ಸೋಮವಾರಪೇಟೆ ಡಿ.19 NEWS DESK : ಮಾದಕ ವಸ್ತುಗಳು ದೇಶದ ಆಂತರಿಕ ಭಯೋತ್ಪಾದಕ ಎಂದು ಪತ್ರಿಕಾ ಭವನದ ಅಧ್ಯಕ್ಷ, ಪತ್ರಕರ್ತ ಎಸ್.ಮಹೇಶ್ ಹೇಳಿದರು. ಪರಿವರ್ತನಾ ಟ್ರಸ್ಟ್ ಹಾಗೂ ಹಿಂದೂ ಜಾಗರಣ ವೇದಿಕೆ ವತಿಯಿಂದ ರಾಜ್ಯಾದ್ಯಂತ ಸಂಚರಿಸುತ್ತಿರುವ ಮಾದಕ ವಸ್ತು ವ್ಯಸನ ಜನಜಾಗೃತಿ ರಥಯಾತ್ರೆ ಸೋಮವಾರಪೇಟೆಗೆ ಆಗಮಿಸಿದ ಸಂದರ್ಭ ಜೆ.ಸಿ.ವೇದಿಕೆ ಬಳಿ ಆಯೋಜಿಸಿದ ಜಾಗೃತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ದೇಶದಲ್ಲಿ ಬಂದೂಕು ಹಿಡಿದು, ಬಾಂಬ್ ಹಾಕಿ ಜನರ ಜೀವ ತೆಗೆಯತ್ತಿರುವ ಭಯೋತ್ಪಾದನೆ ಒಂದೆಡೆಯಾದರೆ ಯುವಕರಿಗೆ ಮಾದಕ ವಸ್ತುಗಳನ್ನು ನೀಡುವ ಮೂಲಕ ಅವರನ್ನು ಮಾದಕ ವ್ಯಸನಿಗಳನ್ನಾಗಿ ಮಾಡುವುದರೊಂದಿಗೆ ಮಾಡುವಸ್ತುಗಳನ್ನು ಕಳ್ಳಸಾಗಾಣಿಕೆ ಮಾಡಲು ಬಳಸಿಕೊಳ್ಳುತ್ತಿದ್ದಾರೆ ಎಂದರು. ರಾಜ್ಯದಲ್ಲಿ ಪ್ರಸಕ್ತ ವರ್ಷ ಮಾದಕವಸ್ತುಗಳಿಗೆ ಸಂಬಂಧಿಸಿದಂತೆ 5930 ಪ್ರಕರಣಗಳು ದಾಖಲಾಗಿದ್ದು, 77,99,12,94 ರೂ. ಮೌಲ್ಯದ 6073.069 ಕಿ.ಗ್ರಾಂ ಗಾಂಜಾ ಹಾಗೂ 116, 09, 81, 712 ರೂ.ಮೌಲ್ಯದ 1272.9376.ಕಿ.ಗ್ರಾಂ ಸಿಂಥೆಟಿಕ್ ವಶಪಡಿಸಿಕೊಂಡು 2898 ಮಂದಿಯನ್ನು ಬಂಧಿಸಿದ್ದಾರೆ. ಮಾದಕ ವಸ್ತು ಪ್ರಕರಣದಲ್ಲಿ ಕೊಡಗು ಜಿಲ್ಲೆಯು ಹೊರತಾಗಿಲ್ಲ ವರ್ಷ ಜಿಲ್ಲೆಯಲ್ಲಿ 130 ಪ್ರಕರಣ ದಾಖಲಾಗಿದ್ದು, 74 ಮಂದಿಯನ್ನು ಬಂಧಿಸಲಾಗಿದೆ. 2071800 ರೂ. ಮೌಲ್ಯದ 70.952ಕಿ. ಗ್ರಾಂ ಗಾಂಜಾ, 136000ಮೌಲ್ಯದ 0.39 ಕಿ.ಗ್ರಾಂ ಸಿಂಥೆಟಿಕ್ ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ ಅವರು ಸಂಬಂಧಿಸಿದ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪ್ರಮನಾಥ್ ಮಾತನಾಡಿ, ಇಂದು ಯುವಜನಾಂಗ ಮಾದಕ ವಸ್ತುಗಳಿಗೆ ಬಲಿಯಾಗುತ್ತಿರುವುದು ವಿಶಾದನೀಯವೆಂದರು. ವಿದ್ಯಾರ್ಥಿಗಳನ್ನು ಗುರಿಯಾಗಿರಿಸಿಕೊಂಡು ಅವರನ್ನು ಮಾದಕ ವ್ಯಸನಿಗಳನ್ನಾಗಿ ಮಾಡುತ್ತಿದ್ದಾರೆ. ಒಮ್ಮೆ ಅವರು ಈ ಚಟಕ್ಕೆ ಬಲಿಯಾದರೆ ಅದರಿಂದ ಹೊರಬರುವುದು ಕಷ್ಟಕರ ಇಂತಹ ವ್ಯಕ್ತಿಗಳು ಕೊಲೆ ಮಾಡಿರುವ ಉದಾಹರಣೆಯು ಇದೆ ಎಂದರು.ಮನೆಯಲ್ಲಿ ಪೋಷಕರು ಮಕ್ಕಳಬಗ್ಗೆ,ಶಾಲೆಯಲ್ಲಿ ಶಿಕ್ಷಕರು ವಿದ್ಯಾರ್ಥಿಗಳ ಬಗ್ಗೆ ಜಾಗೃತಿ ವಹಿಸಬೇಕಾಗಿದೆ ಎಂದರು. ಇದೇ ಸಂದರ್ಭ ಶಿಕ್ಷಕ ಸಂತೋಷಿರೇಮಠ ಮಾದಕ ವಸ್ತುಗಳ ವಿರುದ್ಧ ಪ್ರತಿಜ್ಞಾವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿ ಪರಿವರ್ತನಾ ಟ್ರಸ್ಟ್ ನ ಸಂದೇಶ, ಹಿಂದೂ ಜಾಗರಣವೇದಿಕೆಯ ಪ್ರಮುಖರುಗಳಾದ ಸುಭಾಷ್ ತಿಮ್ಮಯ್ಯ, ಬೋಜೇಗೌಡ, ಉಮೇಶ್, ಬಿ.ಜೆ.ದೀಪಕ್, ಸುನೀಲ್, ದೀಪಕ್ ಕಾಗಡಿಕಟ್ಟೆ ಹಾಗೂ ಮುಂತಾದವರು ಉಪಸ್ತಿತರಿದ್ದರು, ವಿವಿಧ ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.











