ಮಡಿಕೇರಿ NEWS DESK ಡಿ.28 : ಇತಿಹಾಸವನ್ನು ಮರೆತು ಇತಿಹಾಸ ನಿರ್ಮಿಸುವುದು ಅಸಾಧ್ಯ ಎಂದು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣನವರು ಭಾರತದ ಸಂವಿಧಾನ ಶಿಲ್ಪಿ ಡಾ ಬಿ.ಆರ್.ಅಂಬೇಡ್ಕರ್ ರವರ ಘೋಷವಾಕ್ಯ ವನ್ನು ಪುನರುಚ್ಚರಿಸಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರ ದಿವಂಗತ ಪೂಜಾರಿರ ರಾಮಪ್ಪ ಅವರ ಹೆಸರಿನಲ್ಲಿ ಮೇಕೇರಿ ಬಿಳಿಗೇರಿ, ಅರ್ವತ್ತೋಕ್ಲು ಲಿಂಕ್ ರಸ್ತೆಗೆ ನಾಮಕರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಕೊಡಗಿನ ಅನೇಕ ಮಹನೀಯರು ತಮ್ಮ ಬದುಕನ್ನು ತ್ಯಾಗ ಮಾಡಿ ಪಾಲ್ಗೊಳ್ಳುವ ಮೂಲಕ ತಮ್ಮ ದೇಶ ಪ್ರೇಮದ ಬದ್ದತೆಯನ್ನು ಮೆರೆದಿದ್ದಾರೆ. ಅಂತಹ ಮಹಾನ್ ವ್ಯಕ್ತಿಗಳಲ್ಲಿ ದಿವಂಗತ ಪೂಜಾರಿ ರಾಮಪ್ಪ ನವರು ಒಬ್ಬರಾಗಿದ್ದು ಅವರ ಹೆಸರನ್ನು ರಸ್ತೆಗೆ ನಾಮಕರಣ ಮಾಡುವ ಮೂಲಕ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಂದಿಸುವ ಅವಕಾಶ ದೊರಕಿದ್ದು ಸಂತಸದ ಕ್ಷಣವಾಗಿದೆ ಎಂದು ಹೇಳಿದರು. ಇಂತಹ ಒಂದು ಐತಿಹಾಸಿಕ ಕಾರ್ಯಕ್ಕೆ ಪ್ರಯತ್ನ ಪಟ್ಟು ಯಶಸ್ವಿಯಾದ ಅರ್ವತ್ತೋಕ್ಲು, ಮೇಕೇರಿ ಮತ್ತು ಬಿಳಿಗೇರಿ ಹಾಗೂ ಕೊಡಗಿನಾದ್ಯಂತ ನೆಲಸಿರುವ ಪೂಜಾರಿರ ಕುಟುಂಬಸ್ಥರು ಅಭಿನಂದನಾರ್ಹರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕೊಡಗು ಗಡಿ ಭಾಗವಾದ್ದರಿಂದ ಇತಿಹಾಸಕಾರರು ಕೊಡಗಿನ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ದಾಖಲೀಖರಿಸಲು ಆಸಕ್ತಿ ತೋರದೇ ಇದ್ದಿರುವ ಸಾಧ್ಯತೆ ಇದ್ದು ಇಂದಿನ ಪೀಳಿಗೆ ಸ್ವಾತಂತ್ರ್ಯ ಹೋರಾಟಕ್ಕೆ ಶ್ರಮಿಸಿದ ಕೊಡಗಿನ ಮಹಾನ್ ವ್ಯಕ್ತಿಗಳ ಬಗ್ಗೆ ಪರಿಚಯಿಸುವಂತಹ ಕಾರ್ಯಕ್ರಮ ರೂಪಿಸುವಂತೆ ಸಲಹೆ ನೀಡಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷರಾದ ತೆನ್ನಿರ ಮೈನಾ ರವರು ತನ್ನ ಸಂಸಾರ, ಸಂಬಂದಗಳು ಮತ್ತು ಬದುಕು ದೇಶಕ್ಕಿಂತ ದೊಡ್ಡದಲ್ಲಾ ಎಂಬ ಧೃಡ ಸಂಕಲ್ಪದೊಂದಿಗೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಕಠಿಣ ಶಿಕ್ಷೆ ಅನುಭವಿಸಿ ಸ್ವಾತಂತ್ರ್ಯ ನಂತರವೂ ಅಪ್ಪಟ ಗಾಂಧಿವಾಧಿಯಾಗಿ ಗಾಂಧಿಯವರ ಆದರ್ಶಗಳೊಂದಿಗೆ ಬದುಕಿ ಮುಂದಿನ ಪೀಳಿಗೆಗೆ ಆದರ್ಶದ ಮಾರ್ಗವನ್ನು ತೋರಿದ ಪೂಜಾರಿರ ರಾಮಪ್ಪ ನವರ ಬದುಕು ಅವೀಸ್ಮರಣೀಯವಾದದ್ದು ಎಂದು ಹೇಳಿದರು. ರಾಮಪ್ಪವನವರ ಹೆಸರನ್ನು ಚಿರಸ್ಥಾಯಿಯಾಗಿ ಉಳಿಸಲು ಮಾನ್ಯ ಶಾಸಕರಾದ ಎ.ಎಸ್.ಪೊನ್ನಣ್ಣ ನವರ ಸಹಕಾರ ಎಂದೂ ಮರೆಯಲು ಸಾಧ್ಯವಿಲ್ಲ ಎಂದರು. ಸ್ವಾತಂತ್ರ್ಯ ಹೋರಾಟಗಾರ ಪೂಜಾರಿರ ರಾಮಪ್ಪ ಟ್ರಸ್ಟ್ ಅಧ್ಯಕ್ಷರಾದ ಪೂಜಾರಿರ ಬೆಳ್ಯಪ್ಪನವರು ಮಾತನಾಡಿ ಈ ಸುದಿನಕ್ಕಾಗಿ ಕಳೆದ 29 ವರ್ಷಗಳಿಂದ ಟ್ರಸ್ಟ್ ಸದಸ್ಯರು ಪ್ರಯತ್ನ ಪಟ್ಟಿದ್ದು ಶಾಸಕರಾದ ಪೊನ್ನಣ್ಣ ನವರ ಸಹಕಾರದಿಂದ ಪ್ರಯತ್ನ ಕ್ಕೆ ಫಲ ಸಿಕ್ಕಿದ್ದು ಈ ಐತಿಹಾಸಿಕ ಕಾರ್ಯಕ್ಕೆ ತುಂಬು ಹೃದಯದ ಸಹಕಾರ ನೀಡಿದ ಪೊನ್ನಣ್ಣ ನವರಿಗೆ ತಮ್ಮ ಕುಟುಂಬ ಮತ್ತು ಕೊಡಗಿನ ಜನತೆ ಅಭಾರಿಯಾಗಿದ್ದೇವೆ ಎಂದು ಧನ್ಯವಾದ ಅರ್ಪಿಸಿದರು. ಬರಹಗಾರ್ತಿ ಪೂಜಾರಿರ ಕೃಪಾ ದೇವರಾಜ್ ರವರು ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರಾದ ದಿವಂಗತ ಪೂಜಾರಿರ ರಾಮಪ್ಪ ನವರ ವ್ಯಕ್ತಿ ಪರಿಚಯ ಮಾಡುವುದರೊಂದಿಗೆ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು. ಇದೇ ಸಂಧರ್ಭದಲ್ಲಿ ಕಾರ್ಯಕ್ರಮಕ್ಕೆ ನೆರವು ನೀಡಿದ ಶಾಸಕ ಎ.ಎಸ್.ಪೊನ್ನಣ್ಣ, ಸರ್ವೋದಯ ಸಮಿತಿ ಅಧ್ಯಕ್ಷರಾದ ಅಂಬೇಕಲ್ ಕುಶಾಲಪ್ಪ, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷರಾದ ತೆನ್ನಿರ ಮೈನಾ ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪೂಜಾರಿರ ರಕ್ಷಿತ್ ರವರನ್ನು ಪೂಜಾರಿರ ಕುಟುಂಬಸ್ಥರು ಫಲ ತಾಂಬೂಲ ನೀಡಿ ಸನ್ಮಾನಿಸಿದರು. ಮಾಜಿ ಸ್ಪೀಕರ್ ಕೆ.ಜಿ.ಬೋಪಯ್ಯ ನವರು ಪೂರ್ವನಿಯೋಜಿತ ಕಾರ್ಯಕ್ರಮ ನಿಮಿತ್ತ ಕಾರ್ಯಕ್ರಮಕ್ಕೆ ಮೊದಲೇ ಆಗಮಿಸಿ ಶುಭ ಕೋರಿದರು.ಅವರನ್ನು ಪೂಜಾರಿರ ಕುಟುಂಬದ ಪರವಾಗಿ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಡಿ.ಸಿ.ಸಿ ಸದಸ್ಯರಾದ ಭೀಷ್ಮ ಮಾದಪ್ಪ, ಪ್ರಮುಖರಾದ ತುಂತಜೆ ಗಣೇಶ್, ಪೂಜಾರಿರ ಮಾದಪ್ಪ, ಪೂಜಾರಿರ ನಾಣಯ್ಯ, ಪೂಜಾರಿರ ಜಗದೀಶ್, ಬಾಳಾಡಿ ಪ್ರತಾಪ್, ಅಂಬೇಕಲ್ ನವೀನ್ ಕುಶಾಲಪ್ಪ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಮತಾ, ಕೇಟೋಳಿರ ಮೋಹನ್ ರಾಜ್ , ಪಿ.ಎಲ್.ಸುರೇಶ್, ತಾಲ್ಲೂಕು ಪಂಚಾಯತ್ ಮಾಜಿ ಸದಸ್ಯರಾದ ಕುಮುದ ರಶ್ಮಿ, ಸಾಬು ತಿಮ್ಮಯ್ಯ, ಅಪ್ರು ರವೀಂದ್ರ, ಪೂಜಾರಿರ ಪ್ರದೀಪ್ ಕುಮಾರ್ ಪೂಜಾರಿರ ಧ್ರುವ, ತೆನ್ನಿರ ರಮೇಶ್ ಪೊನ್ನಪ್ಪ, ಅಶೋಕ್ ಪೂಜಾರಿರ ಮೈತ್ರಿ, ಪೂಜಾರಿರ ಸೋನಿ, ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು. ಪೂಜಾರಿರ ಕುಟುಂಬಸ್ಥರು, ಮೇಕೇರಿ , ಬಿಳಿಗೇರಿ ಮತ್ತು ಅರ್ವತ್ತೋಕ್ಲು ಸುತ್ತ ಮುತ್ತಲಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪೂಜಾರಿರ ಯಶಿಕ ಮಿಥುನ್ ರವರು ಪೂಜಾರಿರ ರಾಮಪ್ಪ ನವರ ನುಡಿನಮನ ಗೀತೆಯನ್ನು ಹಾಡಿ ಕಾರ್ಯಕ್ರಮಕ್ಕೆ ಆಗಮಿಸಿದ ಸರ್ವರನ್ನು ಸ್ವಾಗತಿಸಿದರು. ಪೂಜಾರಿರ ಪುಷ್ಪಾವತಿ ಚಂದ್ರಶೇಖರ್ ರವರು ಪ್ರಾರ್ಥಿಸಿ ಪೂಜಾರಿರ ಜಗದೀಶ್ ವಂದಿಸಿದರು.











