ಮಡಿಕೇರಿ ಡಿ.20 NEWS DESK : ಕುಶಾಲನಗರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಆಡಳಿತ ಮಂಡಳಿಗೆ ನಾಮ ನಿರ್ದೇಶಿತ ಸದಸ್ಯರಾಗಿ ಕುಡೆಕಲ್ ಗಣೇಶ್ ಹಾಗೂ ಚೈತನ್ಯ ಚಂದ್ರಮೋಹನ್ ಅವರನ್ನು ನೇಮಿಸಲಾಗಿದೆ. ಕುಶಾಲನಗರ ಪತ್ರಿಕಾ ಭವನದಲ್ಲಿ ಅಧ್ಯಕ್ಷರಾದ ಎಂ ಎನ್ ಚಂದ್ರಮೋಹನ್ ಅಧ್ಯಕ್ಷತೆಯಲ್ಲಿ ನಡೆದ ಪ್ರಥಮ ಆಡಳಿತ ಮಂಡಳಿಯ ಸಭೆಯಲ್ಲಿ ಆಯ್ಕೆ ನಡೆಯಿತು. ವಿವಿಧ ಸಮಿತಿಗಳ ಸಂಚಾಲಕರ ನೇಮಕ ಮಾಡಲಾಯಿತು. ಕ್ಷೇಮಾಭಿವೃದ್ಧಿ ಸಮಿತಿಯ ಸಂಚಾಲಕರಾಗಿ ಕೆ.ಕೆ.ನಾಗರಾಜ ಶೆಟ್ಟಿ, ಸಾಂಸ್ಕ್ರತಿಕ ಸಮಿತಿಯ ಸಂಚಾಲಕರಾಗಿ ಜಯಪ್ರಕಾಶ್,
ಕ್ರೀಡಾ ಸಮಿತಿಯ ಸಂಚಾಲಕರಾಗಿ ಕೆ.ಜೆ.ಶಿವರಾಜ್, ಪತ್ರಿಕಾ ಭವನದ ನಿವೇಶನ ಹಾಗೂ ಕಟ್ಟಡ ಸಮಿತಿಯ ಸಂಚಾಲಕರಾಗಿ ಎಂ.ಎನ್.ಚಂದ್ರಮೋಹನ್ ಅವರ ನೇತೃತ್ವದಲ್ಲಿ ಸಮಿತಿ ರಚಿಸಲು ಸಭೆ ನಿರ್ಣಯ ಕೈಗೊಂಡಿದೆ. ಮುಂಬರುವ ಜನವರಿ 2 ನೇ ತಾರೀಖಿನಂದು ಕುಶಾಲನಗರದಲ್ಲಿ ವಾಸವಿ ಸಪ್ತಾಹ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಡೆಯುವ ಮಾದಕ ವಸ್ತುಗಳ ಬಗ್ಗೆ ಜಾಗೃತಿ ಅಭಿಯಾನ ಮತ್ತು ಅಪರಾಧ ತಡೆಗಟ್ಟುವ ಕುರಿತು ಪೊಲೀಸ್ ಇಲಾಖೆಯೊಂದಿಗೆ ನಡೆಯುವ ಕಾರ್ಯಕ್ರಮಕ್ಕೆ ಸಂಘದ ಸಹಯೋಗ ನೀಡುವುದು ಮತ್ತು ಆಗಸ್ಟ್ ತಿಂಗಳವರೆಗೆ ತಿಂಗಳಿಗೊಂದು ನಿರಂತರ ಕಾರ್ಯಕ್ರಮ ಮಾಡುವಂತೆ ಆಡಳಿತ ಮಂಡಳಿಯ ಪದಾಧಿಕಾರಿಗಳಿಗೆ ಜವಾಬ್ದಾರಿ ನೀಡಲಾಯಿತು. ಪ್ರಧಾನ ಕಾರ್ಯದರ್ಶಿ ಹೆಚ್ ಜೆ ಶಿವರಾಜ್, ಉಪಾಧ್ಯಕ್ಷ ಮಹಮ್ಮದ್ ಮುಸ್ತಾಫಾ, ಕಾರ್ಯದರ್ಶಿ ಕೆ ಕೆ ನಾಗರಾಜ ಶೆಟ್ಟಿ, ನಿರ್ದೇಶಕ ರಘು ಹೆಬ್ಬಾಲೆ ಇದ್ದರು.











