ಸುಂಟಿಕೊಪ್ಪ ಡಿ.29 NEWS DESK : ಶ್ರೀಕ್ಷೇತ್ರ ಅಯ್ಯಪ್ಪ ಸ್ವಾಮಿ ದೇವಾಲಯದ 55ನೇ ವರ್ಷದ ಮಂಡಲ ಪೂಜೋತ್ಸವ ಶ್ರದ್ಧಾಭಕ್ತಿಯಿಂದ ಜರುಗಿತು. ಮಂಡಲ ಪೂಜೋತ್ಸವದ ಅಂಗವಾಗಿ ಪಟ್ಟಣದ ಮುಖ್ಯಬೀದಿಗಳಲ್ಲಿ ಶೋಭಯಾತ್ರೆ ನಡೆಯಿತು. ಸಂಜೆ ದೇವಾಲಯದಲ್ಲಿ ಪೂಜೆ ಮುಗಿಸಿದ ನಂತರ ಅಯ್ಯಪ್ಪ ಕ್ಷೇತ್ರದಿಂದ ವಿದ್ಯುತ್ ದೀಪ ಅಲಂಕೃತ ಮಂಟಪದಲ್ಲಿ ಅಯ್ಯಪ್ಪ ಸ್ವಾಮಿ ಉತ್ಸವ ಮೂರ್ತಿಯ ಮೆರವಣಿಗೆಯೊಂದಿಗೆ ಕೇರಳದ ಆಕರ್ಷಕ ಚಂಡೆಮೇಳಗಳೊಂದಿಗೆ ಅಯ್ಯಪ್ಪ ವೃತಧಾರಿಗಳು ಹಾಗೂ ಭಕ್ತಾದಿಗಳು ಮೆರವಣಿಗೆಯಲ್ಲಿ ಅಯ್ಯಪ್ಪನ ಸ್ಮರಣೆ ಭಜನೆಗಳನ್ನು ಮಾಡುತ್ತಾ ಸಾಗಿದರು. ಮಾದಾಪುರ ರಸ್ತೆಯಲ್ಲಿರುವ ವೃಕ್ಷೋದ್ಭವ ಮಹಾಗಣಪತಿ ದೇವಾಲಯ, ಪಟ್ಟಣ ಪ್ರಮುಖ ಬೀದಿಯಲ್ಲಿ ಅಯ್ಯಪ್ಪ ಸ್ವಾಮಿಯ ಉದ್ಘೋಷದೊಂದಿಗೆ ಗದ್ದೆಹಳ್ಳದವರೆಗೆ ಸಾಗಿ, ಅಲ್ಲಿಂದ ಹಿಂತಿರುಗಿ ದೇವಾಲಯದಲ್ಲಿ ಸಮಾಪ್ತಿ ಗೊಂಡಿತು. ಮೆರವಣಿಗೆಯ ಸಂದರ್ಭ ಬಣ್ಣಬಣ್ಣದ ಸಿಡಿಮದ್ದುಗಳ ಚಿತ್ತಾರ ಜನಾಕರ್ಷಣೆಗೊಂಡಿತು. ನಂತರ ದೇವಾಲಯದಲ್ಲಿ ಪ್ರಧಾನ ಅರ್ಚಕ ಗಣೇಶ್ ಭಟ್ ಅವರ ನೇತೃತ್ವದಲ್ಲಿ ದೀಪರಾಧನೆ ನೆರವೇರಿತು. ಮಹಾಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಬಳಿಕ ಅನ್ನದಾನ ನಡೆಯಿತು.











