ಮಡಿಕೇರಿ ಡಿ.19 NEWS DESK : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ದಕ್ಷಿಣ ಪ್ರಾಂತ ಸಮ್ಮೇಳನದ ದ್ವಿತೀಯ ದಿನವಾದ ಶುಕ್ರವಾರ ಸಂಜೆ, ನಗರದ ಮುಖ್ಯ ಬೀದಿಗಳಲ್ಲಿ ಸಮ್ಮೇಳನದ ಪ್ರತಿನಿಧಿಗಳ ಬೃಹತ್ ಶೋಭಾಯಾತ್ರೆ ನಡೆಯಿತು. ಎಬಿವಿಪಿ ದಕ್ಷಿಣ ಪ್ರಾಂ ಅಧ್ಯಕ್ಷ ಡಾ.ರವಿ ಮಂಡ್ಯ, ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಎಂ.ಈಶ್ವರ ಭಟ್ ಅವರ ನೇತೃತ್ವದಲ್ಲಿ ನಗರದ ಗೌಡ ಸಮಾಜದ ಸಮ್ಮೇಳನದ ಸಭಾಂಗಣದಿಂದ ನಗರದ ಮುಖ್ಯ ಬೀದಿಗಳಲ್ಲಿ ಭಾರತ ಮಾತೆ, ದೇವಿ ಶಾರದೆಯ ಪಟ ಚಿತ್ರ ಮತ್ತು ಸ್ವಾಮಿ ವಿವೇಕಾನಂದರ ಭಾವಚಿತ್ರದೊಂದಿಗೆ ಸಮ್ಮೇಳನದ ಪ್ರತಿನಿಧಿಗಳು, ಸಂಘಟನೆಯ ಪದಾಧಿಕಾರಿಗಳು ಶಿಸ್ತುಬದ್ಧವಾಗಿ ಮೆರವಣಿಗೆ ನಡೆಸಿದರು. ಸೇನಾಧಿಕಾರಿಗಳಿಗೆ ಗೌರವಾರ್ಪಣೆ- ಶೋಭಾಯಾತ್ರೆ ಹಾದು ಹೋಗುವ ಸಂದರ್ಭ ಸ್ಕ್ವಾಡರ್ನ್ ಲೀಡರ್ ಅಜ್ಜಮಾಡ ದೇವಯ್ಯ, ಮೇಜರ್ ಮಂಗೇರಿರ ಮುತ್ತಣ್ಣ, ಜನರಲ್ ತಿಮ್ಮಯ್ಯ ವೃತ್ತಗಳಲ್ಲಿ ಸೇನಾಧಿಕಾರಿಗಳಿಗೆ ಪುಷ್ಪ ನಮನ ಸಲ್ಲಿಸಲಾಯಿತು. ಶೋಭಾಯಾತ್ರೆಯಲ್ಲಿ ಎಬಿವಿಪಿ ದಕ್ಷಿಣ ಪ್ರಾಂತದ ಕಾರ್ಯದರ್ಶಿ ಗೋಪಿ ಅರವಿಂದ್, ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಮಂಧಾರ, ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ರಮೇಶ್ ಹೊಳ್ಳ ಸೇರಿದಂತೆ ಹಲ ಪ್ರಮುಖರು ಪಾಲ್ಗೊಂಡಿದ್ದರು.











