ಮಡಿಕೇರಿ ಡಿ.19 NEWS DESK : ರಾಷ್ಟ್ರೀಯ ಲೋಕ್ ಅದಾಲತ್‍ನಲ್ಲಿ ನ್ಯಾಯಾಲಯದಲ್ಲಿ ಬಾಕಿಯಿದ್ದ ಪ್ರಕರಣಗಳು 2,553 ಮತ್ತು ವ್ಯಾಜ್ಯ ಪೂರ್ವ ಪ್ರಕರಣಗಳು 12,297, ಒಟ್ಟು 14,850 ಪ್ರಕರಣಗಳು ರಾಜಿ ತೀರ್ಮಾನವಾಗಿರುತ್ತದೆ. ಈ ಎಲ್ಲಾ ಪ್ರಕರಣಗಳಿಗೆ ಸಂಬಂಧಿಸಿದಂತೆ ರಾಜಿ ಸಂಧಾನದ ಒಟ್ಟು ಮೊತ್ತ ರೂ.53,75,54,248. ಜಿಲ್ಲೆಯಾದ್ಯಂತ ಒಟ್ಟು 14 ಪೀಠಗಳು ಕಾರ್ಯನಿರ್ವಹಿಸಿದ್ದವು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶುಭ ಅವರು ತಿಳಿಸಿದ್ದಾರೆ. ಜಿಲ್ಲೆಯ ಎಲ್ಲಾ ನ್ಯಾಯಾಧೀಶರುಗಳು, ವಕೀಲರುಗಳು, ಸಿಬ್ಬಂದಿ ವರ್ಗ, ವಿಮಾ ಕಂಪನಿ ಮತ್ತು ಬ್ಯಾಂಕ್ ಅಧಿಕಾರಿಗಳು ಭಾಗವಹಿಸಿದ್ದರು. ಕೊಡಗು ಜಿಲ್ಲೆಯಾದ್ಯಂತ ಮತ್ತು ತಾಲ್ಲೂಕು ನ್ಯಾಯಾಲಯಗಳಲ್ಲಿ 2025 ನವೆಂಬರ್, 30 ರಂದು ಒಟ್ಟು 18,049 ಪ್ರಕರಣಗಳು ವಿಚಾರಣೆಗೆ ಬಾಕಿಯಿದ್ದು, ಅವುಗಳ ಪೈಕಿ 6,361 ಸಿವಿಲ್ ಪ್ರಕರಣಗಳು ಹಾಗೂ 11,688 ಕ್ರಿಮಿನಲ್ ಪ್ರಕರಣಗಳಿದ್ದು, ಈ ಪ್ರಕರಣಗಳಲ್ಲಿ 5,754 ರಾಜಿಯಾಗಬಹುದಾದ ಪ್ರಕರಣಗಳಾಗಿರುತ್ತದೆ. ಅವುಗಳ ಪೈಕಿ 3,321 ಪ್ರಕರಣಗಳನ್ನು ರಾಜಿ ಸಂಧಾನಕ್ಕಾಗಿ ತೆಗೆದುಕೊಳ್ಳಲಾಗಿತ್ತು. ರಾಜಿ ಸಂಧಾನಕ್ಕಾಗಿ ತೆಗೆದುಕೊಂಡ ಪ್ರಕರಣಗಳಲ್ಲಿ (ನ್ಯಾಯಾಲಯದಲ್ಲಿ ಬಾಕಿ ಇರುವ) 2,553 ಪ್ರಕರಣಗಳನ್ನು ರಾಷ್ಟ್ರೀಯ ಲೋಕ್ ಅದಾಲತ್‍ನಲ್ಲಿ ಇತ್ಯರ್ಥಪಡಿಸಲಾಗಿರುತ್ತದೆ. ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ, ನವದೆಹಲಿ ಮತ್ತು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು ರವರ ನಿರ್ದೇಶನದಂತೆ ಡಿಸೆಂಬರ್, 13 ರಂದು ಕೊಡಗು ಜಿಲ್ಲೆಯನ್ನೊಳಗೊಂಡಂತೆ ರಾಜ್ಯಾದ್ಯಂತ ಎಲ್ಲಾ ನ್ಯಾಯಾಲಯಗಳಲ್ಲಿ ಬಾಕಿಯಿರುವ ಪ್ರಕರಣಗಳಲ್ಲಿ ಕಾನೂನಿನ ಪ್ರಕಾರ ರಾಜಿಯಾಗಬಹುದಾದ ಪ್ರಕರಣಗಳನ್ನು ಮತ್ತು ವಾಜ್ಯ ಪೂರ್ವ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸುವ ಉದ್ದೇಶದಿಂದ ರಾಷ್ಟ್ರೀಯ ಲೋಕ್ ಅದಾಲತ್‍ನ್ನು ಹಮ್ಮಿಕೊಳ್ಳಲಾಗಿತ್ತು. ಸಾರಿಗೆ ಇಲಾಖೆಯಲ್ಲಿ 1991-92 ರಿಂದ 2019-20 ರ ಅವಧಿಯಲ್ಲಿ ದಾಖಲಾಗಿ, ಪಾವತಿಗೆ ಬಾಕಿಯಿರುವ ಪ್ರಕರಣಗಳ ಮೊತ್ತದಲ್ಲಿ ಶೇ.50ರಷ್ಟು ರಿಯಾಯಿತಿಯನ್ನು ನೀಡಿದ್ದು, ಜಿಲ್ಲೆಯಾದ್ಯಂತ ಒಟ್ಟು 29 ಪ್ರಕರಣಗಳು ಇತ್ಯರ್ಥವಾಗಿದ್ದು, ರೂ.4,00,000 ಗಳು ಸ್ವೀಕೃತವಾಗಿರುತ್ತದೆ. ಕೌಟುಂಬಿಕ ವಿವಾದದ ಪ್ರಕರಣಗಳಲ್ಲಿ ಕೊಡಗು ಜಿಲ್ಲೆಯ ಮತ್ತು ತಾಲ್ಲೂಕು ನ್ಯಾಯಾಲಯಗಳಿಗೆ ಸಂಬಂಧಿಸಿದಂತೆ ಒಟ್ಟು 06 ದಂಪತಿಗಳು ತಮ್ಮ ವೈವಾಹಿಕ ವಾಜ್ಯಗಳನ್ನು ಬಗೆಹರಿಸಿಕೊಂಡು ಒಂದಾಗಿರುತ್ತಾರೆ. ಇತ್ತೀಚೆಗೆ ನಡೆದ ಲೋಕ ಅದಾಲತ್‍ನಲ್ಲಿ ಗೌರವಾನ್ವಿತ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳು ಹಾಗೂ ಕೊಡಗು ಜಿಲ್ಲೆಯ ಆಡಳಿತಾತ್ಮಕ ನ್ಯಾಯಮೂರ್ತಿಗಳು ಭಾಗವಹಿಸಿದ್ದರು ಎಂದು ಮಾಹಿತಿ ನೀಡಿದ್ದಾರೆ.










