತಿಯಲ್ಲಿ 30 ದಿನದೊಳಗೆ ಜನನ ಮತ್ತು ಮರಣ ನೋಂದಣಿ ಮಾಡಬೇಕು. 30 ದಿನದ ನಂತರ ಗ್ರಾಮ ಆಡಳಿತ ಅಧಿಕಾರಿಯನ್ನು ನೋಂದಣಿ ಅಧಿಕಾರಿಯಾಗಿ ನೇಮಿಸಲಾಗಿದ್ದು, ಈ ನೋಂದಣಿಯನ್ನು 30 ದಿನದೊಳಗೆ ಇ-ಜನ್ಮ ತಂತ್ರಾಂಶದಲ್ಲಿ ದಾಖಲು ಮಾಡಬೇಕು ಎಂದರು. ಈಗಾಗಲೇ ದತ್ತು ಮಕ್ಕಳ ಜನನ ಪ್ರಮಾಣ ಪತ್ರವನ್ನು 2022 ರ ಸೆಕ್ಷನ್ 40 ಮತ್ತು 48 ರಂತೆ ತಿದ್ದುಪಡಿ ಮಾಡಲಾಗಿದ್ದು, ಯಾವುದೇ ಏಜೆನ್ಸಿಗಳು ದತ್ತು ಮಕ್ಕಳನ್ನು ಪಡೆಯಲು ಅರ್ಜಿ ಸಲ್ಲಿಸಿ ನೋಂದಣಿ ಮಾಡಿಕೊಂಡು ಜನನ ಪ್ರಮಾಣ ಪತ್ರವನ್ನು ನಿಯಮಾನುಸಾರ ಪಡೆಯಬಹುದಾಗಿದೆ ಎಂದು ಜಿಲ್ಲಾಧಿಕಾರಿ ಅವರು ಹೇಳಿದರು. ಜನನ ಮತ್ತು ಮರಣ ನೋಂದಣಿ ವ್ಯವಸ್ಥೆಯಲ್ಲಿ ಸರಳೀಕರಣಗೊಳಿಸುವ ಮತ್ತು ನಾಗರಿಕ ಸ್ನೇಹಿ ಮಾಡುವಲ್ಲಿ ಮುಂದಾಗಲಾಗಿದ್ದು, ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ಜನಿಸುವ ಮಗುವಿನ ಜನನ ಪ್ರಮಾಣ ಪತ್ರವನ್ನು ಎರಡು ಮೂರು ದಿನದೊಳಗೆ ಪಡೆಯಬಹುದಾಗಿದೆ ಎಂದು ಹೇಳಿದರು. ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಆರೋಗ್ಯ ಅಧಿಕಾರಿಯವರು ನೋಂದಣಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಅವರು ಹೇಳಿದರು. ಜಿಲ್ಲಾ ಸಾಂಖ್ಯಿಕ ಇಲಾಖೆಯ ಅಧಿಕಾರಿ ನಾರಾಯಣ ಅವರು ಮಾತನಾಡಿ ಜನನ ಮತ್ತು ಮರಣವನ್ನು ವಿವಿಧ ಹಂತದಲ್ಲಿ ದಾಖಲಿಸಲಾಗುತ್ತದೆ ಎಂದರು. 2025 ರ ಜ.1 ರಿಂದ ನವೆಂಬರ್ ಅಂತ್ಯದ ವರೆಗೆ ಕೊಡಗು ಜಿಲ್ಲೆಯಲ್ಲಿ ಒಟ್ಟು ಗ್ರಾಮೀಣ ಪ್ರದೇಶದಲ್ಲಿ 330 ಮತ್ತು ನಗರ ಪ್ರದೇಶದಲ್ಲಿ 8 ಒಟ್ಟು 338 ನೋಂದಣಿ ಘಟಕಗಳನ್ನು ಆರಂಭಿಸಲಾಗಿದೆ ಎಂದು ಅವರು ಹೇಳಿದರು. ಈ ಅವಧಿಯಲ್ಲಿ 2963 ಗಂಡು, 2907 ಹೆಣ್ಣು ಒಟ್ಟು 5,870 ಮಕ್ಕಳ ಜನನವಾಗಿದೆ. ಹಾಗೆಯೇ ಮರಣ ಪ್ರಮಾಣ 2539 ಗಂಡು, 1734 ಹೆಣ್ಣು ಒಟ್ಟು 4,283 ಮಂದಿ ಮೃತಪಟ್ಟಿದ್ದಾರೆ ಎಂದು ನಾರಾಯಣ ಅವರು ವಿವರಿಸಿದರು. ಸರ್ಕಾರಿ ಆಸ್ಪತ್ರೆಗಳಲ್ಲಿ ಜನನ ಮರಣ ಉಪ ನೋಂದಣಿ ಘಟಕವನ್ನು ಸ್ಥಾಪಿಸಿ ಈ ಸಂಸ್ಥೆಗಳಲ್ಲಿ ಸಂಭವಿಸುವ ಜನನ ಮತ್ತು ಮರಣ ಘಟನೆಗಳನ್ನು ನೋಂದಣಿ ಮಾಡಿ, ಅರ್ಜಿದಾರರಿಗೆ ನಿಗದಿತ ಸಮಯದಲ್ಲಿ ಪ್ರಮಾಣ ಪತ್ರಗಳನ್ನು ವಿತರಿಸಲು ಕ್ರಮವಹಿಸಲಾಗಿದೆ ಎಂದರು. ಖಾಸಗಿ ಆಸ್ಪತ್ರೆಗಳಲ್ಲಿ ಸಂಭವಿಸುವ ಘಟನೆಗಳನ್ನು 21 ದಿನದೊಳಗೆ ನೋಂದಣಿ ಮಾಡಲು ಅನುಕೂಲವಾಗುವಂತೆ ಸಂಬಂಧಿಸಿದ ಜನನ ಮತ್ತು ಮರಣ ನೋಂದಣಾಧಿಕಾರಿಗಳಿಗೆ ವರದಿ ಮಾಡಲು ತಿಳಿಸಲಾಗಿದೆ ಎಂದು ನಾರಾಯಣ ಅವರು ಹೇಳಿದರು. ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಚಂದ್ರಶೇಖರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ಪ್ರಸನ್ನ ಕುಮಾರ್, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರಾದ ಮುತ್ತಪ್ಪ, ಕುಶಾಲನಗರ ಪುರಸಭೆ ಮುಖ್ಯಾಧಿಕಾರಿ ಗಿರೀಶ್, ಸಹಾಯಕ ಸಾಂಖ್ಯಿಕ ಅಧಿಕಾರಿ ಟಿ.ವೆಂಕಟೇಶ್, ಬಿ.ಎಂ.ಗಾನವಿ, ಇತರರು ಇದ್ದರು.











