ಮಡಿಕೇರಿ ಡಿ.25 NEWS DESK : ಮಡಿಕೇರಿಯ ಶ್ರೀ ಅಯ್ಯಪ್ಪ ಭಕ್ತ ವೃಂದದ ವತಿಯಿಂದ ನಗರದ ಶ್ರೀ ಕೋಟೆ ಮಾರಿಯಮ್ಮ ದೇವಾಲಯದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಅಪ್ಪ ಪೂಜೆ ಶ್ರದ್ಧಾಭಕ್ತಿಯಿಂದ ಜರುಗಿತು. ವಿಜಯ್ ಗುರುಸ್ವಾಮಿ ನೇತೃತ್ವದಲ್ಲಿ ಬಾಳೆ ದಿಂಡಿನ ಅಲಂಕೃತ ಮಂಟಪ ನಿರ್ಮಿಸಿ ಶಬರಿ ಗಿರಿವಾಸ ಶ್ರೀ ಅಯ್ಯಪ್ಪನ ಮೂರ್ತಿ ಪ್ರತಿಷ್ಠಾಪಿಸಿ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. ಇದೇ ವೇಳೆ ಕನ್ನಿ ಪೂಜೆಯನ್ನು ನಡೆಸಲಾಯಿತು. ಬಳಿಕ ನೂರಾರು ಮಂದಿ ವೃತಾಧಾರಿಗಳು ಶರಣು ಕರೆದು ಅಯ್ಯಪ್ಪ ಸ್ವಾಮಿಯ ನಾಮ ಸ್ಮರಣೆಯೊಂದಿಗೆ ಕುದಿಯುವ ತುಪ್ಪದಲ್ಲಿ ಬೇಯುತ್ತಿದ್ದ ಕಜಾಯವನ್ನು ಕೈಯಿಂದ ಹೊರ ತೆಗೆದು ಶ್ರೀ ಅಯ್ಯಪ್ಪನಿಗೆ ಸಮರ್ಪಿಸಿದರು. ನಗರದ ವಿವಿಧ ಕಡೆಗಳಿಂದ ಆಗಮಿಸಿದ್ದ ಅಯ್ಯಪ್ಪ ವೃತಾಧಾರಿಗಳು ಶಬರಿ ಮಲೆ ಅಯ್ಯಪ್ಪನನ್ನು ಭಜಿಸುವ ಮೂಲಕ ಭಕ್ತಿ ಮೆರೆದರು. ಪುಟ್ಟ ಮಕ್ಕಳು ಕೂಡ ಅಯ್ಯಪ್ಪ ವೃತಾಧಾರಿಗಳಾಗಿ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಅಯ್ಯಪ್ಪ ಸ್ವಾಮಿಗೆ ಮಹಾಮಂಗಳಾರತಿ ಬೆಳಗಿದ ಬಳಿಕ ನೆರೆದಿದ್ದ ಭಕ್ತರಿಗೆ ಮತ್ತು ಅಯ್ಯಪ್ಪ ವೃತಾಧಾರಿಗಳಿಗೆ ಅನ್ನ ಪ್ರಸಾದ ವಿತರಿಸಲಾಯಿತು.











