ಮಡಿಕೇರಿ ಡಿ.24 NEWS DESK : ಕುಶಾಲನಗರ-ಮಡಿಕೇರಿ ರಾಷ್ಟ್ರೀಯ ಹೆದ್ದಾರಿ ಆನೆಕಾಡು ಮೀಸಲು ಅರಣ್ಯ ಪ್ರದೇಶದ ವ್ಯಾಪ್ತಿಯ ರಸ್ತೆ ಬದಿಯಲ್ಲಿ ಪ್ರವಾಸಿಗರು ಎಸೆದಿದ್ದ ಅನುಪಯುಕ್ತ ವಸ್ತುಗಳು, ತ್ಯಾಜ್ಯವನ್ನು ತೆರವುಗೊಳಿಸುವ ಕಾಯಕದಲ್ಲಿ ತೊಡಗಿಸಿಕೊಂಡ ಸುಂಟಿಕೊಪ್ಪ ಪರಿಸರ ಪ್ರೇಮಿ ಡೇವಿಡ್ ಡಿಸೋಜಾ ಅವರನ್ನು ಕುಶಾಲನಗರದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಕರ್ನಾಟಕ ರಕ್ಷಣಾ ವೇದಿಕೆ ಕುಶಾಲನಗರ ತಾಲ್ಲೂಕು ಅಧ್ಯಕ್ಷರಾದ ಅಣ್ಣಯ್ಯ ನೇತೃತ್ವದಲ್ಲಿ ಸಮೀಪದ ಕಿಂಗ್ಸ್ ವೇ ರೆಸಾರ್ಟ್ ಸಭಾಂಗಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಸ್ವಚ್ಛ ಕೊಡಗು ಸುಂದರ ಕೊಡಗು ಅಭಿಯಾನದಿಂದ ಪ್ರೇರಣೆಗೊಂಡ ಡೇವಿಡ್ ತಾನು ತೆರಳುವ ಮಾರ್ಗದಲ್ಲಿ ಆನೆಕಾಡು ಮೀಸಲು ಅರಣ್ಯ ಬಳಿ ಎಲ್ಲೆಂದರಲ್ಲಿ ಪ್ರವಾಸಿಗರು ಎಸೆದಿರುವ ತ್ಯಾಜ್ಯಗಳನ್ನು ಸತತ ನಾಲ್ಕು ದಿನಗಳ ಕಾಲ ತೆರವುಗೊಳಿಸುವ ಕಾರ್ಯ ಕೈಗೊಂಡಿದ್ದಾರೆ. 7ನೇ ಹೊಸಕೋಟೆ ಮೆಟ್ನಳ್ಳ ಬಳಿಯಿಂದ ಆನೆಕಾಡು ವ್ಯಾಪ್ತಿಯ ಉದ್ದಕ್ಕೂ ಪ್ಲಾಸ್ಟಿಕ್ ಮತ್ತು ನಿರುಪಯುಕ್ತ ವಸ್ತುಗಳನ್ನು ಸಂಗ್ರಹಿಸಿ ನಂತರ ಗುಡ್ಡೆ ಹೊಸೂರು ಗ್ರಾಮ ಪಂಚಾಯಿತಿ ಸಹಕಾರದೊಂದಿಗೆ ಟ್ರ್ಯಾಕ್ಟರ್ ನಲ್ಲಿ ಸಾಗಿಸಿ ವಿಲೇವಾರಿ ಮಾಡಲು ಕ್ರಮ ಕೈಗೊಂಡಿದ್ದಾರೆ. ಸುಮಾರು ಮೂರು ಟ್ರ್ಯಾಕ್ಟರ್ ಪ್ರಮಾಣದಷ್ಟು ಕಸ ತೆರವುಗೊಳಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಅವರ ಪರಿಶ್ರಮ ಮತ್ತು ಪರಿಸರ ಪ್ರೇಮ ಗಮನಿಸಿದ ಕುಶಾಲನಗರದ ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಕೊಡಗು ಅಭಿವೃದ್ಧಿ ಸಮಿತಿ ಪದಾಧಿಕಾರಿಗಳು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭ ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕು ಘಟಕದ ಪ್ರಮುಖರಾದ ಧನರಾಜ್, ಆನಂದ, ಯೋಗೀಶ್, ದಿವ್ಯ, ಜ್ಯೋತಿ, ಬಿಂದು ಮತ್ತು ಕೊಡಗು ಅಭಿವೃದ್ಧಿ ಸಮಿತಿಯ ಸಂಚಾಲಕರಾದ ಎಂ.ಎಂ.ದಾವೂದ್, ಲವ, ಸುಂಟಿಕೊಪ್ಪ ರವಿ ಗೌಡ, ಕಾವೇರಿ ಪರಿಸರ ರಕ್ಷಣಾ ಬಳಗದ ಅಧ್ಯಕ್ಷರಾದ ಚಂದ್ರಮೋಹನ್ ಮತ್ತು ಇತರರು ಇದ್ದರು.










