ಮಡಿಕೇರಿ ಡಿ.19 NEWS DESK : ಕೊಡಗು ಜಿಲ್ಲೆಯ ಮರಗೋಡುವಿನಲ್ಲಿ ಹಿಂದೂ ರುದ್ರ ಭೂಮಿ ಸ್ಥಾಪನ ಸಮಿತಿ ಹಾಗೂ ಮರಗೋಡು ಗ್ರಾಮ ಪಂಚಾಯಿತಿಯ ಸಹಕಾರದೊಂದಿಗೆ ನಿರ್ಮಿಸಲಾದ ನೂತನ ಹಿಂದೂ ರುದ್ರಭೂಮಿಯನ್ನು ಅಧಿಕೃತವಾಗಿ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಲಾಗಿದೆ. ಸ್ಥಳೀಯ ಗ್ರಾಮಸ್ಥರು ಹಲವು ವರ್ಷಗಳಿಂದ ವ್ಯಕ್ತಪಡಿಸುತ್ತಿದ್ದ ಅಗತ್ಯ ಮತ್ತು ಕೋರಿಕೆಯ ಹಿನ್ನೆಲೆಯಲ್ಲಿ ಈ ಮಹತ್ವದ ಯೋಜನೆ ಕಾರ್ಯರೂಪಕ್ಕೆ ಬಂದಿದೆ. ಈವರೆಗೆ ಅಂತ್ಯಸಂಸ್ಕಾರ ನೆರವೇರಿಸಲು ಸಮರ್ಪಕ ಸ್ಥಳದ ಕೊರತೆಯಿಂದ ತೊಂದರೆ ಅನುಭವಿಸುತ್ತಿದ್ದ ಗ್ರಾಮಸ್ಥರಿಗೆ ಇದೀಗ ಶಾಶ್ವತ ಪರಿಹಾರ ದೊರೆತಿದೆ. ನೂತನ ರುದ್ರ ಭೂಮಿಯಲ್ಲಿ ಸಂಸ್ಕಾರ ವೇದಿಕೆ, ಮೂಲಭೂತ ಸೌಕರ್ಯ, ರಸ್ತೆ ಸಂಪರ್ಕ, ನೀರಿನ ವ್ಯವಸ್ಥೆ ಸೇರಿದಂತೆ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವ ಯೋಜನೆಯೂ ಇದೆ. ಕಾರ್ಯಕ್ರಮದಲ್ಲಿ ಮರಗೋಡುವು ಗ್ರಾ.ಪಂ ಅಧ್ಯಕ್ಷರು, ಸದಸ್ಯರು, ಹಿಂದೂ ರುದ್ರ ಭೂಮಿ ಸ್ಥಾಪನ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು, ಧಾರ್ಮಿಕ ಮುಖಂಡರು ಹಾಗೂ ಅಪಾರ ಸಂಖ್ಯೆಯ ಸಾರ್ವಜನಿಕರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಗಣ್ಯರು, ಗ್ರಾಮ ಪಂಚಾಯಿತಿ ಮತ್ತು ಸಮಿತಿಯ ಸಮನ್ವಯದಿಂದ ಸಮಾಜದ ಅಗತ್ಯಕ್ಕೆ ಸ್ಪಂದಿಸಿದ ಮಾದರಿ ಕಾರ್ಯವಾಗಿದೆ ಎಂದು ಶ್ಲಾಘಿಸಿದರು. ಗ್ರಾ.ಪಂ ಮಾರ್ಗದರ್ಶನ, ಸಾರ್ವಜನಿಕರ ಸಹಕಾರ ಹಾಗೂ ದಾನಿಗಳ ನೆರವಿನಿಂದ ರುದ್ರಭೂಮಿ ನಿರ್ಮಾಣ ಸಾಧ್ಯವಾಗಿದೆ ಎಂದು ಸಮಿತಿ ಸದಸ್ಯರು ತಿಳಿಸಿದರು. ನೂತನ ಹಿಂದೂ ರುದ್ರ ಭೂಮಿ ಆರಂಭವಾಗುವುದರಿಂದ ಮರಗೋಡು ಮತ್ತು ಕಟ್ಟೆಮಾಡು ಗ್ರಾಮಗಳ ಹಿಂದೂ ಸಮುದಾಯದ ಜನತೆಗೆ ಮಹತ್ತರ ಅನುಕೂಲವಾಗಲಿದೆ ಎಂಬ ವಿಶ್ವಾಸ ವ್ಯಕ್ತವಾಗಿದೆ.
ವರದಿ : ಅಶೋಕ್ ಮಡಿಕೇರಿ











