ನಾಪೋಕ್ಲು ಡಿ.22 NEWS DESK : ಜಾನುವಾರಗಳ ಮೇಲೆ ಬೀದಿ ನಾಯಿಗಳು ದಾಳಿ ಮಾಡಿ ಕೊಂದು ತಿಂದ ಘಟನೆ ಅಯ್ಯಂಗೇರಿ ಗ್ರಾಮದಲ್ಲಿ ನಡೆದಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿದೆ. ಅಯ್ಯಂಗೇರಿ ಗ್ರಾಮದ ನಿವಾಸಿ ಮಹಮ್ಮದ್ ಪಳ್ಳಿ ಎಂಬವರು ತಮ್ಮ
ಜಾನುವಾರುಗಳನ್ನು ಗದ್ದೆಯಲ್ಲಿ ಮೇಯಲು ಬಿಟ್ಟಿದ್ದ ಸಂದರ್ಭ ಬೀದಿ ನಾಯಿಗಳು ಜಾನುವಾರುಗಳ ಮೇಲೆ ದಾಳಿ ನಡೆಸಿ, ಹಸುವನ್ನು ಕೊಂದು ಬಹುತೇಕ ಭಾಗಗಳನ್ನು ತಿಂದು ಹಾಕಿವೆ. ಮೂರು ನಾಲ್ಕು ಜಾನುವಾರುಗಳಿಗೆ ಗಾಯಗಳಾಗಿವೆ. ಸ್ಥಳಕ್ಕೆ ಬಲ್ಲಮಾವಟ್ಟಿ ಪಶುವೈದ್ಯ ಡಾ.ಚೇತನ್ ಭೇಟಿ ನೀಡಿ ಗಾಯಗಳಿಗೊಳಗಾದ ಜಾನುವಾರುಗಳಿಗೆ ಸೂಕ್ತ ಚಿಕಿತ್ಸೆ ನೀಡಿ, ಪ್ರಕರಣವನ್ನು ದಾಖಲಿಸಿಕೊಂಡರು. ಈ ಭಾಗದಲ್ಲಿ ಬೀದಿ ನಾಯಿಗಳ ಉಪಟಳ ಹೆಚ್ಚಾಗಿದ್ದು, ಈಗಾಗಲೇ ಕೆಲವು ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಹಚ್ಚಿದ ಘಟನೆಗಳು ಪುನರಾವರ್ತನೆಯಾಗುತ್ತಿದೆ. ಇದರಿಂದಾಗಿ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣ ಆಗಿದೆ. ಇನ್ನಷ್ಟು ಜೀವ ಹಾನಿ ಆಗುವ ಮೊದಲು ಸಂಬಂಧಪಟ್ಟವರು ಎಚ್ಚೆತ್ತುಕೊಂಡು ಬೀದಿ ನಾಯಿಗಳನ್ನು ನಿಯಂತ್ರಿಸಬೇಕು, ಹಸುವನ್ನು ಕಳೆದುಕೊಂಡ ಮಾಲೀಕರಿಗೆ ಸೂಕ್ತ ಪರಿಹಾರ ನೀಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
ವರದಿ : ದುಗ್ಗಳ ಸದಾನಂದ.










