ಮಡಿಕೇರಿ ಡಿ.22 NEWS DESK : ಕೊಡಗು ಜಿಲ್ಲೆಯಾದ್ಯಂತ 5 ವರ್ಷದೊಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೊ ಲಸಿಕೆ ನೀಡುವ ಕಾರ್ಯಕ್ರಮ ನಡೆಯಿತು. ಗೋಣಿಕೊಪ್ಪದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಗುವಿಗೆ ಪೋಲಿಯೊ ಲಸಿಕೆ ನೀಡುವ ಮೂಲಕ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಎ.ಎಸ್.ಪೊನ್ನಣ್ಣ ಅವರು ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಕಡ್ಡಾಯವಾಗಿ ಪೋಲಿಯೊ ಲಸಿಕೆ ಹಾಕಿಸುವಂತೆ ಪೋಷಕರಲ್ಲಿ ಮನವಿ ಮಾಡಿದರು. ಜಿಲ್ಲೆಯಲ್ಲಿ ವಲಸಿಗ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿದ್ದು ಐದು ವರ್ಷದೊಳಗಿನ ಮಕ್ಕಳು ಪೋಲಿಯೊ ಲಸಿಕೆಯಿಂದ ಬಿಟ್ಟುಹೋಗದಂತೆ ಎಚ್ಚರ ವಹಿಸಬೇಕು ಎಂದು ಸಲಹೆ ಮಾಡಿದರು. ಪ್ರವಾಸಿಗರು ಸಹ ಕೊಡಗು ಜಿಲ್ಲೆಗೆ ಭೇಟಿ ನೀಡುತ್ತಿದ್ದು, ಪ್ರವಾಸಿ ಕೇಂದ್ರಗಳು ಸೇರಿದಂತೆ ಎಲ್ಲೆಡೆ ಐದು ವರ್ಷದೊಳಿನ ಮಕ್ಕಳಿಗೆ ಲಸಿಕೆ ನೀಡುವಂತೆ ಎ.ಎಸ್.ಪೊನ್ನಣ್ಣ ಅವರು ತಿಳಿಸಿದರು. ಜಿಲ್ಲಾ ಕೇಂದ್ರ ಮಡಿಕೇರಿಯ ಶಿಶುವಿಹಾರ ಕೇಂದ್ರದಲ್ಲಿ ನಗರಸಭೆ ಅಧ್ಯಕ್ಷರಾದ ಪಿ.ಕಲಾವತಿ ಅವರು ಮಗುವಿಗೆ ಪೋಲಿಯೊ ಲಸಿಕೆ ನೀಡಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್ ಮಾತನಾಡಿ ವಲಸಿಗ ಹಾಗೂ ಪ್ರವಾಸಿ ಮಕ್ಕಳು ಸೇರಿದಂತೆ ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪೋಲಿಯೊ ಲಸಿಕೆ ನೀಡಲಾಗುತ್ತದೆ ಎಂದರು. ಸೋಮವಾರ ಮತ್ತು ಮಂಗಳವಾರವೂ ಸಹ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಮನೆ ಮನೆಗೆ ಭೇಟಿ ನೀಡಿ ಪೋಲಿಯೊ ಲಸಿಕೆ ನೀಡಲಾಗುತ್ತಿದ್ದು. ಲಸಿಕೆ ಪಡೆಯದಿರುವ ಮಕ್ಕಳಿಗೆ ಲಸಿಕೆ ಕೊಡಿಸುವಂತೆ ಡಾ.ಸತೀಶ್ ಕುಮಾರ್ ಅವರು ಕೋರಿದರು. ಈ ಸಂದರ್ಭ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಾದ ಡಾ.ಲೋಕೇಶ್, ಜಿಲ್ಲಾ ಸರ್ಜನ್ ಡಾ.ನಂಜುಂಡಯ್ಯ, ಆರ್ ಸಿ ಎಚ್ ಅಧಿಕಾರಿ ಡಾ.ಮಧುಸೂದನ, ಡಾ.ಸನತ್ ಕುಮಾರ್, ಮಕ್ಕಳ ವಿಭಾಗದ ಮುಖ್ಯಸ್ಥರಾದ ಡಾ.ಪುರುಷೋತ್ತಮ, ಡಾ.ಚೇತನ್, ಡಾ.ಸುಕೃತ, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರಾದ ದೇವರಾಜು, ಸವಿತಾ ಕೀರ್ತನ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಾಂತಿ, ಪಾಲಾಕ್ಷ, ರೋಟರಿ ಸಂಸ್ಥೆಯ ಸಭಾಪತಿ ರವೀಂದ್ರ ರೈ, ಉತ್ತಯ್ಯ, ಲಯನ್ಸ್ ಸಂಸ್ಥೆಯ ಮದನ್, ಮಧುಕರ್, ನವೀನ್ ಅಂಬೆಕಲ್ಲು ಇತರರು ಇದ್ದರು. ಕಲಾವಿದ ಈ. ರಾಜು ಮತ್ತು ತಂಡದವರು ಪೊಲಿಯೊ ಲಸಿಕೆ ಮಹತ್ವ ಕುರಿತ ಜಾಗೃತಿ ಗೀತೆ ಹಾಡಿದರು.











