ಮಡಿಕೇರಿ ಡಿ.20 NEWS DESK : ರಾಜ್ಯದ ಶೈಕ್ಷಣಿಕ ಸ್ಥಿತಿಗತಿಗಳನ್ನು ಸುಧಾರಿಸುವುದು ಸೇರಿದಂತೆ ಪ್ರಮುಖ ನಾಲ್ಕು ನಿರ್ಣಯಗಳನ್ನು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತಿನ ದಕ್ಷಿಣ ಪ್ರಾಂತ ಸಮ್ಮೇಳನದಲ್ಲಿ ಕೈಗೊಳ್ಳಲಾಗಿದ್ದು, ಇವುಗಳನ್ನು ರಾಜ್ಯ ಸರ್ಕಾರದ ಗಮನಕ್ಕೆ ತರಲಾಗುವುದೆಂದು ಎಬಿವಿಪಿ ದಕ್ಷಿಣ ಪ್ರಾಂತ ಕಾರ್ಯದರ್ಶಿ ಗೋಪಿ ರಂಗನಾಥ್ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಕಾಲೇಜುಗಳಲ್ಲಿನ ಉಪನ್ಯಾಸಕರ ಕೊರತೆ, ನೂತನ ವಿಶ್ವ ವಿದ್ಯಾನಿಲಯಗಳಿಗೆ ಅಗತ್ಯ ಅನುದಾನ ದೊರಕದಿರುವ ಅಂಶಗಳ ಬಗ್ಗೆಯೂ ಸಮ್ಮೇಳನದಲ್ಲಿ ವಿಸ್ತೃತವಾಗಿ ಚರ್ಚಿಸಿ ನಿರ್ಣಯವನ್ನು ಕೈಗೊಳ್ಳಲಾಗಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯನ್ನು ಒಳಗೊಂಡ ನಿರ್ಣಯಗಳನ್ನು ಕಾರ್ಯಗತಗೊಳಿಸುವಂತೆ ಸರ್ಕಾರವನ್ನು ಕೋರಲಾಗುತ್ತದೆಂದು ತಿಳಿಸಿದರು. ಸರ್ಕಾರಿ ಇಲಾಖೆಗಳಲ್ಲಿನ ಖಾಲಿ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಿಕೊಳ್ಳುವಂತೆ, ಶಿಕ್ಷಣದಲ್ಲಿ ಕೃತಕ ಬುದ್ಧಿಮತ್ತೆಯ ನೈತಿಕ ಹಾಗೂ ನ್ಯಾಯಯುತ ಸಂಯೋಜನೆಗಳ ಕುರಿತಾಗಿಯು ನಿರ್ಣಯಗಳನ್ನು ಕೈಗೊಂಡಿರುವುದಾಗಿ ಮಾಹಿತಿಯನ್ನಿತ್ತರು. :: ಯಶಸ್ವಿ ಸಮ್ಮೇಳನ :: ಇದೇ ಡಿ.17ರಿಂದ ಮೂರು ದಿನಗಳ ಕಾಲ ಮಡಿಕೇರಿಯಲ್ಲಿ ನಡೆದ ಎಬಿವಿಪಿ ಸಮ್ಮೇಳನದಲ್ಲಿ ಎಬಿವಿಪಿಯ 9 ಸಂಘಟನಾತ್ಮಕ ವಿಭಾಗಗಳಿಂದ 400 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಮತ್ತು ಶಿಕ್ಷಖರು ಪಾಲ್ಗೊಂಡು, ಸಮ್ಮೇಳನದ ವಿವಿಧ ಗೋಷ್ಠಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಸಮ್ಮೇಳನದ ಯಶಸ್ಸಿಗೆ ಸಹಕರಿಸಿರುವುದಾಗಿ ತಿಳಿಸಿದರು. ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಎಂ.ಈಶ್ವರ ಭಟ್, ಪ್ರಧಾನ ಕಾರ್ಯದರ್ಶಿ ರಮೇಶ್ ಹೊಳ್ಳ, ಸಂಘಟನಾ ಕಾರ್ಯದರ್ಶಿ ಶಿವಕುಮಾರ್, ಬಸವೇಶ್ ಕೋರಿ, ಪ್ರಾಂತ ಸಂಘಟನಾ ಕಾರ್ಯದರ್ಶಿ ಗಂಗಾಧರ ಅಂಜಿಗಿ ಅವರ ಸಹಕಾರದಿಂದ ಸಮ್ಮೇಳನ ಯಶಸ್ವಿಯಾಗಿದೆಯೆಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಎಬಿವಿಪಿ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಹೆಚ್.ಎಂ.ಪವನ್, ಜಿಲ್ಲಾ ಸಂಚಾಲಕರಾದ ಟಿ.ಡಿ.ಗಂಧರ್ವ, ಪ್ರಾಂತ ಕಾರ್ಯಕಾರಿ ಸಮಿತಿ ಸದಸ್ಯರಾದ ಕೌಶಲ್ಯ ಉಪಸ್ಥಿತರಿದ್ದರು.










