ವಿರಾಜಪೇಟೆ ಡಿ.17 NEWS DESK : ಬೇಟೋಳಿ ಗ್ರಾಮದ ಶ್ರೀ ಶಕ್ತಿ ವೃದ್ಧಾಶ್ರಮದಲ್ಲಿ ಜೆಡಿಎಸ್ ಕಾರ್ಯಕರ್ತರು ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಧ್ಯಕ್ಷ, ಕೇಂದ್ರದ ಬೃಹತ್ ಕೈಗಾರಿಕಾ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರ 66ನೇ ಹುಟ್ಟುಹಬ್ಬವನ್ನು ಆಚರಿಸಿದರು. ವಿರಾಜಪೇಟೆ ತಾಲ್ಲೂಕು ಜೆಡಿಎಸ್ ಪಕ್ಷದ ಅಧ್ಯಕ್ಷ ಪಿ.ಎ.ಮಂಜುನಾಥ್ ಅವರ ನೇತೃತ್ವದಲ್ಲಿ ವೃದ್ಧಾಶ್ರಮದಲ್ಲಿನ ವೃದ್ಧರಿಗೆ ಸಿಹಿ ಹಂಚಿ, ಮಧ್ಯಾಹ್ನದ ಬೋಜನ ನೀಡಿ ಹುಟ್ಟುಹಬ್ಬವನ್ನು ಆಚರಿಸಲಾಯಿತು. ವೃದ್ಧಾಶ್ರಮದ ಹಿರಿಯರೊಂದಿಗೆ ಕೆಲಕಾಲ ಕಳೆದ ಜೆಡಿಎಸ್ ಪಕ್ಷದ ಸದಸ್ಯರು ಸಿಹಿ ಹಂಚಿ ಸಂಭ್ರಮಿಸಿದರು. ಈ ಸಂದರ್ಭ ಮಾತನಾಡಿದ ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷ ಮಂಜುನಾಥ್, ದೇಶದ ಅಭಿವೃದ್ಧಿ ಜೊತೆಗೆ ಹೆಚ್ಚಿನ ಆದ್ಯತೆಯ ಮೇಲೆ ರಾಜ್ಯದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿರುವ ಕುಮಾರಸ್ವಾಮಿ ಅವರಿಗೆ ದೇವರು ಹೆಚ್ಚಿನ ಆರೋಗ್ಯ ಕರುಣಿಸಲಿ ಎಂದರಲ್ಲದೆ, ಈಗಾಗಲೇ ಎರಡು ಬಾರಿ ರಾಜ್ಯದ ಮುಖ್ಯಮಂತ್ರಿ ಆಗಿ ಜನರ ನೆನಪಿನಲ್ಲಿ ಉಳಿಯುವಂತಹ ಲಾಟರಿ ನಿಷೇಧ, ಸಾರಾಯಿ ನಿಷೇಧ, ಗ್ರಾಮ ವಾಸ್ತವ್ಯ, ರೈತರ ಸಾಲ ಮನ್ನಾ ಸೇರಿದಂತೆ ಇನ್ನು ಅನೇಕ ಜನಪರ ಆಡಳಿತ ನೀಡಿದ್ದಾರೆ ಎಂದರು. ಜಾತ್ಯತೀತ ಮನೋಭಾವದ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಆಗಿ ನೋಡಲು ರಾಜ್ಯದ ಜನತೆ ಕಾತುರರಾಗಿದ್ದಾರೆ. ಸದಾ ರೈತರ ಬಗ್ಗೆಯೇ ಚಿಂತಿಸುವ ಏಕೈಕ ನಾಯಕ ಕುಮಾರಸ್ವಾಮಿ ಪಕ್ಷದ ಸಂಘಟನೆ ಹಾಗೂ ರಾಜ್ಯದ ಜನರ ಹಿತಕ್ಕಾಗಿ ದುಡಿಯುವ ಅವರು ಕಾರ್ಯಕರ್ತರಿಗೆ ಆದರ್ಶವಾಗಿದ್ದಾರೆ. ಜೆಡಿಎಸ್ ಪಕ್ಷವನ್ನು ಪ್ರತಿಯೊಬ್ಬ ಕಾರ್ಯಕರ್ತರು ಸಂಘಟಿಸುವ ಸಂಕಲ್ಪ ಮಾಡುವ ಮೂಲಕ ಕುಮಾರಸ್ವಾಮಿ ಅವರಿಗೆ ಹುಟ್ಟು ಹಬ್ಬದ ಕೊಡುಗೆ ನೀಡಬೇಕು ಎಂದರು. ಅವರು ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿ ಆಗಲಿ ಎಂದು ಅವರ ಜನ್ಮದಿನದ ಸಂದರ್ಭದಲ್ಲಿ ಪ್ರಾರ್ಥಿಸುವುದಾಗಿ ಮಂಜುನಾಥ್ ಅವರು ಹೇಳಿದರು. ನಂತರ ಪಕ್ಷದ ಸದಸ್ಯರು ಕುಮಾರಸ್ವಾಮಿ ಅವರಿಗೆ ಜನ್ಮದಿನದ ಶುಭಾಶಯ ಕೋರಿ ಮಾತನಾಡಿ, ರೈತರ ಹಿತ ಕಾಯುವ ಧ್ಯೇಯದೊಂದಿಗೆ ಕುಮಾರಸ್ವಾಮಿಯವರು 20 ತಿಂಗಳು ನೀಡಿದ ಆಡಳಿತ ಅಭಿವೃದ್ಧಿ ಇಂದಿಗೂ ಜನತೆಯ ಮನಸ್ಸಿನಲ್ಲಿ ಉಳಿದಿದೆ ಎಂದರು. ತಾಲೂಕು ಕಾರ್ಯದರ್ಶಿ ಹರ್ಷ ಟಿ.ಆರ್., ತಾಲ್ಲೂಕು ಉಪಾಧ್ಯಕ್ಷ ಕೆ.ಎಸ್.ರಜಾಕ್, ಅಲ್ಪಸಂಖ್ಯಾತ ಘಟಕದ ತಾಲ್ಲೂಕು ಅಧ್ಯಕ್ಷ ಮಜೀದ್ ಚೊಕಂಡಹಳ್ಳಿ, ಯುವ ಘಟಕದ ಅಧ್ಯಕ್ಷ ಸೈಫುದ್ದೀನ್, ಎಸ್.ಸಿ-ಎಸ್.ಟಿ ಘಟಕದ ಅಮ್ಮತ್ತಿ ಜಯಮ್ಮ, ಮುಖಂಡರಾದ ನೂರ್ ಅಹಮ್ಮದ್, ಸಮಾಜ ಸೇವಕರಾದ ಟಿ.ವಿ ಸಾಜು ಮೋನ್, ಶಕ್ತಿ ವೃದ್ಧಾಶ್ರಮದ ಸಹಾಯಕ ಹನುಮಂತು ಹಾಗೂ ಇನ್ನಿತರರು ಹಾಜರಿದ್ದರು.











