ಮಡಿಕೇರಿ ಡಿ.23 NEWS DESK : ಕೊಡಗಿನ ಹಿರಿಯ ಜಾನಪದ ಕಲಾವಿದರಾದ ಕುಡಿಯ ಸಮುದಾಯದ ಅಮ್ಮಣಿ ಅವರಿಗೆ ಕರ್ನಾಟಕ ಜಾನಪದ ಅಕಾಡೆಮಿ ವಾರ್ಷಿಕ ಗೌರವ ಪ್ರಶಸ್ತಿ ಲಭಿಸಿದೆ. ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವ ಪ್ರಸಾದ್ ಹಾಗೂ ರಿಜಿಸ್ಟ್ರಾರ್ ಎನ್.ನಮೃತ ಅವರು ಇಂದು ಅಕಾಡೆಮಿಯ ವಾರ್ಷಿಕ ಪ್ರಶಸ್ತಿಗಳನ್ನು ಘೋಷಿಸಿದ್ದಾರೆ. ಕೊಡಗಿನ ವಿರಾಜಪೇಟೆ ತಾಲ್ಲೂಕಿನ ಹೆಗ್ಗಳ ಸಮೀಪದ ತೋರ ಗ್ರಾಮದ ಅಮ್ಮಣಿ ಅವರು ‘ಕುಡಿಯ ಜನಾಂಗದ ಹಾಡುಗಾರಿಕೆ ಮತ್ತು ಸೂಲಗಿತ್ತಿ’ ವಿಭಾಗಕ್ಕೆ ಸಂಬಂಧಿಸಿದಂತೆ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಕೊಡಗಿನ ಕುಡಿಯ ಸಮಾಜಕ್ಕೆ ಸೇರಿದ 60 ವರ್ಷದ ಅಮ್ಮಣಿ ಅವರು ಪತಿ ಭೀಮಯ್ಯ ಅವರೊಂದಿಗೆ ತೋರದಲ್ಲಿ ಕೃಷಿ ಚಟುವಟಿಕೆಗಳನ್ನು ನಡೆಸಿಕೊಂಡು ಬದುಕು ಕಟ್ಟಿಕೊಂಡವರು. ಇವರು ಕಳೆದ ನಾಲ್ಕು ದಶಕಗಳಿಂದ ಕುಡಿಯ ಸಮೂಹದ ವಿಶಿಷ್ಟ ಸಂಸ್ಕøತಿಯ ಜಾನಪದ ಹಾಡು ಮತ್ತು ಕುಣಿತವನ್ನು ರಕ್ತಗತ ಮಾಡಿಕೊಂಡು ಅದನ್ನು ಯುವ ಸಮೂಹಕ್ಕೆ ತಲುಪಿಸುವ ಮಹತ್ತರ ಕಾರ್ಯವನ್ನು ಮಾಡುತ್ತಿದ್ದಾರೆ. ಅಮ್ಮಣಿ ಅವರು ಸೂಲಗಿತ್ತಿಯಾಗಿಯೂ ಸೇವೆ ಸಲ್ಲಿಸಿರುವುದು ವಿಶೇಷ. ಇವರ ಪುತ್ರಿ ಪ್ರಮೀಳ ಅವರು ಹೇಳುವಂತೆ, ಅಜ್ಜಿಯ ಮೂಲಕ ಕುಡಿಯ ಹಾಡು ಮತ್ತು ನೃತ್ಯವನ್ನು ತಮ್ಮದನ್ನಾಗಿಸಿಕೊಂಡ ಅಮ್ಮಣಿ ಅವರು, ಸಾಕಷ್ಟು ವರ್ಷಗಳಿಂದ ಅಪರೂಪದ ಕಲೆಯನ್ನು ಉಳಿಸಿ ಬೆಳೆಸಿದ್ದಾರೆ. ಪ್ರಶಸ್ತಿ ದೊರೆತ್ತಿರುವ ಬಗ್ಗೆ ಅಮ್ಮಣಿ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.











