ವಿರಾಜಪೇಟೆ ಡಿ.22 NEWS DESK : ಕೊಡಗು ಜಿಲ್ಲೆ ಹಾಗೂ ಕೇರಳ ರಾಜ್ಯದ ನಡುವೆ ಪುರಾತನ ಕಾಲದಿಂದಲೂ ಅವಿನಾಭಾವ ಸಂಬಂಧವಿದೆ. ಇದಕ್ಕೆ ಸಾಕ್ಷಿ ಎಂದರೆ ಕೊಡಗಿನ ಜನತೆ ಕೇರಳದಲ್ಲಿ ಆಚರಣೆ ಮಾಡುವ ಮೈರೋಮಾಂಚನಗೊಳಿಸುವಂತಹ ಬೈತೂರು ಉತ್ಸವ, ಪಯ್ಯವೂರ್ ಉತ್ಸವವೂ ಹೌದು. ಕೊಡಗು ಮತ್ತು ಕೇರಳದ ನಡುವೆ ಇತಿಹಾಸ, ಸಂಸ್ಕೃತಿ ಮತ್ತು ಭೂಗೋಳಶಾಸ್ತ್ರದ ಆಳವಾದ ಸಂಬಂಧವಿದೆ; ಎರಡೂ ಪಶ್ಚಿಮ ಘಟ್ಟಗಳ ಭಾಗವಾಗಿರುವುದರಿಂದ ಧಾರ್ಮಿಕ ಆಚರಣೆಗಳು (ತೆಯ್ಯಂ), ತೆರೆ, ದೇವರುಗಳು, ದೇವಾಲಯದ ವಾಸ್ತುಶಿಲ್ಪ ಮತ್ತು ಸ್ಥಳೀಯರ ನಡುವೆ ಸಾಮ್ಯತೆಗಳಿವೆ, ವ್ಯಾಪಾರ ವಹಿವಾಟು, ದೇವರು, ಮದುವೆ ಹೀಗೆ ಅನೇಕ ರೀತಿಯಲ್ಲಿ ಸಂಬಂಧ ಮುಂದುವರೆದಿದೆ. ದೈವ ದೇವರ ವಿಚಾರಕ್ಕೆ ಬಂದರೆ ಕೇರಳದ ಮುತ್ತಪ್ಪನ ಬಗ್ಗೆ ತಿಳಿಯದವರೇ ಇಲ್ಲ. ಪರಶಿನಿಕಡವು ಅಂದರೆ ಮುತ್ತಪ್ಪ ಎಂದೇ ಹೇಳಬೇಕು. ಕೊಡಗಿನಲ್ಲಿಯೂ ಮುತ್ತಪ್ಪನ ಮಡಪುರಕ್ಕೆ ಕೊರತೆ ಇಲ್ಲ. ಸರ್ವರನ್ನು ದಯಾಪಾಲಿಸುವ ದೈವವಾಗಿ ಮುತ್ತಪ್ಪ ಕೊಡಗಿನೆಲ್ಲೆಡೆ ಸ್ಥಿತಗೊಂಡಿದ್ದಾನೆ. ಆದರೆ ಈ ಮುತ್ತಪ್ಪನ ನಿಜವಾದ ಮೂಲ ಸ್ಥಾನ ಮತ್ತು ಹಿನ್ನಲೆ ಬಹಳಷ್ಟು ಜನರಿಗೆ ಇನ್ನೂ ತಿಳಿದಿಲ್ಲ. ಪರಶಿನಿಕಡವು ಮುತ್ತಪ್ಪ ಎಲ್ಲರೂ ಕೇಳಿರುತ್ತಾರೆ. ಕುನ್ನತ್ತೂರ್ ಪಾಡಿ ಮುತ್ತಪ್ಪ ಹೆಸರು ಕೇಳಿರುವವರ ಸಂಖ್ಯೆ ಕಡಿಮೆ. ಏಕೆಂದರೆ ಅಲ್ಲಿ ಕೇವಲ ಒಂದು ತಿಂಗಳ ಕಾಲ ಮಾತ್ರ ಪೂಜೆ ವಿಧಿವಿಧಾನಗಳು ನೆರವೇರುತ್ತವೆ. ಇದು ಮುತ್ತಪ್ಪನ ಮೂಲ ವಾಸಸ್ಥಾನವೂ ಹೌದು. ಕಣ್ಣೂರು ಜಿಲ್ಲೆಯ ಗುಡ್ಡಗಾಡು ಪ್ರದೇಶದಲ್ಲಿರುವ ಕುನ್ನತ್ತೂರ್ ಪಾಡಿಯನ್ನು ಮುತ್ತಪ್ಪನ್ ಆರಾಧನೆಯ ಹೆಚ್ಚು ಪವಿತ್ರ ಸ್ಥಳವೆಂದು ಪರಿಗಣಿಸಲಾಗಿದೆ ಮತ್ತು ಇದನ್ನು ಅವರ ಮೂಲ ವಾಸಸ್ಥಾನ ಎಂದೂ ಹೇಳುತ್ತಾರೆ. :: ಹಬ್ಬದ ವಾತಾವರಣ :: ಮುತ್ತಪ್ಪನ ಪೂರ್ವಜರ ಮನೆ ಕುನ್ನತೂರ್ಪಾಡಿಯಲ್ಲಿ ಹಬ್ಬ ಪ್ರಾರಂಭವಾಗಿದೆ, ಇದನ್ನು ವನ ಉತ್ಸವ ಎಂದೂ ಕರೆಯುತ್ತಾರೆ. ಪದಿಗೆ ಪ್ರವೇಶ ಸಮಾರಂಭವು ಒಂದು ತಿಂಗಳ ಕಾಲ ನಡೆಯುವ ಕಾರ್ಯಕ್ರಮವಾಗಿದೆ. ಇದರ ಅಂಗವಾಗಿ ಡಿ.16 ರಂದು ಬೆಳಿಗ್ಗೆ, ತಾಝೆಪೆÇೀಡಿಕ್ಕಳಂನಲ್ಲಿ ಸಾಮಾನ್ಯ ಪೂಜೆಗಳ ನಂತರ ಸಂಜೆಯ ಪದಿಗೆ ಪ್ರವೇಶ ಸಮಾರಂಭ ನಡೆಯಿತು. ಇದು ಪದಿಗೆ ತಿರುವಪ್ಪನ ಮತ್ತು ವೆಳ್ಳಟ್ಟಂ, ಕರಕ್ಕಟ್ಟಿದಂ ನಾಯನಾರ್, ಚಾಂತನ್ ಮತ್ತು ಕೋಮರಮ್ ಅವರು ಕಾಡಿನಲ್ಲಿರುವ ಪದಿಗೆ ಪ್ರವೇಶಿಸುವ ಸಮಾರಂಭವಾಗಿದೆ. ಇದು ಬುಡಕಟ್ಟು ಸಂಸ್ಕೃತಿಗೆ ಸಂಬಂಧಿಸಿದ ಹಬ್ಬವಾಗಿದೆ. ಇದೇ ಸಂದರ್ಭ ತಿರುವಾಭರಣಂ ಪೆಟ್ಟಿಗೆ ಮತ್ತು ಸಂಪತ್ತನ್ನು ಪಾಡಿಗೆ ಸಾಗಿಸಿದರು. ನೂರಾರು ಭಕ್ತರು ಮೆರವಣಿಗೆಯಲ್ಲಿ ಜೊತೆಗೂಡಿದರು. ಮಡಪ್ಪುರದೊಳಗೆ ಕೊಮಾರಂ ಮತ್ತು ಶ್ರೀಗಂಧವನ್ನು ಇರಿಸಿದ ನಂತರ, ಪಾಡಿಯಲ್ಲಿ ಕಬ್ಬಿಣದ ದೀಪವನ್ನು ಕಟ್ಟಿ, ದೀಪ ಬೆಳಗಿದಾಗ, ಹಬ್ಬ ಪ್ರಾರಂಭವಾಯಿತು. ಬುಧವಾರ, ಮುತ್ತಪ್ಪನ ನಾಲ್ಕು ರೂಪಗಳನ್ನು ಕಟ್ಟಲಾಯಿತು. ಬಾಲ್ಯವನ್ನು ಪ್ರತಿನಿಧಿಸುವ ಹೊಸ ಮುತ್ತಪ್ಪನನ್ನು, ಯೌವನವನ್ನು ಪ್ರತಿನಿಧಿಸುವ ಹಳೆಯ ಮುತ್ತಪ್ಪನನ್ನು, ಯೌವನವನ್ನು ಪ್ರತಿನಿಧಿಸುವ ನಡುವಳಿಶನ್ ದೇವರನ್ನು ಮತ್ತು ವೃದ್ಧಾಪ್ಯವನ್ನು ಪ್ರತಿನಿಧಿಸುವ ತಿರುವಪ್ಪನನ್ನು ಕಟ್ಟಲಾಯಿತು. ನಂತರ ವೆಳ್ಳಾಟಂ ನಡೆಯಿತು. ತಿರುವಪ್ಪನ ದಿನದಂದು, ಮುತ್ತಪ್ಪನ ತಾಯಿ ಮೂಲಂಪೆಟ್ಟ ಭಗವತಿ ಗಂಟು ಕಟ್ಟುತ್ತಾರೆ. 19ರ ಮಧ್ಯರಾತ್ರಿ ಮೂಲಂಪೆಟ್ಟ ಭಗವತಿ ಗಂಟು ಕಟ್ಟುತ್ತಾರೆ. ಹಬ್ಬದ ದಿನಗಳಲ್ಲಿ, ಸಂಜೆ 4.30 ಕ್ಕೆ ಊಟು ವೆಳ್ಳಾಟಂ ಮತ್ತು ರಾತ್ರಿ 9 ಗಂಟೆಗೆ ತಿರುವಪ್ಪನ ನಡೆಯಲಿದೆ. ಧನು ತಿಂಗಳ ಚಳಿಯಲ್ಲಿ, ಕುನ್ನತ್ತೂರು ಬೆಟ್ಟಗಳಲ್ಲಿ ಹಬ್ಬವು ಒಂದು ತಿಂಗಳು ಇರುತ್ತದೆ. ದೇಶದ ವಿವಿಧ ಭಾಗಗಳಿಂದ ಸಾವಿರಾರು ಜನರು ಪಾಡಿಗೆ ಆಗಮಿಸಿ ಕಾಡಿನ ಸೌಂದರ್ಯ ಮತ್ತು ರಾತ್ರಿ ಉತ್ಸವವನ್ನು ಸವಿಯಲಿದ್ದಾರೆ. ಉತ್ಸವದ ಸಮಯದಲ್ಲಿ ಬರುವ ಎಲ್ಲಾ ಭಕ್ತರಿಗೆ ಎರಡು ಹೊತ್ತಿನ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ಅರಣ್ಯ ಇಲಾಖೆ ಮತ್ತು ಪೆÇಲೀಸರು ಭಾರೀ ಭದ್ರತೆಯನ್ನು ಏರ್ಪಡಿಸಿದ್ದಾರೆ. ಜ.15 ರಂದು ಉತ್ಸವವು ಮುಕ್ತಾಯಗೊಳ್ಳಲಿದೆ. :: ಪಾಡಿಯ ಹಿನ್ನಲೆ :: ಕೇರಳದ ಕಣ್ಣೂರಿನ ಕುನ್ನತ್ತೂರ್ ಪಾಡಿ ದೇವಸ್ಥಾನ ಕಣ್ಣೂರಿನ ಕುನ್ನತೂರ್ಪಾಡಿಯಲ್ಲಿ ಶ್ರೀ ಮುತ್ತಪ್ಪನ್ ದೇವರಿಗೆ ಒಂದು ತಿಂಗಳು ಮಾತ್ರ ಪೂಜೆ ಸಲ್ಲಿಸಲಾಗುತ್ತದೆ. ಇಲ್ಲಿನ ಪರ್ವತ ಶ್ರೇಣಿಗಳು ಆಕಾಶವನ್ನು ಮುಟ್ಟುತ್ತವೆ ಮತ್ತು ಕಣ್ಣಿಗೆ ಹಬ್ಬವನ್ನುಂಟುಮಾಡುತ್ತವೆ. ಇದು ಸಮುದ್ರ ಮಟ್ಟದಿಂದ 3,000 ಅಡಿ ಎತ್ತರದಲ್ಲಿದ್ದು ಈ ಸ್ಥಳವು ಸುಂದರವಾಗಿದ್ದು, ಇದನ್ನು ಉಡುಂಬನ್ ಮಾಲಾ ಎಂದು ಕರೆಯಲಾಗುತ್ತದೆ. ಇಲ್ಲಿ ಶ್ರೀ ಮುತ್ತಪ್ಪನವರ ಪೂಜೆ ವಿಶಿಷ್ಟವಾಗಿದೆ. ಇಲ್ಲಿ ವಿಗ್ರಹ ಪೂಜೆಯಿಲ್ಲ, ಬದಲಾಗಿ ಮುತ್ತಪ್ಪನ ಧಾರ್ಮಿಕ ವಿಧಿವಿಧಾನವನ್ನು ಅನುಸರಿಸುವುದು. ಮೀನನ್ನು ದೇವರಿಗೆ ನೈವೇದ್ಯವಾಗಿ ಬಳಸಲಾಗುತ್ತದೆ. ಇಲ್ಲಿ ಪೂಜೆ ಸಲ್ಲಿಸಲು ಅವಕಾಶವಿದೆ. ಕುನ್ನತ್ತೂರ್ಪಾಡಿಯಲ್ಲಿ ಶ್ರೀ ಮುತ್ತಪ್ಪನನ್ನು ಪುರಾಲಿಮಲದಿಂದ ಆವಾಹನೆ ಮಾಡಲಾಗುತ್ತದೆ. ಹಬ್ಬದ ಮೊದಲ ದಿನದಂದು ಪಾಡಿಯಲ್ಲಿ ನಾಲ್ಕು ತೆರೆ(ತೆಯ್ಯಂ)ಗಳು ಕಾಣಿಸಿಕೊಳ್ಳುತ್ತವೆ. ಪುತಿಯ ಶ್ರೀ ಮುತ್ತಪ್ಪನ್, ಪುರಮ್ಕಳ ಶ್ರೀ ಮುತ್ತಪ್ಪನ್, ನಡುವಾಝಿ ಸನ್ ದೈವಂ ಮತ್ತು ತಿರುವಪ್ಪನ್, ಕುನ್ನತ್ತೂರು ಪಾಡಿ ಪ್ರಸಿದ್ಧ ಸ್ಥಳವಾಗಿದ್ದು, ಇಲ್ಲಿ ಶ್ರೀ ಮುತ್ತಪ್ಪನಿಗೆ ಅರ್ಪಿತವಾದ ಯಾವುದೇ ದೇವಾಲಯವಿಲ್ಲ. ಅವರನ್ನು ನೈಸರ್ಗಿಕ ವಾತಾವರಣದಲ್ಲಿ ಪೂಜಿಸಲಾಗುತ್ತದೆ.
ತಿರುವಾತ್ಸವವಂ ಒಂದು ಭವ್ಯ ಉತ್ಸವವಾಗಿದ್ದು, ಇದು ಧರ್ನು ಮಾಸ ಎರಡನೇ ತಾರೀಖಿನಂದು, ಅಂದರೆ ಡಿಸೆಂಬರ್ 16 ರ ಸುಮಾರಿಗೆ ಪ್ರಾರಂಭವಾಗಿ ಜನವರಿ 15 ರವರೆಗೆ ಒಂದು ತಿಂಗಳ ಕಾಲ ಮುಂದುವರಿಯುತ್ತದೆ. ಇಲ್ಲಿ ಶ್ರೀ ಮುತ್ತಪ್ಪನ ದೈವಿಕ ರೂಪವು ಭಕ್ತರ ಕುಂದುಕೊರತೆಗಳನ್ನು ಆಲಿಸುತ್ತದೆ, ಮತ್ತು ಆಶೀರ್ವದಿಸುತ್ತದೆ ಎಂದು ನಂಬಿಕೆ. ದಂತಕಥೆಯ ಪ್ರಕಾರ ಮುತ್ತಪ್ಪನು ಮಲಬಾರ್‍ನ ಗುಡ್ಡಗಾಡು ಪ್ರದೇಶದಲ್ಲಿ ಅಲೆದಾಡುತ್ತಾ ಕುನ್ನತ್ತೂರು ಪಾಡಿಯ ನೈಸರ್ಗಿಕ ಸೌಂದರ್ಯದಿಂದ ಆಕರ್ಷಿತನಾಗಿ ಸ್ವಲ್ಪ ಕಾಲ ಅಲ್ಲಿಯೇ ಇರಲು ನಿರ್ಧರಿದ್ದ. ಕುನ್ನತ್ತೂರು ಪಾಡಿಯಲ್ಲಿ ಮುತ್ತಪ್ಪ ತನ್ನ ಮೊದಲ ಭಕ್ತರಾದ ಚಂದನ್ ಮತ್ತು ಅವನ ಪತ್ನಿ ಅವರೊಂದಿಗೆ ಅಲ್ಲಿ ಇದ್ದ. ಸ್ವಲ್ಪ ಸಮಯದ ನಂತರ, ಮುತ್ತಪ್ಪನ್ ನಾಗರಿಕತೆಗೆ ಮರಳಲು ನಿರ್ಧರಿಸಿದನು.iÁ ಸಂದರ್ಭ ಅವನು ಹೊಡೆದ ಬಾಣವು ಮುತ್ತಪ್ಪನ ಮುಖ್ಯ ಮಡಪ್ಪುರ ಇರುವ ಪರಶಿನಿಯ ಮೇಲೆ ಬಿದ್ದಿತು. ಹಾಗೆ ಅಲ್ಲಿ ದೇವಾಲಯ ನಿರ್ಮಾಣವಾಗಿದೆ ಎನ್ನಲಾಗುತ್ತದೆ. ಈ ಪ್ರದೇಶದ ವನ್ನನ್ ಸಮುದಾಯ ಮನೆಗಳಲ್ಲಿ ವೆಳ್ಳಾಟಂ ಅನ್ನು ನಿರ್ವಹಿಸುತ್ತದೆ. ಇನ್ನೊಂದು ಕಥೆಯ ಪ್ರಕಾರ ಮುತ್ತಪ್ಪನ ಕುರಿತಾದ ಪುರಾಣವು ಪಡಿಕುಟ್ಟಿ ಅಮ್ಮ ಎಂಬ ಬ್ರಾಹ್ಮಣ ಮಹಿಳೆ, ಮಗುವಿಗಾಗಿ ಶಿವನನ್ನು ಪ್ರಾರ್ಥಿಸುತ್ತಿದ್ದ ಸಂದರ್ಭ ಹೂವಿನ ಬುಟ್ಟಿಯಲ್ಲಿ ನದಿಯಲ್ಲಿ ಮಗು ತೇಲುತ್ತಿರುವುದನ್ನು ಕಾಣುತ್ತಾಳೆ. ಮಕ್ಕಳಿಲ್ಲದ ಪಡಿಕುಟ್ಟಿ ಅಮ್ಮ ಮತ್ತು ಅವಳ ಪತಿ ಮಗುವನ್ನು ತೆಗೆದುಕೊಂಡು ಸಮರ್ಥನಾಗಿ ಬೆಳೆಸುತ್ತಾಳೆ. ಇದೇ ಸಂದರ್ಭ ತನ್ನ ಹದಿಹರೆಯದಲ್ಲಿ, ಮುತ್ತಪ್ಪನ್ ತನ್ನ ದೈವಿಕ ಶಕ್ತಿಯನ್ನು ತೋರಿಸಲು ಪ್ರಾರಂಭಿಸುತ್ತಾನೆ. ಅವನು ತನ್ನ ಕೆಳಜಾತಿಯ ಸಹಚರರಿಗೆ ತನ್ನ ಹುಡುಗಾಟವನ್ನು ಪ್ರದರ್ಶಿಸಿದನು. ಬಳಿಕ ಅವನು ತನ್ನ ದತ್ತು ಜಾತಿಯ ಸಾಮಾಜಿಕ ರಚನೆಯನ್ನು ಧಿಕ್ಕರಿಸಲು, ಕಾಡಿನಲ್ಲಿ ಬೇಟೆಯಾಡಲು ಮತ್ತು ಮಾಂಸವನ್ನು ಸೇವಿಸಲು ಪ್ರಾರಂಭಿಸಿದ್ದ ಎನ್ನಲಾಗುತ್ತದೆ. ಅದು ಅವನ ಹೆತ್ತವರನ್ನು ಅವರ ಮನೆಯಿಂದ ಹೊರಹಾಕುವಂತೆ ಮಾಡಿತು. ಹೊರಡುವ ಮೊದಲು, ಮುತ್ತಪ್ಪನ್ ತಂದೆ ತಾಯಿಗಳಿಗೆ ತನ್ನ ದೈವಿಕ ಸ್ವರೂಪವನ್ನು ತೋರಿಸಿದ್ದ ಎಂದು ಕಥೆಗಳಲ್ಲಿ ಅಲ್ಲಿನವರು ವಿವರಿಸುತ್ತಾರೆ. ಕುನ್ನತ್ತೂರು ಪಾಡಿಯಲ್ಲಿರುವ ಮುತ್ತಪ್ಪನ ಮುಖ್ಯ ವಾಸಸ್ಥಾನವು ಯಾವುದೇ ಶಾಶ್ವತ ರಚನೆಗಳನ್ನು ಹೊಂದಿಲ್ಲ, ಆದರೆ ಡಿಸೆಂಬರ್‍ನಲ್ಲಿ ವಾರ್ಷಿಕ ಉತ್ಸವಕ್ಕಾಗಿ ಅರಣ್ಯ ಪ್ರದೇಶದಲ್ಲಿ ಸ್ವಲ್ಪ ಭಾಗ ತೆರವುಗೊಳಿಸಿ ಅಲಂಕರಿಸಲಾಗುತ್ತದೆ ವಳಪಟ್ಟಣಂ ನದಿ ಮತ್ತು ಪರಶಿಣಿಯ ಮೂಲದ ಬಳಿ ಇರುವ ಕುನ್ನತ್ತೂರು ಪಾಡಿ, ಪ್ರಾಚೀನ ಕಾಲದಲ್ಲಿ ಪಶ್ಚಿಮ ಸಮುದ್ರದ ಪ್ರಮುಖ ಬಂದರಾದ ವಲಪಟ್ಟಣಂ ನಗರಕ್ಕೆ ಹತ್ತಿರದಲ್ಲಿದೆ. ಹೀಗಾಗಿ, ವಲಪಟ್ಟಣಂ ನದಿಯು ಬೆಟ್ಟ ಪ್ರದೇಶ ಮತ್ತು ಸಮುದ್ರದ ನಡುವಿನ ಕೊಂಡಿಯಾಗಿದೆ. :: ಹೆಗ್ಗಳಿಕೆ :: ಕುನ್ನತ್ತೂರು ಪಾಡಿ ಎನ್ನುವುದೇ ಮುತ್ತಪ್ಪನವರ ಹೆಗ್ಗಳಿಕೆ. ಪ್ರಸಿದ್ಧ ಕುನ್ನತ್ತೂರು ಪಾಡಿ ಉತ್ಸವ ಇಲ್ಲಿ ನಡೆಯುತ್ತದೆ. ಇಲ್ಲಿ ಮುತ್ತಪ್ಪನಿಗೆ ದೇವಸ್ಥಾನವಿಲ್ಲದೆ ನೈಸರ್ಗಿಕ ಪರಿಸರದಲ್ಲಿ ಉತ್ಸವ ನಡೆಯುತ್ತದೆ. ಇಲ್ಲಿ ಉದುರಿದ ಎಲೆಗಳ ರಾಶಿ, ಪರ್ವತಗಳು, ಕಲ್ಲು ಬಂಡೆಗಳು, ಕಾಡುಗಳು ಮತ್ತು ವಿವಿಧ ಜಾತಿಯ ಮರಗಳ ನಡುವೆ ಮುತ್ತಪ್ಪ ಪೂಜೆಯನ್ನು ಸ್ವೀಕರಿಸುತ್ತಾನೆ. ಈ ಪ್ರದೇಶವು ಮುತ್ತಪ್ಪನ ವಂಶಸ್ಥರಾದ ಮನ್ನಾನಾರ್ ರಾಜವಂಶದ ರಾಜಮನೆತನದ ಒಡೆತನದಲ್ಲಿತ್ತು. 1902ರಲ್ಲಿ ಮುತ್ತಪ್ಪನ ವಂಶದ ಕೊನೆಯ ರಾಜ ಕುಂಜಿಕೇಳಪ್ಪನ್ ಮನ್ನಾನಾರ್ ಅವರನ್ನು ಬ್ರಿಟಿಷ್ ಸರ್ಕಾರ ಕೊಂದು ಈ ಮನೆತನದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಾಗ ಮನ್ನಾನಾರ ಸಾಮಂತರಾಗಿದ್ದ ಕರಕ್ಕಟ್ಟಿದಂ ನಾಯನಾರ್ ಅವರು ಕುನ್ನತ್ತೂರು ಪಾಡಿ ನಡೆಸುವ ಹಕ್ಕನ್ನು ಪಡೆದರು ಎಂದು ಅದೇ ವಂಶದ ಕುನ್ನತ್ತೂರ್ ಪಾಡಿ ದೇವಾಲಯ ಟ್ರಸ್ಟ್‍ನ ಮುಖ್ಯಸ್ಥರಾದ ಕುಞರಾಮನ್ ನಾಯನಾರ್ ಇತಿಹಾಸದ ಮೆಲುಕು ಹಾಕುತ್ತಾರೆ. ಇದೀಗ ಹಬ್ಬ ಪ್ರಾರಂಭವಾಗಿದ್ದು ರಾತ್ರಿ ವೇಳೆ ಪೂಜಾ ವಿಧಿವಿಧಾನಗಳು ನೆರವೇರಲಿದ್ದು ಜನವರಿ 15ರವರೆಗೆ ಹಬ್ಬ ನಡೆಯಲಿದೆ. ಮುತ್ತಪ್ಪನ ಬಾಲ್ಯದ ಮೂಲ ಸ್ಥಳವನ್ನು ಕಣ್ತುಂಬಿಕೊಳ್ಳಬೇಕಾದರೆ ಈ ಒಂದು ತಿಂಗಳು ಮಾತ್ರ ಸಾಧ್ಯವಾಗಲಿದೆ. ಈ ಒಂದು ಧಾರ್ಮಿಕ ಕ್ಷೇತ್ರದಲ್ಲಿ ಅಂದಿನಿಂದ ಇಂದಿನವರೆಗೂ ಪದ್ಧತಿ ಪರಂಪರೆಗಳು, ಧಾರ್ಮಿಕ ವಿಧಿ ವಿಧಾನಗಳು ಹಾಗೆಯೇ ಮುಂದುವರೆದುಕೊಂಡು ಬಂದಿದೆ. ಅಲ್ಲಿಗೆ ತೆರಳುವ ಭಕ್ತರು ಕೂಡ ಅದನ್ನು ಚಾಚುತಪ್ಪದೆ ಪಾಲಿಸುವುದು ಕೂಡ ಆದ್ಯ ಕರ್ತವ್ಯವಾಗಿದೆ. ಕುನ್ನತ್ತೂರ್ ಪಾಡಿ ಶ್ರೀ ಮುತ್ತಪ್ಪನ್ ದೇವಸ್ಥಾನದ ಮಹಾ ವಾರ್ಷಿಕ ಉತ್ಸವ ಮಲಯಾಳಂ ತಿಂಗಳ 2 ರಂದು ಪ್ರಾರಂಭವಾಗಿ, ಧನು (ಡಿಸೆಂಬರ್ 15 ಅಥವಾ 16) ಮತ್ತು ಒಂದು ತಿಂಗಳ ಕಾಲ ಮುಂದುವರಿಯುತ್ತದೆ. ಪ್ರಾರಂಭದ ದಿನದ ಬೆಳಿಗ್ಗೆ, ದೈವದ ಆಚರಣೆಯಲ್ಲಿ ಭಾಗವಹಿಸುವ ಪೂಜಾಕರ್ಮಿಗಳಿಗೆ ಅವರು ಹೊಂದಿರುವ ಸ್ಥಾನದ ಪ್ರಕಾರ, ಅಕ್ಕಿ ಮತ್ತು ಬಟ್ಟೆಗಳನ್ನು ನೀಡಲಾಗುತ್ತದೆ. ಮುಂಜಾನೆ ಪಯ್ಯವೂರಿನಲ್ಲಿರುವ ಮಠದ ಪ್ರಧಾನ ಅರ್ಚಕರು ಆಗಮಿಸುತ್ತಾರೆ. ಮುಖ್ಯಸ್ಥರು ಅವರಿಗೆ ಬಟ್ಟೆಗಳನ್ನು ಉಡುಗೊರೆಯಾಗಿ ನೀಡುತ್ತಾರೆ. ಗಣಪತಿ ಹೋಮ (ಆನೆ ದೇವರು ಗಣಪತಿಗೆ ಅಗ್ನಿ ಅರ್ಪಣೆ) ಮತ್ತು ಭಗವತಿ ಸೇವೆ ಭಗವಾನ್ ದೇವಿಯನ್ನು ಪೂಜಿಸುತ್ತಾರೆ). ಮಧ್ಯಾಹ್ನದ ಹೊತ್ತಿಗೆ ಆಚರಣೆಗಳು ಮುಗಿಯುತ್ತವೆ. ಸಂಜೆ ವೇಳೆ ಮುತ್ತಪ್ಪನ ಸೇವೆಯನ್ನು ಮಾಡುವ ಪೂಜಾ ಕರ್ಮಿಗಳು ಕೆಳಗಿನ ದೇವಾಲಯದಲ್ಲಿ ವಿವಿಧ ವಿಧಿವಿಧಾನಗಳನ್ನು ನೆರವೇರಿಸಿ ಬಿದಿರಿನ ಪಂಜುಗಳನ್ನು ಹೊತ್ತುಕೊಂಡು ಬಹಳ ವೈಭವದಿಂದ ಪಾಡಿಯನ್ನು ಪ್ರವೇಶಿಸುತ್ತಾರೆ. ಕೋಮರನ್ ಎಂಬುವವರು ದೇವರ ಪೂಜಾ ಆಯುಧಗಳೊಂದಿಗೆ ತೆರಳುತ್ತಾರೆ. ಹಬ್ಬಕ್ಕೆ ಅಗತ್ಯವಾದ ಆಭರಣಗಳು ಮತ್ತು ಇತರ ವಸ್ತುಗಳೊಂದಿಗೆ ಅಡಿಯಾರ್ ಅವನನ್ನು ಹಿಂಬಾಲಿಸುತ್ತಾರೆ. ಇದರೊಂದಿಗೆ ಬೆಳ್ಳಿ ಬಿಲ್ಲು ಮತ್ತು ಬಾಣ, ಭಂಡಾರಪೆಟ್ಟಿ (ಕಾಣಿಕೆ ಪೆಟ್ಟಿಗೆ) ಮತ್ತು ಆಭರಣಗಳನ್ನು ಸಹ ಹೊತ್ತುಕೊಂಡು ಮೆಟ್ಟಿಲುಗಳನ್ನು ಹತ್ತಿ ಕುನ್ನತ್ತೂರ್ ಪಾಡಿ ತಲುಪುತ್ತಾರೆ. ನಂತರ ಭಕ್ತರ ಗುಂಪು ಸೇರುತ್ತದೆ. ಬಳಿಕ ತಂತ್ರಿಗಳು ಮಡಪ್ಪುರವನ್ನು ಪ್ರವೇಶಿಸಿ ದೇವರನ್ನು ಪೂಜಿಸುತ್ತಾರೆ. ಹಿಂದಿನ ಕಾಲದ ಚಂತನ್ ಎಂದು ಭಾವಿಸಲಾದ ಬಂಡೆಯ ಮೇಲೆ ನೀರನ್ನು ಸುರಿದ ನಂತರ, ಅವರು ಮಡಪ್ಪುರದಿಂದ ಹೊರಬರುತ್ತಾರೆ. ಕೋಮರಂ ಮತ್ತು ಚಾಂತನ್ ತಮ್ಮ ಕಾಣಿಕೆಯನ್ನು ಮಡಪ್ಪುರದ ಒಳಗೆ ಮತ್ತು ಹೊರಗೆ ಕಲಶ (ಮಡಕೆ) ಇಡುವ ಸ್ಥಳದಲ್ಲಿ ಸಲ್ಲಿಸುತ್ತಾರೆ. ಅಡಿಯ ಬುಡಕಟ್ಟು ಜನಾಂಗದವರಲ್ಲಿ ಒಬ್ಬನು, ಚಾಂತನ ಆದೇಶವನ್ನು ಪಾಲಿಸುತ್ತಾ, ವಾನವರನಿಗೆ ನಮಸ್ಕರಿಸುತ್ತಾನೆ, ಅವರು ವಾನವರ ಸಹಾಯಕನಾದ ಕುಡುಪತಿಯ ಮೂಲಕ ದೇವಾಲಯಕ್ಕೆ ಸಂಬಂಧಿಸಿದ ಎಲ್ಲಾ ಅಗತ್ಯ ಕೆಲಸಗಳನ್ನು ಮಾಡುತ್ತಾರೆ. ವೀಳ್ಯದ ಎಲೆ, ಅಡಿಕೆಯನ್ನು ಅಡಿಯ ಬುಡಕಟ್ಟು ಜನಾಂಗದವರಿಗೆ ಹಸ್ತಾಂತರಿಸಿದ ತಕ್ಷಣ, ಕಂಬದ ಮೇಲೆ ದೀಪವನ್ನು ಕಟ್ಟಲಾಗುತ್ತದೆ. ಹಬ್ಬ ಮುಗಿಯುವವರೆಗೆ ಈ ದೀಪವನ್ನು ಬೆಳಗಿಸಬೇಕು. :: ವಿವಿಧ ರೂಪಗಳಲ್ಲಿ ದೇವರು :: ಮುತ್ತಪ್ಪ ನಾಲ್ಕು ವಿಭಿನ್ನ ರೂಪಗಳನ್ನು ಧರಿಸುತ್ತಾನೆ. ಅವು ದೇವರ ನಾಲ್ಕು ಹಂತಗಳ ಪ್ರಾತಿನಿಧ್ಯಗಳಾಗಿವೆ. ಮೊದಲನೆಯದು ನಾದುವಾಳಿಸಂ ದೈವಂ ಎಂದು ಕರೆಯಲ್ಪಡುವ ಮುತ್ತಪ್ಪನ ಶಿಶು ರೂಪ. ದೇವರು ಬಿಲ್ಲು ಮತ್ತು ಬಾಣವನ್ನು ಆಯುಧವಾಗಿ ಹೊಂದಿದ್ದಾನೆ. ಎರಡನೆಯ ರೂಪ, ಪುತಿಯ ಮುತ್ತಪ್ಪನ್ ಎಂದು ಕರೆಯಲ್ಪಡುವವನು ದೇವರನ್ನು ಚಿಕ್ಕ ಹುಡುಗನಾಗಿ ಪ್ರತಿನಿಧಿಸುತ್ತಾನೆ. ನಂತರ ಪುರಾಣಕಲಾ ಮುತ್ತಪ್ಪನ್ ಎಂಬ ಮೂರನೇ ರೂಪ ಬರುತ್ತದೆ. ಮುಂದಿನದು ತಿರುವಪ್ಪನ್ ಎಂದು ಕರೆಯಲ್ಪಡುವ ಸಾಮಾನ್ಯ ರೂಪ. ಈ ರೂಪದಲ್ಲಿ ಮುತ್ತಪ್ಪನದು ಗಂಭೀರವಾಗಿದೆ. ಅವನಿಗೆ ಕಪ್ಪು ಮೀಸೆ ಮತ್ತು ಗಡ್ಡವಿದೆ. ಅವನಿಗೆ ಸುಳ್ಳು ಕಣ್ಣು ಕೂಡ ಇದೆ. ತಿರುವಪ್ಪನ ಭವ್ಯ ಶಕ್ತಿಗಳನ್ನು ಹೊಂದಿದೆ. ವೇóಷಧಾರಿ ಈ ನಾಲ್ಕು ರೂಪಗಳಲ್ಲಿ ನೃತ್ಯ ಮಾಡಬೇಕು.ಹಬ್ಬದ ಆರಂಭದಲ್ಲಿದ್ದಂತೆ, ಕೊನೆಯಲ್ಲಿ ದೇವರು ಸ್ವತಃ ಪವಿತ್ರ ನೀರನ್ನು ಸುತ್ತಲೂ ಸಿಂಪಡಿಸುತ್ತಾನೆ. ಹಬ್ಬದ ಆರಂಭದಲ್ಲಿ ಮುತ್ತಪ್ಪನನ್ನು ಪುರಲಿಮಲೆಯ ತುದಿಯಿಂದ ಕರೆತಂದಿರುತ್ತಾರೆ. ಈಗ ಅವನನ್ನು ಸಮಾಧಾನಪಡಿಸಿ ವಾಪಸ್ ಕಳುಹಿಸಬೇಕು. ಒಂದು ತಿಂಗಳ ಹಬ್ಬ ಮುಗಿದ ನಂತರ ಮಕರಂ 2 ನೇ ತಾರೀಖಿನಂದು, ಕಲಿಯ್ಕ್ಕಪ್ಪಟ್ಟು ಎಂಬ ಆಚರಣೆ ಇದೆ, ದೇವರು ಪ್ರದಕ್ಷಿಣೆ ಹಾಕುತ್ತಾ ಮತ್ತು ಎರಡು ಬದಿಗಳಲ್ಲಿ ಉರಿಯುವ ಕೆಂಡಗಳನ್ನು ಪಕ್ಕಕ್ಕೆ ಒದ್ದ ನಂತರ, ಮಡಪ್ಪುರವನ್ನು ಪ್ರವೇಶಿಸುತ್ತಾನೆ. ಇದಾದ ನಂತರ ಅಡಿಯ ಮಹಿಳೆಯರು ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛಗೊಳಿಸುತ್ತಾರೆ. ವೇಷದಾರಿ ತನ್ನ ಸಾಮಾನ್ಯ ಉಡುಪನ್ನು ಧರಿಸಿ, ಮುತ್ತಪ್ಪನನ್ನು ಪ್ರತಿನಿಧಿಸುವ ಕಲ್ಲನ್ನು ಪ್ರದಕ್ಷಿಣೆ ಹಾಕಿ, ಪುರಳಿಮಲೆಗೆ ಹಿಂತಿರುಗಲು ವಿನಂತಿಸುತ್ತಾನೆ. ಕೋರಿಕೆಯ ಪ್ರಕಾರ ಭಗವಂತ ಪುರಳಿಮಲೆಗೆ ತೆರಳುತ್ತಾನೆ ಎಂದು ಭಾವಿಸಲಾಗಿದೆ. ಮಕರಂ ಆರನೇ ಮೂರು ದಿನಗಳ ನಂತರ ಕರಿಯಟ್ಟಿ ಎಂಬ ಆಚರಣೆಯಾಗಿದೆ. ಧನು ಮಾಸದ ಎರಡನೇ ತಾರೀಖಿನಂದು ಬೆಳಗುವ ದೀಪವು ಇಡೀ ತಿಂಗಳು ಉರಿಯುತ್ತದೆ. ಈ ದಿನಗಳಲ್ಲಿ ಮುತ್ತಪ್ಪನಿಗೆ ಯಾವುದೇ ಆಚರಣೆಯನ್ನು ಕುನ್ನತ್ತೂರ್ ಪಾಡಿ ಹೊರತುಪಡಿಸಿ ಬೇರೆ ಯಾವುದೇ ಸ್ಥಳದಲ್ಲಿ ನಡೆಸಬೇಕಾಗಿಲ್ಲ. ಈ ಸಮಯದಲ್ಲಿ ಅವನನ್ನು ನೋಡಲು ಬಯಸುವವರು ಕುನತ್ತೂರ್ ಪಾಡಿಯಲ್ಲಿ ಮಾತ್ರ ಭೇಟಿ ನೀಡಬೇಕೆಂಬ ನಂಬಿಕೆಯೂ ಇದೆ. ಕುನ್ನತ್ತೂರ್ ಪಾಡಿಯ ಆಚರಣೆಗಳ ವೈವಿಧ್ಯತೆ ಕುತೂಹಲಕಾರಿಯಾಗಿದ್ದು, ಮುತ್ತಪ್ಪನ್ ಅಲ್ಲಿನ ಜನರ ಜೀವನವನ್ನು ಬೆಳಗುತ್ತಾನೆ ಎನ್ನುವ ಈ ಆಳವಾದ ನಂಬಿಕೆಯಿಂದ ಆಚರಣೆಗಳನ್ನು ಅತ್ಯಂತ ನಿಷ್ಠಾವಂತ ರೀತಿಯಲ್ಲಿ ನಡೆಸುವಂತೆ ಮಾಡಿದೆ. :: ನೆನಪಿನ ಸಂದೇಶ :: (ಇಲ್ಲಿ ಧಾರ್ಮಿಕ ಆಚರಣೆಗಳಿಗೆ ಮಾತ್ರ ಅವಕಾಶವಿದೆ. ಈ ಹಿಂದೆ ಕೊಟ್ಟಿಯೂರು ಉತ್ಸವ ನಡೆದ ಸಂದರ್ಭ ಅಲೆ ಸೃಷ್ಟಿಯಾದ ಹಾಗೆ ಕರ್ನಾಟಕದಿಂದ ಭಕ್ತರು ತೆರಳಿ ಅಲ್ಲಿನ ಪರಿಸರ, ವಾತವಾರಣ, ಧಾರ್ಮಿಕ ಆಚರಣೆ, ಸ್ವಚ್ಚತೆ ಹೀಗೆ ಎಲ್ಲದ್ದಕ್ಕು ದಕ್ಕೆ ತಂದಿದ್ದರು. ತಾವು ಹಾಕಿದ ಅಂಗಿ, ಒಳ ಉಡುಪುಗಳು, ಚಪ್ಪಲಿ, ಕೈಗೆ ಕಟ್ಟಿದ ದಾರಗಳು ಇವೆಲ್ಲವನ್ನು ಎಲ್ಲೆಂದರಲ್ಲಿ, ನದಿಯಲ್ಲಿ ಎಸೆದು ಅಪಾರ ಭಕ್ತಿಯನ್ನು ಪ್ರದರ್ಶಿಸಿ ನಾಚಿಕೆ ಪಡುವ ಹಾಗೆ ಮಾಡಿದ್ದರು. ಈಗಲೂ ಕೂಡ ಕೇರಳಿಗರು ಅದನ್ನು ನೆನಪಿಸಿಕೊಳ್ಳುತ್ತಾರೆ. ಕರ್ನಾಟಕ ಅಂದಾಗ ಕೊಟ್ಟಿಯೂರು ಅವರಿಗೆ ನೆನಪಾಗುತ್ತದೆ. ಹಾಗಾಗಿ ಯಾರೂ ಕೂಡ ಭಕ್ತಿಯ ಪರಾಕಾಷ್ಠೆ ಮೆರೆಯುವುದು ಬೇಡ. ಅಲ್ಲಿನ ನಂಬಿಕೆ, ಸ್ವಚ್ಚತೆ, ಧಾರ್ಮಿಕ ಆಚರಣೆಗೆ ಬೆಲೆ ನೀಡಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ಕಳಕಳಿಯ ಮನವಿ. ಇದನ್ನು ಪಾಲಿಸಿದ್ದಲ್ಲಿ ನಾನು ಎರಡು ದಿನ ಅಲ್ಲಿದ್ದು ಮಾಡಿದ ವರದಿ ಸಾರ್ಥಕವೆನಿಸಿಕೊಳ್ಳುತ್ತದೆ.)
ವಿ.ಎನ್. ರಜಿತ ಕಾರ್ಯಪ್ಪ, ವಿರಾಜಪೇಟೆ













