ಮಡಿಕೇರಿ NEWS DESK ಡಿ.28 : ಕೊಡವ ಕೌಟುಂಬಿಕ ಹಾಕಿ ಉತ್ಸವ ಬೆಳ್ಳಿ ಮಹೋತ್ಸವವನ್ನು ಆಚರಿಸಿಕೊಂಡ ಹಿನ್ನೆಲೆಯಲ್ಲಿ ಕೊಡವ ಹಾಕಿ ಅಕಾಡೆಮಿ ವತಿಯಿಂದ ಆಯೋಜನೆಗೊಂಡಿರುವ ‘ಲೆವಿಸ್ಟಾ ಕೊಡವ ಹಾಕಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿ’ಯ ಮೂರನೇ ದಿನದ ಪಂದ್ಯದಲ್ಲಿ ಮಂಡೇಪಂಡ ಮತ್ತು ಕೋಣೇರಿರ ನಡುವಿನ ಪಂದ್ಯದಲ್ಲಿ 5-0 ಗೋಲುಗಳ ಅಂತರದಲ್ಲಿ ಮಂಡೇಪಂಡ ತಂಡ ಜಯ ಸಾಧಿಸಿತು. ಮಂಡೇಪಂಡ ಚಂಗಪ್ಪ ತಲಾ ಎರಡು, ಮುತ್ತಪ್ಪ, ಕಾಳಪ್ಪ ಹಾಗೂ ಕರುಂಬಯ್ಯ ತಲಾ ಒಂದು ಗೋಲು ದಾಖಲಿಸಿದರು. ಮುಕ್ಕಾಟೀರ ಮತ್ತು ಪಳಂಗಂಡ ನಡುವಿನ ಪಂದ್ಯದಲ್ಲಿ 6-0 ಗೋಲುಗಳ ಅಂತರದಲ್ಲಿ ಪಳಂಗಂಡ ತಂಡ ಗೆಲುವು ದಾಖಲಿಸಿತು. ಪಳಂಗಂಡ ಪೊನ್ನಪ್ಪ ಭರ್ಜರಿ ನಾಲ್ಕು ಹಾಗೂ ಅಮರ್ ಎರಡು ಗೋಲು ಬಾರಿಸಿದರು. ಕುಲ್ಲೇಟಿರ ಮತ್ತು ನೆಲ್ಲಮಕ್ಕಡ ನಡುವಿನ ಪಂದ್ಯದಲ್ಲಿ 1-0 ಗೋಲಿನ ಅಂತರದಲ್ಲಿ ಕುಲ್ಲೇಟಿರ ತಂಡ ಗೆಲುವು ಸಾಧಿಸಿತು. ಕುಲ್ಲೇಟಿರ ಮುತ್ತಣ್ಣ ಒಂದು ಗೋಲು ದಾಖಲಿಸಿದರು. ಶೂನ್ಯ ಸಾಧನೆಯ ಹಿನ್ನೆಲೆ ಕೂತಂಡ ಮತ್ತು ಕಲಿಯಂಡ ನಡುವಿನ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿತು.











