ವಿರಾಜಪೇಟೆ ಡಿ.19 NEWS DESK : ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕರವಸೂಲಿಗಾರರು, ಡಾಟಾ ಎಂಟ್ರಿ ಆಪರೇಟರ್, ಸ್ವಚ್ಛತಾಗಾರರು, ನೀರುಗಂಟಿಗಳು, ಜವಾನರನ್ನು ಸರಕಾರಿ ನೌಕರರೆಂದು ಘೋಷಿಸಬೇಕು. ಬೆಲೆ ಏರಿಕೆ ಆಧಾರದಲ್ಲಿ ಕನಿಷ್ಟ ವೇತನ ರೂ. 36,000 ನಿಗದಿ ಜಾರಿಗೊಳಿಸಬೇಕೆಂದು ಹಲವು ದಿನಗಳ ಬೇಡಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಡಿ.20 ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುತ್ತದೆ ಎಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಕೊಡಗು ಜಿಲ್ಲಾ ಸಮಿತಿಯ ಅಧ್ಯಕ್ಷ ಪಿ.ಆರ್ ಭರತ್ ಹೇಳಿದರು. ವಿರಾಜಪೇಟೆಯಲ್ಲಿ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿದ, ಭರತ್ ಅವರು, ಇಡೀ ರಾಜ್ಯದಲ್ಲಿ ಸುಮಾರು 63,000 ಮಂದಿ ಗ್ರಾಮ ಪಂಚಾಯಿತಿಯಲ್ಲಿ ವಿವಿಧ ಹುದ್ದೆಗಳಲ್ಲಿ ನೌಕರರಾಗಿ ಕಳೆದ ಹಲವಾರು ವರ್ಷಗಳಿಂದ ಕೆಲಸ ಮಾಡುತ್ತಾ ಬಂದಿದ್ದಾರೆ. ಕಡಿಮೆ ವೇತನದಲ್ಲಿ ದುಡಿಯುತ್ತಿರುವ ಇವರ ಹಲವಾರು ಪ್ರಮುಖವಾಗಿರುವ ಬೇಡಿಕೆಗಳನ್ನು ಪಡೆಯಲು ನಿರಂತರ ಹೋರಾಟ ಮಾಡುತ್ತ ಸರಕಾರಕ್ಕೆ ಮತ್ತು ಇಲಾಖೆಯ ಅಧಿಕಾರಿಗಳಿಗೆ ಒತ್ತಾಯಿಸುತ್ತಾ ಬರಲಾಗಿದೆ. ಇದುವರೆಗೂ ಸರಕಾರ ಪ್ರತಿಕ್ರಿಯೆ ನೀಡಿಲ್ಲ. ಆದ್ದರಿಂದ ನಮ್ಮ 17 ಪ್ರಮುಖ ಬೇಡಿಕೆಗಳನ್ನು ಪಡೆದುಕೊಳ್ಳಲು ಒತ್ತಾಯಿಸಬೇಕಾಗಿದೆ. ಕೇಂದ್ರ ಹಾಗೂ ರಾಜ್ಯ ಸರಕಾರದ ನೀತಿಯಿಂದಾಗಿ ದಿನದಿಂದ ದಿನಕ್ಕೆ ಬೆಲೆ ಏರಿಕೆ ಹೆಚ್ಚಾಗುತ್ತಿರುವುದರಿಂದ ದುಡಿಯುವ ವರ್ಗಕ್ಕೆ ಕುಟುಂಬವನ್ನು ನಡೆಸಿಕೊಂಡು ಹೋಗುವುದು ಕಷ್ಟವಾಗಿದೆ. ಇಂದಿನ ಶಿಕ್ಷಣದ ಖಾಸಗಿಕರಣದಿಂದ ಮಕ್ಕಳ ಶಿಕ್ಷಣ ಹೊರೆಯಾಗಿದೆ. ವೈದ್ಯಕೀಯ ಮತ್ತು ಆರೋಗ್ಯ ಕ್ಷೇತ್ರದ ಖಾಸಗೀಕರಣದಿಂದಾಗಿ ವೈದ್ಯಕೀಯ ಖರ್ಚು ವೆಚ್ಚ ಹೆಚ್ಚಾಗಿದೆ. ಸರಕಾರವು ತಾನು ನಿಗದಿಪಡಿಸಿರುವ ವರಮಾನವನ್ನು ಮಾನದಂಡವಾಗಿಟ್ಟುಕೊಂಡು ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದು ಪಡಿಸಲು ಹೊರಟಿರುವುದು ವಿಷಾದನೀಯ. ಆಹಾರದ ಹಕ್ಕಿನ ಅನುಸಾರವಾಗಿ ಗ್ರಾಮ ಪಂಚಾಯಿತಿ ನೌಕರರಿಗೆ ಬಿಪಿಎಲ್ ಪಡಿತರ ಚೀಟಿ ದೊರೆತಿದೆ. ಪಂಚಾಯಿತಿ ನೌಕರರಿಗೆ ನೀಡುತ್ತಿರುವ ಕನಿಷ್ಠ ವೇತನವು ಬದುಕುಳಿಯುವ ವೇತನವಾಗಿರುವುದರಿಂದ ಜೀವನ ನಿರ್ವಹಣೆಯ ವೇತನ ನೀಡುವವರಿಗೆ ಬಿಪಿಎಲ್ ಪಡಿತರ ಚೀಟಿ ರದ್ದುಪಡಿಸಬಾರದೆಂದು ಹೇಳಿದರು. ದಿನ ಕಳೆದಂತೆ ಗ್ರಾಮ ಪಂಚಾಯಿತಿಗಳಿಂದ ಹೆಚ್ಚಿನ ಸೇವೆಯನ್ನು ಸರಕಾರ ಹಲವಾರು ಯೋಜನೆಗಳನ್ನು ಪಂಚಾಯಿತಿ ಮೂಲಕ ನೀಡುತ್ತಿದೆ. ಇದರಿಂದ ಹೊರೆಯಾಗುತ್ತಿದೆ. ಕೂಡಲೇ ಎರಡನೇ ಡಾಟಾ ಎಂಟ್ರಿ ಆಪರೇಟರ್ ನೇಮಕಾತಿ ಆಗಬೇಕು ಆಗುವ ಮೊದಲು ಈಗ ಕೆಲಸ ನಿರ್ವಹಿಸುತ್ತಿರುವ ಡಿಇಓ ಗಳಿಗೆ ಅನುಮೋದನೆ ನೀಡಬೇಕೆಂದು ಡಿಸೆಂಬರ್ 20 ರಿಂದ ಬೆಂಗಳೂರಿನಲ್ಲಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಯಲಿದೆ. ಆದ್ದರಿಂದ ರಾಜ್ಯದ ಎಲ್ಲಾ ಪಂಚಾಯಿತಿ ನೌಕರರು ಸ್ವಚ್ಛ ವಾಹಿನಿ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಬೇಡಿಕೆಗಳನ್ನು ಪಡೆದುಕೊಳ್ಳಲು ಹೋರಾಟ ನಡೆಸಬೇಕು. ಗ್ರಾಮ ಪಂಚಾಯಿತಿಗಳಲ್ಲಿ ಖಾಲಿ ಇರುವ ಎಲ್ಲಾ ವಿಭಾಗದ ಹುದ್ದೆಗಳನ್ನು ತುಂಬಬೇಕು. ಬಿಲ್ ಕಲೆಕ್ಟರ್ ಮತ್ತು ಗುಮಾಸ್ತವೃಂದದಿಂದ ಗ್ರೇಡ್ ಟು ಕಾರ್ಯದರ್ಶಿ ಮತ್ತು ಲೆಕ್ಕ ಸಹಾಯಕ ಹುದ್ದೆಗಳಿಗೆ ನೇಮಕಗೊಂಡ ನೌಕರರಿಗೆ ಪರಿಗಣಿಸಿ ಹಳೆ ಪಿಂಚಣಿ ಜಾರಿ ಮಾಡಬೇಕು. ಎಲ್ಲಾ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮುಷ್ಕರ ನಡೆಯಲಿದೆ. ಸರಕಾರ ಸ್ಪಂದಿಸಿ ನೌಕರರ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲದಿದ್ದಲ್ಲಿ ತೀವ್ರತರದ ಪ್ರತಿಭಟನೆಯನ್ನು ನಡೆಸಲಾಗುತ್ತದೆ. ಈ ಸಂದರ್ಭ ಏನಾದರೂ ಹೆಚ್ಚುಕಮ್ಮಿ ಆದಲ್ಲಿ ಇದಕ್ಕೆ ಸರಕಾರವೇ ನೇರ ಹೊಣೆ. ಹಾಗಾಗಿ ಸರಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕು ಎಂದರು. ಈ ಸಂದರ್ಭ ಜಿಲ್ಲಾ ಪದಾಧಿಕಾರಿ ಹೆಚ್ ಬಿ ಹರೀಶ್, ಪ್ರದಾನ ಕಾರ್ಯದರ್ಶಿ ಮಧುಸೂದನ, ಸಹ ಕಾರ್ಯದರ್ಶಿಗಳಾದ ದಿಲೀಪ್, ವಿಂದ್ಯಾ, ಉಪಾಧ್ಯಕ್ಷ ಮಹಾದೇವ, ರಂಗಸ್ವಾಮಿ ಇನ್ನಿತರರು ಇದ್ದರು.











