ಮಡಿಕೇರಿ ಡಿ.19 NEWS DESK : ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ, ಸಮುದಾಯ ವೈದ್ಯಕೀಯ ವಿಭಾಗದ ವತಿಯಿಂದ ಉಪನ್ಯಾಸ ಕಾರ್ಯಕ್ರಮ ನಡೆಯಿತು. “ಮಾನಸಿಕ ಅಸ್ವಸ್ಥತೆ ಮಹಾಮಾರಿ: ಆರೈಕೆ ನೀಡುವವರ ದೃಷ್ಟಿಕೋನ” ಎಂಬ ವಿಷಯದ ಮೇಲೆ ಟೆಕ್ಸಿಲಾ ಅಮೆರಿಕನ್ ಯುನಿವರ್ಸಿಟಿ ಕಾಲೇಜ್ ಆಫ್ ಮೆಡಿಸಿನ್, ಗಯಾನಾ, ಇಲ್ಲಿನ ಮುಖ್ಯ ಶೈಕ್ಷಣಿಕ ಅಧಿಕಾರಿ ಹಾಗೂ ಡೀನ್ ಆಗಿರುವ ಡಾ.ಧೀರಜ್ ಬನ್ಸಾಲ್ (ಎಂ.ಡಿ.,ಎಂ.ಪಿ.ಎಚ್.) ಅವರು ಉಪನ್ಯಾಸ ನೀಡಿದರು. ತಮ್ಮ ಉಪನ್ಯಾಸದಲ್ಲಿ ಮಾನಸಿಕ ಅಸ್ವಸ್ಥತೆಗಳ ಹೆಚ್ಚುತ್ತಿರುವ ಪ್ರಮಾಣ, ಆರೋಗ್ಯ ವ್ಯವಸ್ಥೆಯ ಮೇಲಿನ ಪರಿಣಾಮ, ಹಾಗೂ ರೋಗಿಗಳಿಗೆ ಸಮಗ್ರ ಆರೈಕೆ ನೀಡುವಲ್ಲಿ ಆರೈಕೆದಾರರ ಪಾತ್ರದ ಮಹತ್ವವನ್ನು ವಿವರಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಸಮುದಾಯ ವೈದ್ಯಕೀಯ ವಿಭಾಗದ ಮುಖ್ಯಸ್ಥರಾದ ಡಾ.ರಾಮಚಂದ್ರ ಕಾಮತ್ ಅವರು ಸ್ವಾಗತವನ್ನು ನೀಡಿದರು. ಮಾನಸಿಕ ಆರೋಗ್ಯವು ಸಾರ್ವಜನಿಕ ಆರೋಗ್ಯದ ಪ್ರಮುಖ ಅಂಶವಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮಕ್ಕೆ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡೀನ್ ಹಾಗೂ ನಿರ್ದೇಶಕರಾದ ಡಾ.ಲೋಕೇಶ್ ಎ.ಜೆ. ಅವರು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು, ಬೋಧಕ ಸಿಬ್ಬಂದಿ ಹಾಗೂ ವಿವಿಧ ವಿಭಾಗಗಳ ಆರೋಗ್ಯ ವೃತ್ತಿಪರರು ಭಾಗವಹಿಸಿದ್ದರು. ಉಪನ್ಯಾಸದ ಕೊನೆಯಲ್ಲಿ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಭಾಗವಹಿಸಿದವರು ಮಾನಸಿಕ ಆರೋಗ್ಯ ಆರೈಕೆಗೆ ಸಂಬಂಧಿಸಿದ ವಿವಿಧ ಪ್ರಶ್ನೆಗಳನ್ನು ಕೇಳುವುದರ ಮೂಲಕ ತಮ್ಮ ಸಂಶಯಗಳನ್ನು ನಿವಾರಿಸಿಕೊಂಡರು.











