ಸುಂಟಿಕೊಪ್ಪ ಡಿ.22 NEWS DESK : ಚರ್ಚ್ ಆಫ್ ಸೌತ್ ಇಂಡಿಯಾದ ದಕ್ಷಿಣಪ್ರಾಂತ್ಯದ ಸುಂಟಿಕೊಪ್ಪದ ಇಮ್ಮಾನುವೇಲ್ ದೇವಾಲಯದಲ್ಲಿ ಕ್ರಿಸ್ಮಸ್ ಆಚರಣೆಯ ಅಂಗವಾಗಿ ಕೊಡಗು ವಲಯದ ವಿವಿಧ ದೇವಾಲಯಗಳಿಂದ ಮಹಿಳಾ ಕ್ರಿಸ್ಮಸ್ ಆಚರಿಸಲಾಯಿತು. ಸೋಮವಾರಪೇಟೆ, ಕುಶಾಲನಗರ, ಸುಂಟಿಕೊಪ್ಪ, ಮಡಿಕೇರಿ, ಆನಂದಪುರ, ಪಾಲಿಬೆಟ್ಟ ದೇವಾಲಯಗಳಲ್ಲಿರುವ ಮಹಿಳೆಯರು ಮತ್ತು ಯುವತಿಯರು ಸುಂಟಿಕೊಪ್ಪದ ಚರ್ಚ್ ಆಫ್ ಸೌತ್ ಇಂಡಿಯಾದ ದಕ್ಷಿಣಪ್ರಾಂತ್ಯದ ಇಮ್ಮಾನುವೇಲ್ ದೇವಾಲಯದ ಆವರಣದಲ್ಲಿ ಆಯೋಜಿಸಲಾಗಿದ್ದ ಮಹಿಳಾ ಕ್ರಿಸ್ಮಸ್ ಆಚರಣೆಯಲ್ಲಿ ಪ್ರಭು ಕ್ರಿಸ್ತರ ಜನನದ ಸಂದೇಶವನ್ನು ಗಾಯನ ಹಾಗೂ ರೂಪಕದ ಮೂಲಕ ಸಾರಿದರು. ನಂತರ ನೆರೆದಿದ್ದವರಿಗೆ ಕ್ರಿಸ್ಮಸ್ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಸಮಾರಂಭದಲ್ಲಿ ಚರ್ಚ್ ಆಫ್ ಸೌತ್ ಇಂಡಿಯಾದ ದಕ್ಷಿಣಪ್ರಾಂತ್ಯದ ಬಿಷೋಪ್ ಹೇಮಚಂದ್ರ ಅವರ ಪತ್ನಿ ಮಂಗಳೂರು ಪ್ರಾಂತಿಯ ಮಹಿಳಾ ಅಧ್ಯಕ್ಷೆ ಬಾಲಭಾರತಿ ಮಾತನಾಡಿ, ಮಹಿಳೆಯರು ಒಂದಾಗಿ ಸಮಾರಂಭವನ್ನು ಆಯೋಜಿಸಿರುವುದು ಉತ್ತಮ ಬೆಳವಣಿಗೆಯಾಗಿದೆ. ಇದು ಮಹಿಳೆಯರಲ್ಲಿರುವ ಪ್ರತಿಭೆಗಳನ್ನು ಹೊರತರಲು ಸಹಕಾರಿಯಾಗಿದ್ದು, ಇದರಿಂದ ಗ್ರಾಮೀಣ ಪ್ರದೇಶದ ಪ್ರತಿಭೆಗಳು ಹೊರ ಬರಲಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಸಮಾರಂಭದಲ್ಲಿ ಮಡಿಕೇರಿ ಶಾಂತಿ ದೇವಾಲಯದ ಧರ್ಮಗುರು ಮಧುಕಿರಣ್, ಕುಶಾಲನಗರದ ಮೆಡಕ್ ದೇವಾಲಯದ ಧರ್ಮಗುರು ಶ್ಯಾಮ್‍ವೆಲ್ ಮನೋಜ್ ಕುಮಾರ್, ಸೋಮವಾರಪೇಟೆ ಸಂತ ಜಾನ್ ದೇವಾಲಯದ ಧರ್ಮಗುರು ಪ್ರಿಯದರ್ಶಿನಿ, ಮಂಗಳೂರು ಪ್ರಾಂತಿಯ ಮಹಿಳಾ ಕಾರ್ಯದರ್ಶಿ ಸುಲೋಚನ ನಿರಂಜನ್, ಮಹಿಳಾ ವಲಯಾಧ್ಯಕ್ಷೆ ಅಕ್ಷಜೈಸನ್, ಸುಂಟಿಕೊಪ್ಪ ಇಮ್ಮಾನುವೇಲ್ ದೇವಾಲಯದ ಧರ್ಮಗುರು ಹಾಗೂ ವಲಯ ಅಧ್ಯಕ್ಷ ಜೈಸನ್ ಗೌಡ, ಆನಂದಪುರ ದೇವಾಲಯದ ಧರ್ಮಗುರು ಹಾಗೂ ವಲಯ ಕಾರ್ಯದರ್ಶಿ ಮಿಲನ್ ಚಕ್ರವರ್ತಿ, ಪಾಲಿಬೆಟ್ಟ ದೇವಾಲಯದ ಧರ್ಮಗುರು ಶಶಿಕುಮಾರ್ ಮತ್ತಿತರ ದೇವಾಲಯಗಳಿಂದ ಧರ್ಮಗರುಗಳು ಪಾಲ್ಗೊಂಡಿದ್ದರು.











