ಮಡಿಕೇರಿ ಡಿ.20 NEWS DESK : ಜಿಲ್ಲೆಯಾದ್ಯಂತ ಡಿ.21 ರಂದು ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವ ಸಂಬಂಧ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಎರಡನೇ ಸುತ್ತಿನ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ಪೂರ್ವ ಸಿದ್ದತೆ ಬಗ್ಗೆ ವಿಡಿಯೋ ಸಂವಾದ ಮೂಲಕ ಸಭೆ ನಡೆಸಿ, ಹಲವು ಸಲಹೆ ಸೂಚನೆ ನೀಡಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸತೀಶ್ ಕುಮಾರ್ ಅವರು ಮಾಹಿತಿ ನೀಡಿ ಜಿಲ್ಲೆಯಲ್ಲಿ 0 ತಿಂಗಳಿನಿಂದ 05 ವರ್ಷದ ಒಳಗಿನ ಒಟ್ಟು 32,702 ಮಕ್ಕಳಿದ್ದು, ನಗರ ವ್ಯಾಪ್ತಿಯಲ್ಲಿ 3,275 ಗ್ರಾಮೀಣ ವ್ಯಾಪ್ತಿಯಲ್ಲಿ 29,427 ಮಕ್ಕಳಿರುತ್ತಾರೆ. ಇವರಲ್ಲಿ ಸ್ಥಿರವಾಸಿತ ವಲಸೆ ಒಟ್ಟು 15,788 ಮಕ್ಕಳು, ವಲಸೆ ಕಾರ್ಮಿಕರ 4,112 ಮಕ್ಕಳು ಇದ್ದಾರೆ ಎಂದರು. ಜಿಲ್ಲೆಯಲ್ಲಿ ಒಟ್ಟು 470 ಬೂತ್, 32 ಸಂಚಾರಿ ಬೂತ್, ಒಂದು ಸಂಚಾರಿ ಬೂತ್‍ನ್ನು ಮಾಡಲಾಗಿದೆ. ಬೂತ್‍ಗಳಲ್ಲಿ ಲಸಿಕೆ ನೀಡಲು 1,946 ಲಸಿಕೆದಾರರು, 85 ಮೇಲ್ವಿಚಾರಕರು 973 ಮನೆ ಭೇಟಿ ನೀಡುವ ತಂಡವನ್ನು ರಚಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 1,36,214 ಮನೆ ಗುರುತಿಸಲಾಗಿದೆ. ಈ ಮನೆಗಳಿಗೆ ಭೇಟಿ ನೀಡಿ ಬಿಟ್ಟು ಹೋಗಿರುವ ಮಕ್ಕಳಿಗೆ ಲಸಿಕೆ ನೀಡಲಾಗುವುದು ಎಂದು ಮಾಹಿತಿ ನೀಡಿದರು. ಶಿಕ್ಷಣ ಇಲಾಖೆಯಿಂದ ಪ್ರಾರ್ಥನೆ ಸಮಯದಲ್ಲಿ ತಮ್ಮ ಸಮೀಪದ ಮನೆಯಲ್ಲಿ 03 ತಿಂಗಳಿಂದ 06 ವರ್ಷದ ಒಳಗಿನ ಮಕ್ಕಳಿರುವ ಮನೆಗಳಿಗೆ ಪೋಲಿಯೋ ಲಸಿಕೆ ಹಾಕಿಸಲು ತಿಳಿಸುವುದು, ಹಾಗೂ ಮಕ್ಕಳ ಮೂಲಕ ನಗರ ಪ್ರದೇಶದಲ್ಲಿ ಜಾಥ ನಡೆಸಲು ತಿಳಿಸಲಾಗಿದೆ. ಬೂತ್ ಮಾಡಿರುವ ಶಾಲೆಯನ್ನು ಬೆಳಿಗ್ಗೆ 8 ಗಂಟೆಗೆ ತೆರೆದು ಲಸಿಕೆ ನೀಡಲು ತಿಳಿಸಲಾಗಿದೆ ಎಂದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಅಂಗನವಾಡಿಯಲ್ಲಿರುವ ಮಕ್ಕಳು ಹಾಗೂ ಎಲ್‍ಕೆಜಿ ಹಾಗೂ ಯುಕೆಜಿ ಗಳಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಲಸಿಕೆ ಹಾಕಿಸಲು ಪೋಷಕರಿಗೆ ತಿಳಿಸಲು ತಿಳಿಸಲಾದೆ ಎಂದು ವಿವರಿಸಿದರು. ಪ್ರವಾಸೋದ್ಯಮ ಇಲಾಖೆಯು ಡಿಸೆಂಬರ್ 21 ರಂದು ಭಾನುವಾರ ರಜಾದಿನ ಇರುವುದರಿಂದ ಹೋಂಸ್ಟೇ, ಹೋಟೆಲ್, ರೆಸಾರ್ಟ್ ಗಳಿಗೆ ಬರುವ ಪ್ರವಾಸಿಗರಿಗೆ ತಮ್ಮೊಂದಿಗೆ 3 ತಿಂಗಳಿಂದ 05 ವರ್ಷದ ಒಳಗಿನ ಮಕ್ಕಳು ಕಂಡುಬಂದಲ್ಲಿ ಲಸಿಕೆ ಹಾಕಿಸಿಕೊಳ್ಳಲು ಸೂಚಿಸಲು ತಿಳಿಸಲಾಯಿತು. ಪ್ರವಾಸಿ ತಾಣಗಳಲ್ಲಿ ಸಂಚಾರಿ ಬೂತುಗಳನ್ನು ತೆರೆಯಲಾಗಿದ್ದು, ಈ ಬೂತ್‍ಗಳಲ್ಲಿ ಮಕ್ಕಳಿಗೆ ಲಸಿಕೆ ಹಾಕಿಸಲು ಕೋರಲಾಗಿದೆ ಎಂದು ಮಾಹಿತಿ ನೀಡಿದರು. ಕಾಫಿ ಕುಯ್ಲು ಮಾಡುವ ಸಮಯವಾಗಿರುವುದರಿಂದ ತೋಟಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರು ಬರುವುದರಿಂದ ಎಲ್ಲಾ ತೋಟ ಮಾಲೀಕರು ತಮ್ಮ ಲೈನ್ ಮನೆಗಳಲ್ಲಿರುವ ಸೊನ್ನೆಯಿಂದ ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಲಸಿಕೆ ಹಾಕಿಸಬೇಕಿದೆ. ಈ ಬಗ್ಗೆ ಬೆಳೆಗಾರರ ಸಂಘದ ಅಧ್ಯಕ್ಷರಿಗೆ ಪತ್ರ ಬರೆಯಲಾಗಿದೆ. ತಮ್ಮ ಮನೆಗೆ ಬರುವ ಅರೋಗ್ಯ ಕಾರ್ಯಕರ್ತರಿಗೆ ತಮ್ಮ ಲೈನ್ ಮನೆಯಲ್ಲಿರುವ 0 ಯಿಂದ 05 ವರ್ಷದೊಳಗಿನ ಮಕ್ಕಳಿಗೆ ನೀಡಿರುವ ಬಗ್ಗೆ ಮಾಹಿತಿಯನ್ನು ನೀಡ ಬೇಕಾಗಿದೆ ಎಂದು ವಿವರಿಸಿದರು. ಜಿಲ್ಲಾ ಸಾರಿಗೆ ಅಧಿಕಾರಿಗಳಿಂದ ಈ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಸುಮಾರು 85 ವಾಹನಗಳ ಅವಶ್ಯಕತೆ ಇದ್ದು, ಈ ದಿನದಂದು ವಾಹನ ಒದಗಿಸಿಕೊಡಲು ತಿಳಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಸಾರಿಗೆ ಅಧಿಕಾರಿಗಳು, 55 ವಾಹನ ಒದಗಿಸಿದ್ದಾರೆ ಎಂದು ಡಾ.ಸತೀಶ್ ಕುಮಾರ್ ಅವರು ಹೇಳಿದರು. ರಕ್ಷಣಾ ಇಲಾಖೆಯಿಂದ ಪ್ರವಾಸೋದ್ಯಮ ಸ್ಥಳಗಳಲ್ಲಿ ಸಂಚಾರಿ ಬೂತ್ ಗಳಿರುವ ಕಡೆ ಮತ್ತು ಜಿಲ್ಲೆಗೆ ಪ್ರವೇಶ ಒದಗಿಸುವ ಚೆಕ್ ಪೋಸ್ಟ್‍ಗಳಲ್ಲಿ ಸಂಚಾರಿ ಘಟಕ ತೆರೆಯಲಾಗಿದ್ದು, ಈ ಸ್ಥಳದಲ್ಲಿ 03 ತಿಂಗಳಿಂದ 5 ವರ್ಷದೊಳಗಿನ ಮಕ್ಕಳು ಕಂಡು ಬಂದಲ್ಲಿ ಲಸಿಕೆ ಹಾಕಿಸಲು ಸಹಕರಿಸುವಂತೆ ಕೋರಲಾಗಿದೆ ಎಂದು ಹೇಳಿದರು. ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ಸಂಚಾರಿ ಬೂತ್ ತೆರೆಯಲು ಸ್ಥಳಾವಕಾಶ ಹಾಗೂ ಮೂಲಭೂತ ಸೌಕರ್ಯ ಒದಗಿಸಲು ಕೆಎಸ್‍ಆರ್‍ಟಿಸಿ ಬಸ್ ಘಟಕ ವ್ಯವಸ್ಥಾಪಕರಿಗೆ ಸೂಚಿಸಿದರು. ನಗರ ಅಭಿವೃದ್ಧಿ ಇಲಾಖೆ ಹಾಗೂ ಪಂಚಾಯತ್ ರಾಜ್ ಇಲಾಖೆಯವರು ಪ್ರಚಾರ ನಡೆಸಲು ತಮ್ಮ ಗ್ರಾ.ಪಂ.ನಲ್ಲಿ ಇರುವ ಕಸದ ವಾಹನದ ಮೈಕ್ ಮೂಲಕ ರೇಡಿಯೋ ಜಂಗಲ್ ಗಳನ್ನು ನೀಡಿ ಪ್ರಚಾರ ಮಾಡಲಾಗುತ್ತಿದೆ ಎಂದರು. ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯ ಸಮನ್ವಯ ಅಧಿಕಾರಿಗಳಿಗೆ ಹಾಡಿಗಳಲ್ಲಿ ಇರುವ ಜನರು ಕಳೆದ ಸಾಲಿನಲ್ಲಿ ಸರಿಯಾಗಿ ಲಸಿಕೆಯನ್ನು ಹಾಕಿಸಿಕೊಳ್ಳದೆ ಇರುವುದು ಕಂಡುಬಂದಿದ್ದು, ಈ ಬಗ್ಗೆ ಹಾಡಿಯಲ್ಲಿ ಕಂಡುಬರುವ ಎಲ್ಲಾ ಮಕ್ಕಳಿಗೂ ಕಡ್ಡಾಯವಾಗಿ ಲಸಿಕೆಯನ್ನು ಹಾಕಿಸುವಂತೆ ಸೂಚಿಸಿದರು. ಪೋಷಕರು ತೋಟ ಕೆಲಸಕ್ಕೆ ಹೋಗುವ ಸಮಯವಾಗಿರುವುದರಿಂದ ಅವರ ಮಕ್ಕಳಿಗೆ ಮುಂಚಿತವಾಗಿ ಲಸಿಕೆ ಹಾಕಿಸಲು ತಿಳಿಸಲಾಗಿದೆ.ಎಲ್ಲಾ ಇಲಾಖೆಯವರು ಕಡ್ಡಾಯವಾಗಿ ಆರೋಗ್ಯ ಇಲಾಖೆಗೆ ಸಹಕಾರ ನೀಡುವಂತೆ ಕೋರಲಾಗಿದ್ದು, ತೋಟಗಳಲ್ಲಿ ಲೈನ್‍ಮನೆಗಳಲ್ಲಿ ವಾಸವಾಗಿರುವ ವಲಸೆ ಕಾರ್ಮಿಕರು, ಇಟ್ಟಿಗೆಗೂಡು ಕಾರ್ಮಿಕರಾಗಿ ಬಂದಿರುವ ಕಾರ್ಮಿಕರು, ಜಿಲ್ಲೆಯ ಹಲವು ಕಡೆಗಳಲ್ಲಿ ಕಟ್ಟಡ ಕಾಮಗಾರಿಗಳು ನಡೆಯುತ್ತಿದ್ದು, ಈ ಕಾಮಗಾರಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಾರ್ಮಿಕರು, ಜಿಲ್ಲೆಯ ಕೆಲವು ಭಾಗಗಳಲ್ಲಿ ರಸ್ತೆ ಡಾಮರೀಕರಣ ನಡೆಯುತ್ತಿದ್ದು, ಇಲ್ಲಿ ಕಂಡು ಬರುವ ಮಕ್ಕಳನ್ನು ಗುರುತಿಸಿ ಲಸಿಕೆಯನ್ನು ಹಾಕಿಸಬೇಕಾಗಿರುತ್ತದೆ. ಜಿಲ್ಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವುದರಿಂದ, ಮಕ್ಕಳಿಗೆ ಕಡ್ಡಾಯ ಲಸಿಕೆಯನ್ನು ಹಾಕಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್ ಅವರು ಮಾಹಿತಿ ನೀಡಿದ್ದಾರೆ.










