
ಮಡಿಕೇರಿ ಡಿ.24 NEWS DESK : ಮುಂದಿನ ವರ್ಷ ಏಪ್ರಿಲ್ ತಿಂಗಳಿನಲ್ಲಿ ನಡೆಯುವ ಕೊಡವ ಕುಟುಂಬಗಳ ನಡುವಿನ ‘ಚೇನಂಡ ಕಪ್ ಹಾಕಿ ಉತ್ಸವ’ದ ಅಂಗವಾಗಿ ಪ್ರತಿಭಾವಂತ ಯುವ ಹಾಕಿ ಪಟುಗಳನ್ನು ಬೆಳಕಿಗೆ ತರುವ ಪ್ರಯತ್ನವಾಗಿ ಜ.1 ರಿಂದ 4 ರವರೆಗೆ ಮೂರ್ನಾಡುವಿನಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಹಾಕಿ ಪಂದ್ಯಾವಳಿ ನಡೆಯಲಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚೇನಂಡ ಕಪ್ ಹಾಕಿ ಉತ್ಸವದ ಆಯೋಜನಾ ಸಮಿತಿಯ ಅಧ್ಯಕ್ಷ ಚೇನಂಡ ಕಂಬಣಿ ಕರುಂಬಯ್ಯ ಅವರು 4ನೇ ತರಗತಿಯಿಂದ 7ನೇ ತರಗತಿವರೆಗಿನ ಪ್ರಾಥಮಿಕ ವಿಭಾಗ ಮತ್ತು 8 ರಿಂದ 10ನೇ ತರಗತಿವರೆಗಿನ ಪ್ರೌಢಶಾಲಾ ವಿಭಾಗದ ಬಾಲಕ ಬಾಲಕಿಯರಿಗಾಗಿ ಮೂರ್ನಾಡು ಪ್ರಥಮ ದರ್ಜೆ ಕಾಲೇಜು ಮೈದಾನದಲ್ಲಿ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಈ ಪಂದ್ಯಾವಳಿ ಯಾವುದೇ ಒಂದು ಸಮೂಹಕ್ಕೆ ಸೀಮಿತವಾಗಿಲ್ಲ, ಮುಕ್ತವಾಗಿರುತ್ತದೆ ಎಂದು ಸ್ಪಷ್ಟಪಡಿಸಿದರು.
ಪಂದ್ಯಾವಳಿಗೆ ಕೊಡಗಿನ ಎಲ್ಲಾ ಪಾಥಮಿಕ ಮತ್ತು ಪೌಢಶಾಲಾ ಶಾಲೆಗಳ ಪ್ರಮುಖರು ತಮ್ಮ ಶಾಲೆಯ ಹಾಕಿ ತಂಡಗಳನ್ನು ಕಳುಹಿಸಿ ಕೊಡಬೇಕು. ಯಾವುದೇ ಶಾಲೆಯಲ್ಲಿ ಎರಡು ಮೂರು ಹಾಕಿ ಆಟಗಾರರಿದ್ದು, ತಂಡ ಇಲ್ಲದಿದ್ದಲ್ಲಿ, ಅಂತಹ ಆಟಗಾರರಿಗೂ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಅವಕಾಶವನ್ನು ನೀಡಲಾಗುತ್ತದೆ. ಕ್ರೀಡಾ ಪ್ರತಿಭೆಗಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು. ಹಾಕಿ ಪಂದ್ಯಗಳನ್ನು ಹಾಕಿ ಕೂರ್ಗ್‍ನ ನುರಿತ ತೀರ್ಪುಗಾರರು ನಡೆಸಿಕೊಡಲಿದ್ದಾರೆ. ವಿಜೇತರಿಗೆ ಮತ್ತು ರನ್ನರ್ಸ್ ಅಪ್ ತಂಡಕ್ಕೆ ಆಕರ್ಷಕ ಬಹುಮಾನ ಹಾಗೂ ಹಾಕಿ ಕೂರ್ಗ್ ವತಿಯಿಂದ ಪ್ರಶಸ್ತಿ ಪತ್ರವನ್ನು ವಿತರಿಸಲಾಗುತ್ತದೆ ಎಂದು ಹೇಳಿದರು. ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಳ್ಳಲು ಡಿ.28 ಕೊನೆಯ ದಿನವಾಗಿದೆ. ಈ ಅವಧಿಯ ಒಳಗಾಗಿ ಹರ್ಷ ಅಯ್ಯಣ್ಣ ಮೊ.8762349951, ದೀನಾ ಚಂಗಪ್ಪ ಮೊ.9481114095 ಹಾಗೂ ವಿಪಿನ್ ಗಣಪತಿ ಮೊ.9035198434 ನ್ನು ಸಂಪರ್ಕಿಸಬೇಕೆಂದು ಚೇನಂಡ ಕಂಬಣಿ ಕರುಂಬಯ್ಯ ತಿಳಿಸಿದರು. *30 ಆಟಗಾರರ ಆಯ್ಕೆ* ಶಾಲಾ ಮಕ್ಕಳ ಈ ಪಂದ್ಯಾವಳಿಯಲ್ಲಿ ಪ್ರತಿಭಾವಂತ 30 ಹಾಕಿ ಆಟಗಾರರನ್ನು ಅಂತರಾಷ್ಟ್ರೀಯ ಮಟ್ಟದ ನಿವೃತ್ತ ಒಲಂಪಿಯನ್‍ಗಳು ಆಯ್ಕೆ ಮಾಡಲಿದ್ದಾರೆ. ಆಯ್ಕೆಯಾದ ಆಟಗಾರರಿಗೆ ಏ.5 ರಿಂದ ಮೇ 2ರವರೆಗೆ ನಾಪೋಕ್ಲುವಿನಲ್ಲಿ ನಡೆಯಲಿರುವ ಚೇನಂಡ ಕಪ್ ಹಾಕಿ ಉತ್ಸವದ ಸಂದರ್ಭ ಉಚಿತವಾಗಿ ತರಬೇತಿಯನ್ನು ನೀಡಲಾಗುತ್ತದೆ. ತರಬೇತಿಯ ಅವಧಿಯಲ್ಲಿ ಅಂತಿಮವಾಗಿ ಆಯ್ಕೆಯಾಗುವ 12 ಮಂದಿ ಆಟಗಾರರಿಗೆ ‘ಕ್ರೀಡಾ ಕಿಟ್’ಗಳನ್ನು ಒದಗಿಸಲಾಗುತ್ತದೆ, ಅಲ್ಲದೆ ಕ್ರೀಡಾ ವಸತಿ ಶಾಲೆಯ ಪ್ರವೇಶಕ್ಕೆ ನೆರವಾಗುವುದರೊಂದಿಗೆ ಅವರನ್ನು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳಾಗಿ ರೂಪಿಸಲು ಅಗತ್ಯ ಪ್ರೋತ್ಸಾಹ ಬೆಂಬಲವನ್ನು ನೀಡಲಾಗುತ್ತದೆ ಎಂದರು. ಸುದ್ದಿಗೋಷ್ಠಿಯಲ್ಲಿ ಚೇನಂಡ ಕಪ್ ಹಾಕಿ ಉತ್ಸವ ಸಮಿತಿ ಆಯೋಜನಾ ಸಮಿತಿಯ ಕಾರ್ಯದರ್ಶಿ ಚೇನಂಡ ಮಧು ಮಾದಯ್ಯ, ವಕ್ತಾರ ಚೇನಂಡ ಸುರೇಶ್ ನಾಣಯ್ಯ, ನಿರ್ದೇಶಕರಾದ ಚೇನಂಡ ನಂದಾ ಜಗದೀಶ್ ಹಾಗೂ ಚೇನಂಡ ಸಂಪತ್ ಭೀಮಯ್ಯ ಉಪಸ್ಥಿತರಿದ್ದರು.











