ಮಡಿಕೇರಿ ಡಿ.20 NEWS DESK : ಡ್ರಗ್ಸ್ ಮುಕ್ತ ಕರ್ನಾಟಕ ಅಭಿಯಾನದ ಅಂಗವಾಗಿ ಮೈಸೂರಿನಿಂದ ಆರಂಭಗೊಂಡ ರಥಯಾತ್ರೆ ಮಡಿಕೇರಿಗೆ ಆಗಮಿಸಿತು. ಗೌಡ ಸಮಾಜ, ಜೂನಿಯರ್ ಕಾಲೇಜು ಹಾಗೂ ಸಂತ ಮೈಕಲರ ಶಾಲೆಗೆ ರಥಯಾತ್ರೆ ತೆರಳಿ ಅಲ್ಲಿ ವಿದ್ಯಾರ್ಥಿಗಳಲ್ಲಿ ಮಾದಕ ವಸ್ತುಗಳಿಂದಾಗುವ ಅಪಾಯ, ದೇಶದ ಮೇಲಾಗುವ ಪರಿಣಾಮದ ಬಗ್ಗೆ ಜಾಗೃತಿ ಮೂಡಿಸಲಾಯಿತು. ನಗರದ ಜೂನಿಯರ್ ಕಾಲೇಜಿನಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಹಿಳಾ ಕಾಲೇಜು, ರಾಜರಾಜೇಶ್ವರಿ ಶಾಲೆಯ ವಿದ್ಯಾರ್ಥಿಗಳು, ವಿವಿಧ ಶಾಲೆಯ ಶಿಕ್ಷಕರು ಪಾಲ್ಗೊಂಡಿದ್ದರು. ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ಕಿರು ನಾಟಕದ ಮೂಲಕ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದರು. ಗಾಂಜಾ ಸೇವನೆ ಮಾಡುವವರು ಮಾನಸಿಕ ಸ್ಥಿಮಿತ ಕಳೆದುಕೊಂಡು ಜೀವನ ಹಾಳುಮಾಡಿಕೊಳ್ಳುವುದು, ಕುಡಿತದ ಚಟದಿಂದ ಕುಟುಂಬ ನಾಶವಾಗುವುದು, ತಂಬಾಕು ಸೇವನೆಯಿಂದ ಶ್ವಾಸಕೋಶ ಮತ್ತು ಬಾಯಿಯ ಕ್ಯಾನ್ಸರ್ ಉಂಟಾಗಿ ಬದುಕು ಸರ್ವನಾಶವಾಗುವುದನ್ನು ನಾಟಕದ ಮೂಲಕ ಪ್ರಸ್ತುತಪಡಿಸಲಾಯಿತು. ಇಂತಹ ಚಟಕ್ಕೆ ಒಳಗಾದವರಿಗೆ ಮಡಿಕೇರಿಯಲ್ಲಿರುವ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಕೊಠಡಿ ಸಂಖ್ಯೆ 11ರ ಮನೋ ವೈದ್ಯಕೀಯ ವಿಭಾಗದಲ್ಲಿ ಸೂಕ್ತ ಚಿಕಿತ್ಸೆ ಕೊಡಿಸಬಹುದೆಂದು ವೈದ್ಯರು ತಿಳಿಸಿದರು. ಪರಿವರ್ತನಾ ಟ್ರಸ್ಟ್ ಪ್ರಮುಖರಾದ ಸಂದೇಶ್ ನೇತೃತ್ವದಲ್ಲಿ ಇದೇ ಮೊದಲ ಬಾರಿಕೆ ಹಮ್ಮಿಕೊಂಡಿರುವ ಡ್ರಕ್ಸ್‍ಮುಕ್ತ ಕರ್ನಾಟಕ ಅಭಿಯಾನವು 45 ದಿನಗಳ ಕಾಲ ನಡೆಯಲಿದೆ. ಮಡಿಕೇರಿಯಿಂದ ಸಂಪಾಜೆ, ಪೆರಾಜೆ, ಅರಂತೋಡು ಮೂಲಕ ಸುಳ್ಯಕ್ಕೆ ರಥಯಾತ್ರೆ ಸಾಗಲಿದೆ. ಜನವರಿ 19 ರಂದು ಬೆಂಗಳೂರಿನಲ್ಲಿ ಬೃಹತ್ ಸಮಾರೋಪ ಸಮಾರಂಭ ಆಯೋಜಿಸಲಾಗಿದೆ ಎಂದು ತಿಳಿಸಿದರು. ಇದೇ ಸಂದರ್ಭ ಡ್ರಗ್ಸ್ ಮುಕ್ತ ಕರ್ನಾಟಕಕ್ಕೆ ಪಣತೊಡುವುದಾಗಿ ವಿದ್ಯಾರ್ಥಿಗಳು, ಶಿಕ್ಷಕರು ಸಂಕಲ್ಪ ಮಾಡಿದರು. ಪರಿವರ್ತನಾ ಟ್ರಸ್ಟ್‌ನ ಅಜಿತ್ ಕುಕ್ಕೆರ, ಮಹೇಶ್, ಧನಂಜಯ ಅಗೋಳಿಕಜೆ, ಕುಮಾರ್, ಬಾಲಕೃಷ್ಣ ರೈ, ಚಂದ್ರಶೇಖರ್, ಭವನ್, ಸತೀಶ್, ಪದವಿ ಕಾಲೇಜಿನ ಪ್ರಾಂಶುಪಾಲರಾದ ವೆಂಕಟೇಶ್, ಮಹಿಳಾ ಕಾಲೇಜು ಪ್ರಾಂಶುಪಾಲೆ ನಿರ್ಮಲ ಸೇರಿದಂತೆ ಮತ್ತಿತರರು ಇದ್ದರು.











