ಮಡಿಕೇರಿ ಡಿ.17 NEWS DESK : ಕೊಡಗು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಮುಕೋಡ್ಲು ಹಾಗೂ ಹಮ್ಮಿಯಾಲ ಗ್ರಾಮಸ್ಥರಿಗೆ ಅರಿವು ಕಾರ್ಯಕ್ರಮ ನಡೆಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಪ್ರಸನ್ನ ಕುಮಾರ್ ಮಾತನಾಡಿ, ಪ್ರತಿ ಗ್ರಾಮ ದಿಂದ ಹೆಣ್ಣುಮಕ್ಕಳ ರಕ್ಷಣೆಯಾಗಬೇಕು ಹಾಗೂ ಹೆಣ್ಣು ಮಕ್ಕಳು ಉತ್ತಮ ಶಿಕ್ಷಣವಂತರಾಗಬೇಕು, ಹೆಣ್ಣು ಮಕ್ಕಳ ಸ್ವಾವಲಂಬಿ ಬದುಕಿಗೆ ಸಹಕರಿಸಲು ಇಲಾಖೆ ಮತ್ತು ಸಮುದಾಯ ಒಂದಾಗಿ ಶ್ರಮಿಸಬೇಕು ಎಂದು ತಿಳಿಸಿದರು. ಸಖಿ ಓನ್ ಸ್ಟಾಫ್ ಸೆಂಟರ್ ಕುರಿತು ಮಾಹಿತಿ ನೀಡಿ, ಸಖಿ ಕೇಂದ್ರವು ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಒಂದೇ ಸೂರಿನಡಿ ವೈದ್ಯಕೀಯ ನೆರವು, ಕಾನೂನು ನೆರವು, ಆಪ್ತ ಸಮಾಲೋಚನೆ, ತಾತ್ಕಾಲಿಕ ಆಶ್ರಯ ಹಾಗೂ ಪೊಲೀಸ್ ನೆರವು ನೀಡುತ್ತದೆ , ಮಕ್ಕಳ ಸಹಾಯವಾಣಿ 1098, ಮಹಿಳಾ ಸಹಾಯವಾಣಿ 181 ರ ಸಹಕಾರದೊಂದಿಗೆ ಇಲಾಖೆಯನ್ನು ಮಹಿಳೆಯರು ಮತ್ತು ಮಕ್ಕಳು ದಿನದ 24 ಗಂಟೆಗಳು ವಾರದ ಏಳು ದಿನಗಳು ಉಚಿತವಾಗಿ ಸಂಪರ್ಕಿಸಬಹುದಾಗಿ ತಿಳಿಸಿದರು. ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವತಿಯಿಂದ ನೀಡುವ ಯೋಜನೆಯಾದ ಉದ್ಯೋಗಿನಿ ಯೋಜನೆಯು ಮಹಿಳೆಯರ ಆದಾಯೋತ್ಪನ್ನ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸ್ವಯಂ ಉದ್ಯೋಗಿಗಳಾಗಲು ಬ್ಯಾಂಕ್ ಗಳ ಮೂಲಕ ಸಾಲ ಮತ್ತು ನಿಗಮದ ಮೂಲಕ ಸಹಾಯಧನ ನೀಡಲಾಗುತ್ತಿದ್ದು 18 ರಿಂದ 55 ವರ್ಷದ ಒಳಗಿನ ಮಹಿಳೆಯರು ಅರ್ಜಿ ಸಲ್ಲಿಸಬಹುದು ಅರ್ಜಿಗಳನ್ನು ತಮ್ಮ ಹತ್ತಿರದ ಗ್ರಾಮ ಒನ್ ಕೇಂದ್ರಗಳಲ್ಲಿ ಸಲ್ಲಿಸಬಹುದು ಎಂದು ತಿಳಿಸಿದರು.
ಹೆಚ್ಚಿನ ಮಾಹಿತಿಗಾಗಿ ವೆಬ್ ಸೈಟ್ ವಿಳಾಸ https://kswdc.karnataka.gov.in ಸಂಪರ್ಕಿಸಿ ಎಂದು ತಿಳಿಸಿದರು. ಮೇಲ್ವಿಚಾರಕರು, ಪ್ರಭಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್ ಮಾತನಾಡಿ, ಬಿಪಿಎಲ್ ಕುಟುಂಬಕ್ಕೆ ಸೇರಿದ 2 ಹೆಣ್ಣು ಮಕ್ಕಳ ಜನನವಾಗಿ ಎರಡು ವರ್ಷದೊಳಗೆ ಪಕ್ಕದ ಅಂಗನವಾಡಿ ಕೇಂದ್ರದಲ್ಲಿ ಅರ್ಜಿ ಸಲ್ಲಿಸಿದ್ದಲ್ಲಿ ಭಾಗ್ಯಲಕ್ಷ್ಮಿ, ಸುಕನ್ಯಾ ಸಮೃದ್ಧಿ ಯೋಜನೆಯ ಸೌಲಭ್ಯವನ್ನು ಪಡೆಯಬಹುದಾಗಿ ಹಾಗೂ ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯಡಿ ಸರ್ಕಾರಿ ನೌಕರಳಲ್ಲದ ಮೊದಲ ಪ್ರಸವದ ಗರ್ಭಿಣಿ ಮಹಿಳೆಯರಿಗೆ ಎರಡು ಕಂತುಗಳಲ್ಲಿ 5 ಸಾವಿರ ಸಹಾಯಧನ ಹಾಗೂ ಎರಡನೇ ಪ್ರಸವದ ಬಾಣಂತಿ ಮಹಿಳೆಯರಿಗೆ ಹೆಣ್ಣು ಮಗು ಜನಿಸಿದರೆ ಡಿ ಬಿ ಟಿ ಮೂಲಕ ಒಂದೇ ಕಂತಿನಲ್ಲಿ 6 ಸಾವಿರ ಸಹಾಯಧನ ನೀಡಲಾಗುತ್ತದೆ ಎಂದು ತಿಳಿಸಿದರು. ಸ್ತ್ರೀ ಶಕ್ತಿ ಗುಂಪಿನ ಮಹಿಳೆಯರಿಗೆ ಉಳಿತಾಯವನ್ನು ಹೆಚ್ಚಿಸಲು ಆದಾಯ ಉತ್ಪನ್ನವನ್ನ ಚಟುವಟಿಕೆ ಮಾಡಲು ಪ್ರೋತ್ಸಾಹಿಸಿದರು. ಬಾಲ್ಯ ವಿವಾಹದ ದುಷ್ಪರಿಣಾಮದ ಬಗ್ಗೆ ಮಾಹಿತಿ ನೀಡಿದರು. ಅಂಗನವಾಡಿಗಳಿಂದ ಸೂಕ್ತ ಸಮಯದಲ್ಲಿ ಫಲಾನುಭವಿಗಳಿಗೆ ಸರಿಯಾಗಿ ಆಹಾರ ವಿತರಣೆ ಆಗುತ್ತಿರುವ ಬಗ್ಗೆ ಕೂಲಿ ಕಾರ್ಮಿಕರ ವಾಸಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಲಾಯಿತು. ಮಕ್ಕಳನ್ನು ಅಂಗನವಾಡಿಗೆ ಶಿಕ್ಷಣ ಪಡೆಯಲು ಕಳುಹಿಸುವಂತೆ ಪ್ರೋತ್ಸಾಹಿಸಲಾಯಿತು. ಜಿಲ್ಲಾ ಮಿಷನ್ ಸಂಯೋಜಕರಾದ ಮಮತಾ ಮಾತನಾಡಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯ ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರಬೇಕು, ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡಬೇಕು ಎಂದು ತಿಳಿಸಿದರು. ಶ್ರೀ ರಮಾದೇವಿ ಉದ್ಯೋಗಸ್ಥ ಮಹಿಳೆಯರ ವಸತಿ ನಿಲಯವು (ಓಂಕಾರೇಶ್ವರ ದೇವಸ್ಥಾನ, ಟೋಲ್ ಗೇಟ್, ಮಡಿಕೇರಿ) ಉದ್ಯೋಗಸ್ಥ ಮಹಿಳೆಯರಿಗೆ ಸುರಕ್ಷತೆ ಮತ್ತು ಭದ್ರತೆ ವಾತಾವರಣ ನಿರ್ಮಿಸುವ ಉದ್ದೇಶವನ್ನು ಹೊಂದಿದ್ದು, ಉದ್ಯೋಗಸ್ಥ ಮಹಿಳೆಯರು ನಿಲಯದಲ್ಲಿ ಆಶ್ರಯ ಪಡೆಯಬಹುದಾಗಿದೆ ಎಂದು ತಿಳಿಸಿದರು. ಹೆಣ್ಣು ಒಂದು ಕಲಿತರೆ ಶಾಲೆಯೊಂದು ತೆರೆದಂತೆ ಪ್ರತಿ ಮನೆಯ ಹೆಣ್ಣು ಮಕ್ಕಳು ಶಿಕ್ಷಣವಂತರಾಗ ಬೇಕು. ಸಮಾಜದಲ್ಲಿ ಉತ್ತಮ ಸ್ಥಾನಮಾನ ಪಡೆಯಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆ ಲಲಿತಾ, ತಾರಾಮಣಿ, ಆಶಿತಾ ಇದ್ದರು.











