ಮಡಿಕೇರಿ ಡಿ.27 NEWS DESK : ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯ ಕಂಡುಕೊಳ್ಳುವುದರೊಂದಿಗೆ ತಾವು ಓದಿದ ವಿದ್ಯಾಸಂಸ್ಥೆಯ ಹೆಸರಿಗೆ ಚ್ಯುತಿ ಬಾರದಂತೆ ಜೀವನ ಸಾಗಿಸಬೇಕು ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಸಲಹೆ ನೀಡಿದರು. ಗೋಣಿಕೊಪ್ಪಲು ಕಾವೇರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ, ಅವರು ಮಾತನಾಡಿದರು. ನಾಡಿನಾದ್ಯಂತ ಖ್ಯಾತಿ ಹೊಂದಿರುವ ಕಾವೇರಿ ಕಾಲೇಜು, ವಿದ್ಯಾರ್ಥಿಗಳ ಭವಿಷ್ಯವನ್ನು ಹಾಗೂ ಸರ್ವತೋಮುಖ ಪ್ರಗತಿಯನ್ನು ಗುರುತಿಸುವಲ್ಲಿ ಹಾಗೂ ಅವರ ಭವಿಷ್ಯವನ್ನು ವಿನ್ಯಾಸಗೊಳಿಸುವಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಇಲ್ಲಿಯ ಆಡಳಿತ ಮಂಡಳಿ ಹಾಗೂ ಪ್ರಾಧ್ಯಾಪಕ ವೃಂದದವರು ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದು, ಇದು ಕೊಡಗಿನ ಏಳಿಗೆಗೂ ಕೊಡುಗೆ ನೀಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸಂಸ್ಥೆಯು ಸದಾ ವಿದ್ಯಾರ್ಥಿಗಳ ಏಳಿಗೆಯನ್ನು ಬಯಸುತ್ತಿದ್ದು ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉತ್ತಮ ಹೆಸರು ಮಾಡಿದರೆ ಅದು ಸಂಸ್ಥೆಗೆ ಒಳ್ಳೆಯ ಹೆಸರು ತಂದುಕೊಡುತ್ತದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕಾವೇರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಮಂಡೆಪಂಡ ಎಸ್ ಮುತ್ತಣ್ಣ, ಕೇಂದ್ರ ತೆರಿಗೆ ಇಲಾಖೆಯ ಸಹಾಯಕ ಆಯುಕ್ತ ಟಿ.ಜಿ.ಸುರೇಶ್, ಮಣಿಪಾಲ್ ಎಂ ಐ ಟಿ ಕಾಲೇಜಿನ ಗಣಿತ ಶಾಸ್ತ್ರ ಪ್ರಾಧ್ಯಾಪಕಿ ಡಾ.ಶೋಭಾ. ಎಂ.ಇ, ಕೊಡಗು ಸಹಕಾರ ರತ್ನ ಪ್ರಶಸ್ತಿ ವಿಜೇತರಾದ ಚಿರಿಯಪಂಡ ಕೆ. ಉತ್ತಪ್ಪ, ಕಾವೇರಿ ಎಜುಕೇಷನ್ ಸೊಸೈಟಿ ಗೌರವ ಕಾರ್ಯದರ್ಶಿ ಕುಲ್ಲಚಂಡ ಬೋಪಣ್ಣ, ಪಂಚಾಯಿತಿ ಅಧ್ಯಕ್ಷರು ಕುಲಚಂಡ ಪ್ರಮೋದ್ ಗಣಪತಿ, ಪ್ರಾಂಶುಪಾಲರು ಎಸ್. ಎಸ್. ಮಾದಯ್ಯ, ಅಕ್ರಮ್, ಆಡಳಿತ ಮಂಡಳಿಯ ಸದಸ್ಯರು, ಸಿಬ್ಬಂದಿ ವರ್ಗದವರು, ವಿದ್ಯರ್ಥಿ, ವಿದ್ಯರ್ಥಿನಿಯರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.











