
ಮಡಿಕೇರಿ ಡಿ.22 NEWS DESK : ಗ್ರಾಮೀಣ ಜನರು ಸರ್ಕಾರದ ಸೌಲಭ್ಯಗಳನ್ನು ಪಡೆದು ಸ್ವ ಉದ್ಯೋಗ ಕೈಗೊಂಡು ಆರ್ಥಿಕವಾಗಿ ಸಬಲರಾಗುವತ್ತ ಗಮನಹರಿಸಬೇಕು ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಸಲಹೆ ನೀಡಿದರು. ಕೊಯನಾಡು ವಲಯ ಅರಣ್ಯ ಕಚೇರಿ ಬಳಿ ನೂತನವಾಗಿ ನಿರ್ಮಿಸಿರುವ ಅಧಿಕಾರಿಗಳ ವಸತಿ ಗೃಹವನ್ನು ಅವರು ಉದ್ಘಾಟಿಸಿ, 30 ಜನ ಕೃಷಿಕರಿಗೆ ತಲಾ 2 ಜೇನು ಪೆಟ್ಟಿಗೆ, ಹಾಗೂ 6 ಜನ ಮಹಿಳೆಯರಿಗೆ ಹೊಲಿಗೆಯಂತ್ರ ಹಸ್ತಾಂತರಿಸಿದರು. ಜೊತೆಗೆ ಊರುಬೈಲು ಮತ್ತು ಕೂಡಡ್ಕ ಸರ್ಕಾರಿ ಶಾಲೆಗೆ ಡಿಜಿಟಲ್ ಸಾಕ್ಷರತೆ ಉದ್ದೇಶದಿಂದ ಲ್ಯಾಪ್‍ಟಾಪ್ ಮತ್ತು ಪ್ರಾಜೆಕ್ಟರ್‍ನ್ನು ವಿತರಿಸಿದರು. ಬಳಿಕ ಮಾತನಾಡಿದ ಶಾಸರು, ಸ್ವಂತ ಶಕ್ತಿಯಿಂದ ಜೀವನ ರೂಪಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಜೇನು ಸಾಕಾಣಿಕೆಯ ಪೆಟ್ಟಿಗೆಯನ್ನು 30 ಜನರಿಗೆ ವಿತರಿಸಲಾಗಿದೆ. ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಡಿಜಿಟಲ್ ಸಾಕ್ಷರತೆ ಸಂಬಂಧ ಲ್ಯಾಪ್‍ಟಾಪ್ ಮತ್ತು ಪ್ರಾಜೆಕ್ಟರ್ ವಿತರಿಸಲಾಗಿದೆ. ಹಾಗೆಯೇ ಮಹಿಳೆಯರ ಸ್ವ ಉದ್ಯೋಗಕ್ಕಾಗಿ 6 ಜನ ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಿಸಲಾಗಿದೆ ಎಂದರು. ಕೊಡಗು ಮಾನವ ವನ್ಯಜೀವಿ ಸಂಘರ್ಷ ಉಪಶಮನ ಪ್ರತಿಷ್ಠಾನ ನಿಧಿ ವತಿಯಿಂದ ಸುಸ್ಥಿರ ಅಭಿವೃದ್ಧಿ ಚಟುವಟಿಕೆ ಅಂಗವಾಗಿ ಕಾಡಂಚಿನ ಗ್ರಾಮಸ್ಥರಿಗೆ ಸ್ವ ಉದ್ಯೋಗ ಕೈಗೊಳ್ಳಲು ಅರಣ್ಯ ಇಲಾಖೆಯಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಎ.ಎಸ್.ಪೊನ್ನಣ್ಣ ತಿಳಿಸಿದರು. ಸ್ವ ಉದ್ಯೋಗ ಕೈಗೊಳ್ಳುವುದರಿಂದ ಜವಾಬ್ದಾರಿ ಮತ್ತು ಹೊಣೆಗಾರಿಕೆ ಹೆಚ್ಚಾಗಲಿದೆ. ಆ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಸ್ವ ಉದ್ಯೋಗ ಕೈಗೊಂಡು ಪ್ರಗತಿ ಸಾಧಿಸುವತ್ತ ಗಮನಹರಿಸಬೇಕು ಎಂದರು. ಸ್ಥಳೀಯರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಅನ್ಯೋನ್ಯತೆಯಿಂದ ಇರಬೇಕು. ಕಾಡನ್ನು ಉಳಿಸಬೇಕು. ನಾಡಿನ ಜನರು ಸಹ ಅಭಿವೃದ್ಧಿಯತ್ತ ಸಾಗಬೇಕು. ಒಟ್ಟಾರೆ ಸಮತೋಲನದಿಂದ ಎಲ್ಲರೂ ಬದುಕು ಕಟ್ಟಿಕೊಳ್ಳುವಂತಾಗಬೇಕು ಎಂದು ಎ.ಎಸ್.ಪೊನ್ನಣ್ಣ ಅವರು ಅಭಿಪ್ರಾಯಪಟ್ಟರು. ಕೊಡಗು ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೋನಲ್ ವೃಷ್ಣಿ ಅವರು ಮಾತನಾಡಿ, ಅರಣ್ಯ ಇಲಾಖೆಯಿಂದ ಕಾಡಂಚಿನ ಜನರಿಗೆ ವಿವಿಧ ಸೌಲಭ್ಯ ಕಲ್ಪಿಸಲಾಗುತ್ತದೆ. ಇದನ್ನು ಬಳಸಿಕೊಂಡು ಅರಣ್ಯ ಸಂರಕ್ಷಣೆಗೆ ಕೈಜೋಡಿಸಬೇಕು ಎಂದು ಅವರು ಹೇಳಿದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಅಭಿಷೇಕ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸೆಂದಿಲ್ ಕುಮಾರ್, ವಲಯ ಅರಣ್ಯಾಧಿಕಾರಿ ದೇಚಮ್ಮ, ಸ್ಥಳೀಯರಾದ ಪಿ.ಎಲ್.ಸುರೇಶ್, ಕಾಡುಮನೆ ಪುರುಷೋತ್ತಮ, ಕುಸುಮಾಕರ, ಹರೀಶ್ ನಿರಂಜನ, ಆಶಾ, ಇತರರು ಇದ್ದರು.











