ಮಡಿಕೇರಿ ಡಿ.26 NEWS DESK : ಪಾಂಡಂಡ ಕುಟ್ಟಪ್ಪ ಅವರ ಕನಸಿನ ಕೂಸಾದ ಕೊಡವ ಕೌಟುಂಬಿಕ ಹಾಕಿ ಉತ್ಸವ ಬೆಳ್ಳಿ ಮಹೋತ್ಸವವನ್ನು ಆಚರಿಸಿಕೊಂಡ ಹಿನ್ನೆಲೆಯಲ್ಲಿ ಕೊಡವ ಹಾಕಿ ಅಕಾಡೆಮಿ ವತಿಯಿಂದ ಆಯೋಜನೆಗೊಂಡಿರುವ ‘ಲೆವಿಸ್ಟಾ ಕೊಡವ ಹಾಕಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿ’ ಮೂರ್ನಾಡಿನಲ್ಲಿ ಉದ್ಘಾಟನೆಗೊಂಡಿತು. ಕಳೆದ 25 ವರ್ಷಗಳ ಕಾಲ ನಡೆದ ಪಂದ್ಯಾವಳಿಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ 13 ತಂಡಗಳ ನಡುವೆ ಟ್ರೋಫಿಗಾಗಿ ಐದು ದಿನಗಳ ಕಾಲ ಸೆಣಸಾಟ ನಡೆಯಲಿದೆ. ಹಾಕಿ ಕೂರ್ಗ್, ಎಂ.ಬಾಡಗ ಸ್ಪೋಟ್ರ್ಸ್ ರಿಕ್ರಿಯೇಷನ್ ಸಂಸ್ಥೆ ಮತ್ತು ಮೂರ್ನಾಡು ವಿದ್ಯಾಸಂಸ್ಥೆಯ ಸಹಕಾರದೊಂದಿಗೆ ಮೂರ್ನಾಡಿನ ಬಾಚೆಟ್ಟೀರ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯಾವಳಿಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಏಕಲವ್ಯ ಪ್ರಶಸ್ತಿ ವಿಜೇತರಾದ ಒಲಂಪಿಯನ್ ಬೊಳ್ಳಂಡ ಪ್ರಮೀಳ ಅಯ್ಯಪ್ಪ ಅವರು ಪೋಷಕರು ತಮ್ಮ ಕನಸನ್ನು ಮಕ್ಕಳ ಮೇಲೆ ಹೇರದೆ, ಮಕ್ಕಳ ಕನಸನ್ನು ನನಸು ಮಾಡಲು ಮುಂದಾಗಬೇಕು ಮತ್ತು ಕ್ರೀಡಾಸಕ್ತಿಗೆ ಉತ್ತೇಜನ ನೀಡಬೇಕೆಂದು ಸಲಹೆ ನೀಡಿದರು. ಪ್ರಸ್ತುತ ದಿನಗಳಲ್ಲಿ ಮಕ್ಕಳ ಆಸಕ್ತಿಯ ವಿಷಯಗಳನ್ನು ಪೋಷಕರು ಅರಿತುಕೊಳ್ಳುತ್ತಿಲ್ಲ. ತಮ್ಮ ಕನಸನ್ನು ಮಕ್ಕಳಿಂದ ನನಸು ಮಾಡಿಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಪೋಷಕರು ಮಕ್ಕಳ ಇಚ್ಛೆಗೆ ತಕ್ಕಂತೆ ಸ್ಫೂರ್ತಿ ತುಂಬಬೇಕು ಮತ್ತು ಪ್ರೋತ್ಸಾಹ ನೀಡಬೇಕು. ನನ್ನ ಕ್ರೀಡಾಸಕ್ತಿಗೆ ತಂದೆ, ಸಹೋದರ ಹಾಗೂ ಪತಿ ಪ್ರೋತ್ಸಾಹ ನೀಡಿದ ಪರಿಣಾಮ ನಾನು ಒಲಂಪಿಯನ್ ಆಗಿದ್ದೇನೆ. ಮೊದಲ ಬಾರಿ ಒಲಂಪಿಯನ್ ಆಗಬೇಕೆನ್ನುವ ಕನಸು ಭಗ್ನವಾದಾಗ ಕ್ರೀಡಾಕ್ಷೇತ್ರವನ್ನು ತ್ಯಜಿಸಬೇಕೆನ್ನುವ ನಿರ್ಧಾರಕ್ಕೆ ಬಂದೆ. ಆದರೆ ಮನೆಯಲ್ಲಿ ನನಗೆ ದೊರೆತ ಪ್ರೋತ್ಸಾಹದಿಂದ ಮತ್ತು ನಾಲ್ಕು ವರ್ಷಗಳ ನಿರಂತರ ಪ್ರಯತ್ನದಿಂದ ಒಲಂಪಿಯನ್ ಆಗಲು ಸಾಧ್ಯವಾಯಿತು. ಕೊಡಗು ಜಿಲ್ಲೆಯಲ್ಲಿ ಸಾಕಷ್ಟು ಕ್ರೀಡಾ ಪ್ರತಿಭೆಗಳಿದ್ದು, ಪೋಷಕರ ಪ್ರೋತ್ಸಾಹದ ಅಗತ್ಯವಿದೆ ಎಂದರು. ಕೊಡವ ಕೌಟುಂಬಿಕ ಹಾಕಿ ಉತ್ಸವದ ಜನಕ ಪಾಂಡಂಡ ಕುಟ್ಟಪ್ಪ ಅವರ ಕ್ರೀಡಾಸಕ್ತಿಯ ಕುರಿತು ಪ್ರಮೀಳ ಅಯ್ಯಪ್ಪ ಪ್ರಶಂಸೆ ವ್ಯಕ್ತಪಡಿಸಿದರು. ಮಾಜಿ ಅಂತರಾಷ್ಟ್ರೀಯ ಬಾಸ್ಕೆಟ್ ಬಾಲ್ ಕ್ರೀಡಾಪಟು ಹಾಗೂ ಫೀ.ಮಾ.ಕೆ.ಎಂ.ಕಾರ್ಯಪ್ಪ ಕಾಲೇಜ್ ನ ನಿವೃತ್ತ ಪ್ರಾಂಶುಪಾಲರಾದ ಮಂಡೇಪಂಡ ಪುಷ್ಪಾ ಕುಟ್ಟಣ್ಣ ಮಾತನಾಡಿ ಸಮಾಜದ ಅಡಿಪಾಯವಾಗಿರುವ ಕುಟುಂಬಗಳ ಮೂಲಕವೇ ಕೊಡಗಿನಲ್ಲಿ ಹಾಕಿ ಕ್ರೀಡೆಯನ್ನು ಬೆಳೆಸಬೇಕೆನ್ನುವ ಪಾಂಡಂಡ ಕುಟ್ಟಪ್ಪ ಅವರ ಚಿಂತನೆ ಶ್ರೇಷ್ಠ ಪರಿಕಲ್ಪನೆಯಾಗಿದೆ. ಈ ಪ್ರಯತ್ನ ಇಂದು ಎಲ್ಲರಿಗೂ ಸ್ಫೂರ್ತಿಯಾಗಿದ್ದು, ಜಿಲ್ಲೆಯ ಹಲವೆಡೆ ಕ್ರೀಡಾಕೂಟಗಳು ನಡೆಯುತ್ತಿವೆ ಎಂದರು. ಹಿರಿಯರು, ಕಿರಿಯರು, ಮಹಿಳೆಯರು ಹಾಗೂ ಮಕ್ಕಳು ಒಗ್ಗೂಡಿ ಹಾಕಿ ಕ್ರೀಡೆಯಲ್ಲಿ ಆಟವಾಡುವ ಅವಕಾಶವಿರುವುದು ಇಡೀ ವಿಶ್ವದಲ್ಲಿ ಕೊಡಗಿನಲ್ಲಿ ಮಾತ್ರ ಎಂದು ಶ್ಲಾಘನೆ ವ್ಯಕ್ತಪಡಿಸಿದರು. ಪ್ರತಿ ವರ್ಷ ಕೊಡವ ಕೌಟುಂಬಿಕ ಹಾಕಿ ಉತ್ಸವದಲ್ಲಿ ಹಲವು ವಿಶೇಷತೆಗಳನ್ನು ಸೇರ್ಪಡೆಗೊಳಿಸುವ ಮೂಲಕ ಹಾಕಿಗೆ ಉತ್ತೇಜನ ನೀಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಪ್ರತಿಯೊಂದು ಕ್ರೀಡಾಪಟುಗಳನ್ನು ಗುರುತಿಸುವ ಕೆಲಸವಾಗಬೇಕು ಮತ್ತು ಒಗ್ಗಟ್ಟನ್ನು ಮೂಡಿಸಬೇಕು. ಪಾಂಡಂಡ ಕುಟ್ಟಪ್ಪ ಅವರ ಪರಿಕಲ್ಪನೆಗೆ ಕೊಡವ ಹಾಕಿ ಅಕಾಡೆಮಿ ಸೇರಿದಂತೆ ಎಲ್ಲಾ ಸಂಘ ಸಂಸ್ಥೆಗಳು ಶಕ್ತಿ ತುಂಬಬೇಕು ಎಂದರು. ಮಾಜಿ ಅಂತರಾಷ್ಟ್ರೀಯ ಹಾಕಿಪಟು ಕಾಳಿಮಾಡ ಎಂ.ಸೋಮಯ್ಯ ಅವರು ಮಾತನಾಡಿ ಪ್ರೋತ್ಸಾಹ ಮತ್ತು ಪ್ರಾಯೋಜಕತ್ವದ ಸಹಕಾರವಿಲ್ಲದಿದ್ದರೆ ಯಾವುದೇ ಕ್ರೀಡೆಗಳನ್ನು ಅಥವಾ ಕ್ರೀಡಾಪಟುಗಳನ್ನು ಬೆಳೆಸಲು ಸಾಧ್ಯವಿಲ್ಲ. ಆದ್ದರಿಂದ ಹಾಕಿಯ ಬೆಳವಣಿಗೆಗೆ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು ಕರೆ ನೀಡಿದರು. ಅತ್ಯಂತ ಸಣ್ಣ ಪ್ರದೇಶವಾಗಿರುವ ಕೊಡಗು ಜಿಲ್ಲೆಯಲ್ಲಿ ಜನಸಂಖ್ಯೆಯೂ ಕಡಿಮೆ ಇದೆ. ಆದರೆ ಕ್ರೀಡಾ ಸಾಧಕರ ಸಂಖ್ಯೆ ದೊಡ್ಡದಿದ್ದು, ಹಿರಿಯ ಆಟಗಾರರು ನನಗೆ ಮಾದರಿಯಾದ ಕಾರಣ ನಾನು ಹಾಕಿ ಕ್ರೀಡೆಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲು ಸಾಧ್ಯವಾಯಿತು. ನನ್ನ ಬೆಳವಣಿಗೆಗೆ ಹಾಕಿ ಕ್ರೀಡೆಯೇ ಪ್ರಮುಖವಾಗಿದೆ. ಕ್ರೀಡೆ ಶಿಸ್ತುಬದ್ಧ ಜೀವನವನ್ನು ಕಟ್ಟಿಕೊಡುವುದರಿಂದ ಮಕ್ಕಳು ಕ್ರೀಡೆಯ ಬಗ್ಗೆ ಹೆಚ್ಚು ಆಸಕ್ತಿ ತೋರಬೇಕು ಎಂದು ಕಿವಿಮಾತು ಹೇಳಿದರು. ಎಸ್‍ಎಲ್‍ಎನ್ ಗ್ರೂಪ್ ನ ಸಿಇಒ ಸಾಹಿಬ್ ಸಿಂಗ್ ಮಾತನಾಡಿ ಹಾಕಿ ಕ್ರೀಡೆಗೆ ಕೊಡಗಿನಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ಪ್ರೋತ್ಸಾಹ ದೊರೆಯುತ್ತಿರುವುದು ಶ್ಲಾಘನೀಯ. ಇನ್ನು ಮುಂದೆಯೂ ಹಾಕಿ ಉಳಿಯಲಿ, ಬೆಳೆಯಲಿ ಎಂದು ಶುಭ ಹಾರೈಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡವ ಹಾಕಿ ಅಕಾಡೆಮಿಯ ಅಧ್ಯಕ್ಷ ಪಾಂಡಂಡ ಕೆ.ಬೋಪಣ್ಣ ಅವರು ಹಾಕಿ ಅಕಾಡೆಮಿ ಹಾಕಿ ಪ್ರತಿಭೆಗಳಿಗೆ ಇನ್ನೂ ಹೆಚ್ಚಿನ ಪ್ರೋತ್ಸಾಹ ನೀಡಲಿದೆ. ಪಾಂಡಂಡ ಕುಟ್ಟಪ್ಪ ಅವರ ಹಲವು ವರ್ಷಗಳ ಕನಸನ್ನು ನನಸು ಮಾಡಿದ ತೃಪ್ತಿ ನಮಗಿದೆ ಎಂದರು. ಎಸ್‍ಎಲ್‍ಎನ್ ಗ್ರೂಪ್ ನ ಪ್ರಮುಖರಾದ ವೆಂಕಟಾಚಲಂ ಸಾತಪ್ಪನ್, ವೇಲಾಯುಧಂ ಮಣಿ, ಕೊಡವ ಹಾಕಿ ಅಕಾಡೆಮಿಯ ಕಾರ್ಯಾಧ್ಯಕ್ಷ ಚೆಪ್ಪುಡಿರ ಎಸ್.ಪೂಣಚ್ಚ, ಉಪಾಧ್ಯಕ್ಷ ಕುಂಡ್ಯೋಳಂಡ ರಮೇಶ್ ಮುದ್ದಯ್ಯ, ಕೂತಂಡ ಸುರೇಶ್ ಅಪ್ಪಯ್ಯ, ಬಾಚಿನಾಡಂಡ ಪ್ರದೀಪ್ ಪೂಣಚ್ಚ, ಗೌರವ ಕಾರ್ಯದರ್ಶಿ ಕುಲ್ಲೇಟಿರ ಅರುಣ್ ಬೇಬ, ಜಂಟಿ ಕಾರ್ಯದರ್ಶಿ ನಾಯಕಂಡ ದೀಪಕ್ ಚಂಗಪ್ಪ, ನಿರ್ದೇಶಕರುಗಳಾದ ಮುದ್ದಂಡ ರಶಿನ್ ಸುಬ್ಬಯ್ಯ, ಬೊಳ್ಳೆಪಂಡ ಜೆ.ಕಾರ್ಯಪ್ಪ, ಕಾಳಿಯಂಡ ಸಂಪನ್ ಅಯ್ಯಪ್ಪ, ಮುಕ್ಕಾಟಿರ ಎಸ್.ಸೋಮಯ್ಯ, ಚೆಕ್ಕೇರ ಆದರ್ಶ್, ಮಂಡೇಪಂಡ ಮುಖೇಶ್ ಮೊಣ್ಣಯ್ಯ, ಸುಳ್ಳಿಮಾಡ ದೀಪಕ್ ಮೊಣ್ಣಪ್ಪ, ಹಾಕಿ ಕೂರ್ಗ್, ಎಂ.ಬಾಡಗ ಸ್ಪೋಟ್ರ್ಸ್ ರಿಕ್ರಿಯೇಷನ್ ಸಂಸ್ಥೆ ಮತ್ತು ಮೂರ್ನಾಡು ವಿದ್ಯಾಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು. *ಸನ್ಮಾನ* ಉದ್ಘಾಟನಾ ಸಮಾರಂಭದಲ್ಲಿ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯ ಆರಂಭಿಕ 1997 ರಲ್ಲಿ ತಾಂತ್ರಿಕ ಸಮಿತಿಯಲ್ಲಿ ಕಾರ್ಯನಿರ್ವಹಿಸಿದವರನ್ನು ಹಾಗೂ ವೀಕ್ಷಕ ವಿವರಣೆಗಾರರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಮಾರೋಪ ಸಮಾರಂಭದಲ್ಲಿ ಕಳೆದ 25 ವರ್ಷಗಳ ಕಾಲ ಹಾಕಿ ಹಬ್ಬವನ್ನು ಯಶಸ್ವಿಯಾಗಿ ಆಯೋಜಿಸಿರುವ 25 ಕೊಡವ ಕುಟುಂಬಗಳ ಪಟ್ಟೆದಾರರನ್ನು ಸನ್ಮಾನಿಸಿ ಗೌರವಿಸಲಾಗುವುದೆಂದು ಆಯೋಜಕರು ತಿಳಿಸಿದರು. *13 ತಂಡಗಳ ನಡುವೆ ಹಣಾಹಣಿ* ಕಳೆದ ಇಪ್ಪತ್ತೈದು ವರ್ಷಗಳಲ್ಲಿ ನಡೆದ ಕೌಟುಂಬಿಕ ಕೊಡವ ಹಾಕಿ ಪಂದ್ಯಾವಳಿಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ 13 ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ. ‘ಎ’ ಗುಂಪಿನಲ್ಲಿ ಮಂಡೇಪಂಡ, ಪರದಂಡ, ಕೋಣೇರಿರ, ‘ಬಿ’ ಗುಂಪಿನಲ್ಲಿ ಚೆಪ್ಪುಡಿರ, ಪಳಂಗಂಡ, ಅಂಜಪರವಂಡ, ಮುಕ್ಕಾಟಿರ(ಬೊಂದ), ‘ಡಿ’ ಗುಂಪಿನಲ್ಲಿ ನೆಲ್ಲಮಕ್ಕಡ, ಕುಲ್ಲೇಟಿರ, ಮಾಚಮಾಡ, ‘ಡಿ’ ಗುಂಪಿನಲ್ಲಿ ಕುಪ್ಪಂಡ, ಕೂತಂಡ ಮತ್ತು ಕಲಿಯಂಡ ತಂಡಗಳು ಪಾಲ್ಗೊಳ್ಳಲಿವೆ. ಮೊದಲ ದಿನದ ಪಂದ್ಯಾವಳಿಯಲ್ಲಿ ಮಂಡೇಪಂಡ ಮತ್ತು ಪರದಂಡ, ಚೆಪ್ಪುಡಿರ ಮತ್ತು ಪಳಂಗಂಡ, ಅಂಜಪರವಂಡ ಮತ್ತು ಮಕ್ಕಾಟಿರ, ನೆಲ್ಲಮಕ್ಕಡ ಮತ್ತು ಮಾಚಮಾಡ, ಕಲಿಯಂಡ ಮತ್ತು ಕುಪ್ಪಂಡ ನಡುವೆ ಗೆಲುವಿಗಾಗಿ ಸೆಣಸಾಟ ನಡೆಯಿತು. *ಡಿ.30 ರಂದು ಅಂತಿಮ ಪಂದ್ಯ* ಗುಂಪು ಹಂತದಲ್ಲಿ ಲೀಗ್ ಮಾದರಿಯಲ್ಲಿ ಪಂದ್ಯಾವಳಿ ನಡೆಯಲಿದೆ. ಪ್ರತಿ ಗುಂಪಿನಿಂದ ಅಗ್ರಸ್ಥಾನ ಪಡೆಯುವ 4 ತಂಡಗಳು ಸೆಮಿಫೈನಲ್ ಹಂತವನ್ನು ಪ್ರವೇಶಿಸಲಿವೆ. ಸೆಮಿಫೈನಲ್ ಪಂದ್ಯಗಳು ಡಿ.29 ರಂದು ಬೆಳಗ್ಗೆ 10 ಮತ್ತು 11.30 ಗಂಟೆಗೆ ನಡೆಯಲಿದೆ. ಅಂತಿಮ ಪಂದ್ಯವನ್ನು ಡಿ.30ರಂದು ಬೆ.11.30 ಗಂಟೆಗೆ ಆಯೋಜಿಸಲಾಗಿದೆ. ಪಂದ್ಯಾವಳಿ ವಿಜೇತ ತಂಡಕ್ಕೆ 2 ಲಕ್ಷ ರೂ., ದ್ವಿತೀಯ ಸ್ಥಾನ ಪಡೆಯುವ ತಂಡಕ್ಕೆ 1 ಲಕ್ಷ ರೂ., ಸೆಮಿಫೈನಲ್‍ಗೆ ಅರ್ಹತೆ ಪಡೆಯುವ ತಂಡಕ್ಕೆ ತಲಾ 50 ಸಾವಿರ ರೂ. ಹಾಗೂ ಉಳಿದ 9 ತಂಡಗಳಿಗೆ ತಲಾ 25 ಸಾವಿರ ರೂ. ಬಹುಮಾನ ಮತ್ತು ಸ್ಮರಣಿಕೆಯನ್ನು ಬಹುಮಾನವಾಗಿ ನೀಡಲಾಗುತ್ತದೆ. ಇದರೊಂದಿಗೆ ಅತ್ಯುತ್ತಮ ಫಾರ್ವರ್ಡ್, ಫುಲ್ ಬ್ಯಾಕ್, ಹಾಫ್ ಮತ್ತು ಗೋಲ್ ಕೀಪರ್ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು.











