
ಮಡಿಕೇರಿ ಡಿ.24 NEWS DESK : ಕಾಳಸಂತೆಯಲ್ಲಿ ‘ಅನ್ನಭಾಗ್ಯ’ ಯೋಜನೆಯ ಅಕ್ಕಿ ಮಾರಾಟವಾಗುವುದನ್ನು ತಡೆಯಲು ಅಗತ್ಯ ಕ್ರಮ ಕೈಗೊಳ್ಳುವಂತೆ ಪೊನ್ನಂಪೇಟೆ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಪ್ರಶಾಂತ್ ಸೂಚನೆ ನೀಡಿದ್ದಾರೆ. ವಿರಾಜಪೇಟೆ ತಾಲ್ಲೂಕು ಪಂಚಾಯಿತಿ ಸಾಮರ್ಥ್ಯಸೌಧದಲ್ಲಿ ನಡೆದ ಪೊನ್ನಂಪೇಟೆ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬಡವರ ಹಸಿವು ನೀಗಿಸುವುದಕ್ಕಾಗಿ ‘ಅನ್ನಭಾಗ್ಯ’ ಯೋಜನೆಯ ಮೂಲಕ ಅಕ್ಕಿಯನ್ನು ವಿತರಿಸಲಾಗುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಅಕ್ಕಿ ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವ ಕುರಿತು ಆರೋಪಗಳಿವೆ. ನ್ಯಾಯಬೆಲೆ ಅಂಗಡಿಗಳಲ್ಲಿ ಸೂಚನಾ ಫಲಕ ಅಳವಡಿಸಬೇಕೆನ್ನುವ ನಿಯಮವಿದ್ದರೂ ಅದನ್ನು ಪಾಲಿಸುತ್ತಿಲ್ಲ. ತಕ್ಷಣ ಸೂಚನಾ ಫಲಕಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಬೇಕು ಎಂದರು. ಸರಕಾರದ ಯೋಜನೆಗಳು ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮಾರ್ಚ್ ತಿಂಗಳಿನಲ್ಲಿ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲು ಸಭೆ ನಿರ್ಧರಿಸಿತು. ಚೆಸ್ಕಾಂ ಇಲಾಖೆಯಿಂದ ಬಹುತೇಕ ಕಾಮಗಾರಿಗಳು ಪೂರ್ಣಗೊಂಡಿದ್ದು, ಸಿಬ್ಬಂದಿಗಳು ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸಿದ್ದಾರೆ ಎಂದು ಸಭೆಯಲ್ಲಿ ಸರ್ವಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದರು. ಪೊನ್ನಂಪೇಟೆ ತಾಲ್ಲೂಕಿಗೆ 151.97 ಅನುದಾನ ಬಿಡುಗಡೆಯಾಗಿದ್ದು 56 ಕೋಟಿ ರೂ.ವೆಚ್ಚದ ಕಾಮಗಾರಿಗಳು ತಾಲ್ಲೂಕಿನಲ್ಲಿ ಪೂರ್ಣಗೊಂಡಿದೆ ಎಂದು ಸಭೆಗೆ ಚೆಸ್ಕಾಂ ಅಧಿಕಾರಿಯವರು ಮಾಹಿತಿ ನೀಡಿದರು. ತಾಲ್ಲೂಕಿನಲ್ಲಿ 99.26 ರಷ್ಟು ಗೃಹ ಜ್ಯೋತಿ ಯೋಜನೆಯನ್ನು ಸದುಪಯೋಗಪಡಿಸಿಕೊಂಡಿದ್ದಾರೆ. ವರ್ಷದ ಅಂತ್ಯದ ಒಳಗಾಗಿ ಎಲ್ಲಾ ವಿದ್ಯುತ್ ಸಂಬಂಧಿತ ಕಾಮಗಾರಿಗಳು ಪೂರ್ಣಗೊಳಿಸಲು ಕ್ರಮವಹಿಸಿ ಎಂದು ಅಧ್ಯಕ್ಷರು ಚೆಸ್ಕಾಂ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು. ಗೃಹ ಲಕ್ಷ್ಮಿ ಹಣವು ಆಗಸ್ಟ್ ವರೆಗೆ ಮಾತ್ರ ಜನರ ಖಾತೆಗೆ ಜಮೆಯಾಗಿರುತ್ತದೆ, ಬಾಕಿ ಇರುವ ಹಣವು ಮುಂದಿನ ದಿನಗಳಲ್ಲಿ ಜಮೆಯಾಗುತ್ತದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಯುವನಿಧಿ ಯೋಜನೆಯಡಿ ತಾಲ್ಲೂಕಿನ ವ್ಯಾಪ್ತಿಯಲ್ಲಿ ಉದ್ಯೋಗ ಮೇಳವನ್ನು ಕೈಗೊಳ್ಳಲು ಕ್ರಮವಹಿಸಿ ವಿದ್ಯಾರ್ಥಿಗಳಿಗೆ ಉದ್ಯೋಗವಕಾಶವನ್ನು ಕಲ್ಪಿಸಿಕೊಡಲು ಶ್ರಮಿಸಿ ಎಂದು ಉದ್ಯೋಗ ವಿನಿಮಯ ಅಧಿಕಾರಿಗಳಿಗೆ ತಿಳಿಸಿದರು. ಸಭೆಯಲ್ಲಿ ವಿರಾಜಪೇಟೆ ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿಗಳಾದ ಕೆ.ಸಿ.ಅಪ್ಪಣ್ಣ, ಗ್ಯಾರಂಟಿ ಯೋಜನೆಯ ಸದಸ್ಯರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.











