ಮಡಿಕೇರಿ ಡಿ.20 NEWS DESK : ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣ ಮತ್ತು ಮೊಬೈಲ್ ಬಳಕೆಯತ್ತ ಹೆಚ್ಚಿನ ಆಸಕ್ತಿ ವಹಿಸುತ್ತಿದ್ದು, ಶೈಕ್ಷಣಿಕವಾಗಿ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜೆಂಡರ್ ಸ್ಪೆಷಲಿಸ್ಟ್ ಕೇಶಿನಿ ಎಸ್.ಆರ್. ಕಳವಳ ವ್ಯಕ್ತಪಡಿಸಿದ್ದಾರೆ. ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಕೂಡಿಗೆ ಕ್ರೀಡಾ ಶಾಲೆಯ ವಿದ್ಯಾರ್ಥಿಗಳಿಗೆ ಆಯೋಜಿತ ‘ಡಿಜಿಟಲ್ ಸಾಕ್ಷರತೆ’ ಕುರಿತು ಮಾಹಿತಿ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ವಿದ್ಯಾರ್ಥಿಗಳು ಶಿಕ್ಷಣದತ್ತ ಹೆಚ್ಚಿನ ಕಾಳಜಿ ತೋರುವ ಮೂಲಕ ತಮ್ಮನ್ನು ತಾವು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ದೈಹಿಕವಾಗಿ ಸದೃಢಗೊಳಿಸಿಕೊಂಡು ಸತ್ಪ್ರಜೆಗಳಾಗಿ ರೂಪುಗೊಳ್ಳುವಂತೆ ಕರೆ ನೀಡಿದರು. ಪೊಲೀಸ್ ಇಲಾಖೆಯ ಮಕ್ಕಳ ವಿಶೇಷ ಘಟಕದ ಪ್ರಮುಖರಾದ ಸುಮತಿ ಅವರು ಕಾರ್ಯಕ್ರಮ ಉದ್ಘಾಟಿಸಿ, ವಿದ್ಯಾರ್ಥಿಗಳು ಸರ್ಕಾರದ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ಸಾಧನೆ ಮಾಡುವಂತೆ ಸಲಹೆ ನೀಡಿದರು. ಇತ್ತೀಚಿನ ದಿನಗಳಲ್ಲಿ ಮಕ್ಕಳ ಮೇಲಿನ ಲೈಂಗಿಕ ಅಪರಾಧಗಳು ಹೆಚ್ಚುತಿದೆ. ಮಕ್ಕಳು ಯಾವುದೇ ದುಶ್ಚಟಗಳಿಗೆ ಒಳಗಾಗದೆ ಉತ್ತಮ ಹಾದಿಯಲ್ಲಿ ಮುನ್ನಡೆಯಬೇಕು. ಮೊಬೈಲ್ ಗೀಳಿಗೆ ಒಳಗಾಗದೆ ಶಿಕ್ಷಣದಲ್ಲಿ ತಮ್ಮನ್ನು ತೊಡಗಿಸಿಕೊಂಡು, ನಿರಂತರ ಪರಿಶ್ರಮದ ಮೂಲಕ ಸಾಧನೆ ಮೆಟ್ಟಿಲುಗಳನ್ನೇರಬೇಕೆಂದು ಕರೆ ನೀಡಿದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಪ್ತ ಸಮಾಲೋಚಕರಾದ ಯಮುನಾ ಮಾತನಾಡಿ, ಹರಿದರೆಯದವರು ಸ್ವಚ್ಛತೆಯ ಬಗ್ಗೆ ಕಾಳಜಿ ವಹಿಸಬೇಕಾಗಿರುವ ಬಗ್ಗೆ, ಸಾಂಕ್ರಮಿಕ ರೋಗಗಳ ಬಗ್ಗೆ ಮಾಹಿತಿ ನೀಡಿದರು.ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಮುರಳಿ, ಕುಶಾಲನಗರದ ಸಮುದಾಯ ಆರೋಗ್ಯ ಇಲಾಖೆಯ ಶ್ರೀಲತಾ ಹಾಗೂ ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.












