ಸಿದ್ದಾಪುರ ಡಿ.23 NEWS DESK : ಯಂಗ್ ಇಂಡಿಯಾ ಯೂಥ್ ಕ್ಲಬ್ ನ 55ನೇ ಸುವರ್ಣ ಮಹೋತ್ಸವದ ಸಂಭ್ರಮಕ್ಕಾಗಿ ರಾಷ್ಟ್ರೀಯ ಮಟ್ಟದ ಮುಕ್ತ 5s ಫುಟ್ಬಾಲ್ ಪಂದ್ಯಾವಳಿ ಜ.9, 10 ಮತ್ತು 11 ರಂದು ಪಾಲಿಬೆಟ್ಟ ಮೈದಾನದಲ್ಲಿ ನಡೆಯಲಿದ್ದು, ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು
ಯಂಗ್ ಇಂಡಿಯಾ ಯೂಥ್ ಕ್ಲಬ್ ಅಧ್ಯಕ್ಷ ಪಿ.ಎ.ಸಲೀಂ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ, ಕೇರಳ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳ ಮೂವತ್ತಕ್ಕೂ ಹೆಚ್ಚು ತಂಡಗಳು ಭಾಗವಹಿಸಲಿದ್ದು, ತಂಡಗಳ ನೋಂದಾವಣೆ ಕಾರ್ಯ ನಡೆಯುತ್ತಿದೆ. ಇದೇ ಪ್ರಥಮ ಬಾರಿಗೆ ರಾಷ್ಟ್ರೀಯ ಫುಟ್ಬಾಲ್ ಪಂದ್ಯಾವಳಿ ಗ್ಯಾಲರಿಯಲ್ಲಿ ನಡೆಯಲಿದ್ದು, ಮೈದಾನದ ಸಿದ್ಧತೆಗೆ ಟಾಟಾ ಕಾಫಿ ಸಂಸ್ಥೆ ಹೆಚ್ಚಿನ ಸಹಕಾರ ನೀಡುತ್ತಿದೆ. ರಾಷ್ಟ್ರೀಯ ಮಟ್ಟದ ಫುಟ್ಬಾಲ್ ಪಂದ್ಯಾವಳಿ ಉದ್ಘಾಟನೆ ಹಾಗೂ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು, ದಾನಿಗಳು ಗಣ್ಯರು, ಹಿರಿಯ ಆಟಗಾರರು ಆಗಮಿಸಲಿದ್ದಾರೆ ಎಂದರು. ಸಂಘದ ಉಪಾಧ್ಯಕ್ಷ ಮುಹಮ್ಮದ್ ಶಮೀಲ್ ಮಾತನಾಡಿ, 55 ವರ್ಷ ಪೂರೈಸಿರುವ ಯಂಗ್ ಇಂಡಿಯಾ ಯೂತ್ ಕ್ಲಬ್ ಹಲವಾರು ಕ್ರೀಡಾಪಟುಗಳನ್ನು ಕ್ರೀಡಾ ಸಾಧನೆಯ ಮೂಲಕ ಮುಖ್ಯ ವಾಹಿನಿಗೆ ತರಲು ಮುಂದಾಗಿದೆ. ಈ ಹಿಂದೆ ಹಿರಿಯರು ಕಟ್ಟಿ ಬೆಳೆಸಿದ ಈ ಸಂಘವನ್ನು ಉತ್ತಮ ರೀತಿಯಲ್ಲಿ ಮುನ್ನಡೆಸುವ ಮೂಲಕ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಿ ಸಮಾಜ ಸೇವೆಯೊಂದಿಗೆ ಸಂಘಟನೆ ಮಾದರಿಯಾಗಿ ಮುಂದುವರಿಯಲಿದೆ ಎಂದು ಹೇಳಿದರು. ಹಿರಿಯ ಆಟಗಾರ ಅಬ್ದುಲ್ ಖಾದರ್ ಮಾತನಾಡಿ, ಗ್ರಾಮದಲ್ಲಿರುವ ಯಂಗ್ ಇಂಡಿಯಾ ಯೂಥ್ ಕ್ಲಬ್
55 ವರ್ಷ ಪೂರೈಸಿರುವ ಯುವಕ ಸಂಘ ಹಲವಾರು ಸಮಾಜ ಸೇವ ಕಾರ್ಯಗಳೊಂದಿಗೆ ಗ್ರಾಮೀಣ ಕ್ರೀಡಾಪಟುಗಳನ್ನು ಗುರುತಿಸುವಲ್ಲಿ ರಾಜ್ಯಕ್ಕೆ ಮಾದರಿಯಾಗಿದ್ದು, ರಾಷ್ಟ್ರೀಯ ಮಟ್ಟದ ಫುಟ್ಬಾಲ್ ಪಂದ್ಯಾವಳಿಯನ್ನು ಗ್ರಾಮದಲ್ಲಿ ಆಯೋಜಿಸುವ ಮೂಲಕ ರಾಷ್ಟ್ರೀಯ ಮಟ್ಟದ ಆಟಗಾರರನ್ನ ಜಿಲ್ಲೆಗೆ ಪರಿಚಯಿಸುತ್ತಿರುವುದು ಹೆಮ್ಮೆಯ ವಿಷಯ ಎಂದರು. ಸಂಘದ ಪ್ರಧಾನ ಕಾರ್ಯದರ್ಶಿ ಪಿ.ಆರ್.ಅಬ್ದುಲ್ ಗಪೂರ್ ಮಾತನಾಡಿ, ರಾಷ್ಟ್ರೀಯ ಫುಟ್ಬಾಲ್ ಪಂದ್ಯಾವಳಿ ಆಯೋಜನೆಯಿಂದ ವಿವಿಧ ಕ್ರೀಡೆಯಲ್ಲಿರುವ ಕ್ರೀಡಾಪಟುಗಳು ಹೆಚ್ಚಿನ ಸಹಕಾರ ಪ್ರೋತ್ಸಾಹ ನೀಡುತ್ತಿರುವುದರಿಂದ ಫುಟ್ಬಾಲ್ ಪಂದ್ಯಾವಳಿ ಹಬ್ಬದ ವಾತಾವರಣದಲ್ಲಿ ಕಂಡು ಬರುತ್ತಿದ್ದು, ಎಲ್ಲಾ ಬಾಂಧವರು ಕ್ರೀಡಾಪಟುಗಳು ಹೆಚ್ಚಿನ ಸಹಕಾರ ನೀಡುತ್ತಿದ್ದಾರೆ ಎಂದರು. ಪತ್ರಿಕೆಗೋಷ್ಠಿಯಲ್ಲಿ ಜಂಟಿ ಕಾರ್ಯದರ್ಶಿ ಅಬ್ದುಲ್ ರಶೀದ್, ಕೋಶಧಿಕಾರಿ ಎಂ.ಯು.ಮುನೀರ್, ಪ್ರಮುಖರಾದ ಹಸೈನಾರ್, ಜೈನಲ್ ಆಬಿದ್, ನೌಶಾದ್, ಸಮಿಮ್ ಮತ್ತಿತರರು ಉಪಸ್ಥಿತರಿದ್ದರು.











