ಕುಶಾಲನಗರ NEWS DESK ಡಿ.18 : ಇಲ್ಲಿಗೆ ಸಮೀಪದ ಆತ್ತೂರು ಗ್ರಾಮದಲ್ಲಿ ಇರುವ ಜ್ಞಾನಗಂಗಾ ವಸತಿ ಶಾಲೆಯಲ್ಲಿ ವಿದ್ಯಾರ್ಥಿ ಗಳಲ್ಲಿ ಪಠ್ಯೇತರ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಒಲೆಯಿಲ್ಲದ ಹಾಗೂ ಬೆಂಕಿಯೂ ಇಲ್ಲದ ವೈವಿಧ್ಯಮಯ ತಿನಿಸುಗಳ ಮೇಳವನ್ನು ಆಯೋಜಿಸಲಾಗಿತ್ತು. ಯಾವಾಗಲೂ ಮನೆಗಳಲ್ಲಿ ಅಮ್ಮನ ಕೈ ತುತ್ತು ಮತ್ತು ಅಜ್ಜಿಯ ಕೈ ತುತ್ತು ಸವಿದು ಶಾಲೆಗೆ ಬರುತ್ತಿದ್ದ ವಿದ್ಯಾರ್ಥಿಗಳು ತಿನಿಸುಗಳನ್ನು ಸಿದ್ದಪಡಿಸುವಲ್ಲಿ ನಾವೇನು ಕಡಿಮೆ ಇಲ್ಲ ಎಂಬಂತೆ ತಯಾರಿಸಿದ್ದ ತಿನಿಸುಗಳು ಹಾಗೂ ಪಾನೀಯಗಳು ಇನ್ನಿತರೇ ವಿದ್ಯಾರ್ಥಿಗಳಷ್ಟೇ ಅಲ್ಲದೇ ಶಾಲಾ ಶಿಕ್ಷಕ ಸಮೂಹದಲ್ಲೂ ಬಾಯಿ ನೀರೂರಿಸಿತು. ಶಾಲೆಯ ಕಾರ್ಯದರ್ಶಿ ಬಿ.ಎಸ್. ನಿಂಗಪ್ಪ ಅವರ ಮಾರ್ಗದರ್ಶನದಲ್ಲಿ ಮಕ್ಕಳು ಹಾಗೂ ಬೋಧಕರು ಇಂತಹ ವೈವಿಧ್ಯಮಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಎಂದು ಹೇಳಿದ ಸಂಸ್ಥೆಯ ಪ್ರಾಂಶುಪಾಲೆ ಸತ್ಯ ಸುಲೋಚನಾ, ಜಂಕ್ ಫುಡ್ ಗಳಿಂದ ಮಕ್ಕಳನ್ನು ದೂರವಿಡುವ ಮೂಲಕ ಮನೆಯಲ್ಲಿ ಅತಿ ಸುಲಭದಲ್ಲಿ ಹೆಚ್ಚು ಪೌಷ್ಟಿಕಾಂಶ ಗಳುಳ್ಳ ತರಕಾರಿ, ಸೊಪ್ಪು, ಹಣ್ಣುಗಳಿಂದ ಸಿದ್ದಪಡಿಸಿದ್ದ ತಿನಿಸುಗಳ ಮೇಳ ವಿದ್ಯಾರ್ಥಿ ಸಮೂಹಕ್ಕೆ ನೆರವಾಗಲಿದೆ ಎಂದರು.










