ಮಡಿಕೇರಿ ಡಿ.19 NEWS DESK : ಶಿವನ ಆರಾಧನೆಯ ಭಕ್ತಿ ಮಾರ್ಗದ ಮೂಲಕ ಆತ್ಮ ಪರಿವರ್ತನೆಯ ಮಹಾನ್ ಚಿಂತನೆಯೊಂದಿಗೆ ಉಡುಪಿಯಿಂದ ಆರಂಭಗೊಂಡಿರುವ ‘ಆದಿಯೋಗಿ ರಥ ಯಾತ್ರ್ರೆ’ಯು ಡಿ.22ರಂದು ದಕ್ಷಿಣ ಕನ್ನಡ ಜಿಲ್ಲೆಯಿಂದ ಮದೆನಾಡಿನ ಮೂಲಕ ಕೊಡಗನ್ನು ಪ್ರವೇಶಿಸಲಿದ್ದು, ಅಂದು ನಗರದಲ್ಲಿ ನಡೆಯಲಿರುವ ಭಕ್ತಿ ಭಾವದ ರಥ ಯಾತ್ರೆಯಲ್ಲಿ ಭಕ್ತಾದಿಗಳು ಪಾಲ್ಗೊಳ್ಳುವಂತೆ ಆಯೋಜಕರು ಮನವಿ ಮಾಡಿದ್ದಾರೆ. ಕೊಯಂಬತ್ತೂರಿನ ಈಶಾ ಯೋಗ ಕೇಂದ್ರದ ವತಿಯಿಂದ ಶಿವರಾತ್ರಿಯ ಹಿನ್ನೆಲೆಯಲ್ಲಿ ಇದೇ ಡಿ.7ರಿಂದ ಶ್ರೀ ಕೃಷ್ಣನ ನಗರಿ ಉಡುಪಿಯಿಂದ ಆದಿಯೋಗಿ ರಥ ಯಾತ್ರೆಗೆ ಚಾಲನೆ ದೊರಕಿದೆ. ಯಾತ್ರೆ ಫೆ.13ರಂದು ಕೊಯಂಬತ್ತೂರಿನ ಈಶಾ ಕೇಂದ್ರವನ್ನು ತಲುಪಲಿದ್ದು, ಒಟ್ಟು 1 ಸಾವಿರ ಕಿ.ಮೀ. ಅಂತರವನ್ನು 70 ದಿನಗಳ ಕಾಲ ಕ್ರಮಿಸಲಿದೆ. ಈ ಸಂದರ್ಭ ನೂರಕ್ಕೂ ಹೆಚ್ಚಿನ ಗ್ರಾಮಗಳನ್ನು ಹಾದು ಹೋಗಲಿದೆಯೆಂದು ಈಶಾ ಯೋಗ ಕೇಂದ್ರ್ರದ ಸ್ವಯಂ ಸೇವಕರಾದ ಎಂ.ಧನಂಜಯ್ ಸುದ್ದಿ ಗೋಷ್ಠಿಯಲ್ಲಿ ತಿಳಿಸಿದರು. :: ಮಡಿಕೇರಿಯಲ್ಲಿ ರಥ ಯಾತ್ರೆ :: ರಥ ಯಾತ್ರೆ ಪ್ರಸ್ತುತ ಪುತ್ತೂರನ್ನು ಹಾದು ಸುಳ್ಯದತ್ತ ಬರುತ್ತಿದ್ದು, ಡಿ.22ರಂದು ಸಂಜೆ 5 ಗಂಟೆಗೆ ಸಂಪಾಜೆ ಮಾರ್ಗವಾಗಿ ಮದೆನಾಡನ್ನು ಹಾದು ಮಡಿಕೇರಿಯನ್ನು ತಲುಪಲಿದೆ. ಬಳಿಕ ಜನರಲ್ ಕೆ.ಎಸ್.ತಿಮ್ಮಯ್ಯ ವೃತ್ತ, ಕೋಟೆ, ಮಹದೇವಪೇಟೆಯನ್ನು ಹಾದು ಚೌಕಿ ಮೂಲಕ ಸೋಮವಾರಪೇಟೆ ರಸ್ತೆಯಲ್ಲಿರುವ ಕಾಶೀಮಠವನ್ನು ತಲುಪಲಿದೆಯೆಂದು ಮಾಹಿತಿಯನ್ನಿತ್ತರು. ರಥವು ‘ಆದಿ ಯೋಗಿ’ಯ ಮೂರ್ತಿ, ಸದ್ಗುರುಗಳ ಪಾದುಕೆಯನ್ನು ಹೊಂದಿದ್ದು, ಮರದಿಂದ ನಿರ್ಮಿತ ರಥ ಸುಮಾರು 3 ಟನ್ ಭಾರವನ್ನು ಹೊಂದಿದೆ. ಇದನ್ನು ಎಳೆಯಲು 40 ಮಂದಿಯ ತಂಡವಿದೆಯಾದರು, ಇವರೊಂದಿಗೆ ರಥ ಹಾದು ಬರುವ ಪ್ರದೇಶಗಳ ಭಕ್ತಾದಿಗಳು ಕೈಜೋಡಿಸಬೇಕೆಂದು ಧನಂಜಯ್ ಮನವಿ ಮಾಡಿದರು. ಡಿ.23ರಂದು ರಥ ಯಾತ್ರೆ ಮಡಿಕೇರಿಯಿಂದ ಸುಂಟಿಕೊಪ್ಪ ಮಾರ್ಗವಾಗಿ ಕುಶಾಲನಗರ, ಕೆ.ಆರ್.ನಗರ, ಮೈಸೂರು, ಚಿಕ್ಕಬಳ್ಳಾಪುರ(ಸದ್ಗುರು ಸನ್ನಿಧಿ), ಹೊಸಕೋಟೆ, ಮಾಲೂರು, ರಾಯಕೊಟೆ, ಅವಿನಾಶಿ, ಕೊಯಂಬತ್ತೂರಿನ ಈಶಾ ಯೋಗಕೇಂದ್ರವನ್ನು ಫೆ.13ರಂದು ತಲುಪಲಿದೆಯೆಂದು ವಿವರಗಳನ್ನಿತ್ತರು. ಗೊಷ್ಠಿಯಲ್ಲಿ ಸ್ವಯಂ ಸೇವಕರಾದ ಜೆ. ಗಣೇಶ್ ಶೆಣೈ, ಅಗಸ್ತ್ಯ ಮಧುಕರ್, ಅಖಿಲ ನಾಗರಾಜ್, ರಂಜಿತ್ ಜಯರಾಂ ಉಪಸ್ಥಿತರಿದ್ದರು.











