ನಾಪೋಕ್ಲು ಡಿ.30 NEWS DESK : ವಾಹನಗಳ ಮೇಲೆ ಕಾಡಾನೆ ದಾಳಿಮಾಡಿದ ಪರಿಣಾಮ ಆಟೋ, ಬೈಕ್ ಜಖಂಗೊಂಡ ಘಟನೆ ಬಲ್ಲಮಾವಟಿ ಗ್ರಾಮ ಪಂಚಾಯಿತಿಯ ಪೇರೂರು ಗ್ರಾಮದ ಮಂಜಾಟ್ ಗಿರಿಜನ ಕಾಲೋನಿಯಲ್ಲಿ ನಡೆದಿದೆ. ಕಾಡಾನೆಗಳ ಹಿಂಡು ರಸ್ತೆಯಲ್ಲಿ ನಿಲ್ಲಿಸಿದ್ದ ಕೀಯಲ್ ಕೇರಿ ನಿವಾಸಿ ಕೆ.ಕೆ.ಅರ್ಜುನ ಹಾಗೂ ಕೆ.ಪಿ.ಪೂವಯ್ಯ ಅವರ ಆಟೋ, ಪಿ.ಎಂ. ಪೂಣಚ್ಚ ಅವರ ಬೈಕ್ ಅನ್ನು ಬಿಳಿಸಿ ಹಾನಿಗೊಳಿಸಿದೆ. ಘಟನೆಯಿಂದ ಗ್ರಾಮಸ್ಥರಲ್ಲಿ ಆತಂಕ ನಿರ್ಮಾಣವಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವ್ಯಾಪ್ತಿಯಲ್ಲಿ ನಿರಂತರ ಕಾಡಾನೆಗಳ ಹಾವಳಿ ಮಿತಿಮೀರಿದ್ದು ಭತ್ತದ ಗದ್ದೆ ಹಾಗೂ ತೋಟಗಳಿಗೆ ನಿರಂತರ ದಾಳಿ ಮಾಡಿ ಫಸಲು ನಾಶ ಪಡಿಸುತ್ತಿದೆ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದರು. ಇದೀಗ ಕಾಫಿ ಕೊಯ್ಲಿನ ಸಮಯವಾಗಿರುವುದರಿಂದಾಗಿ ಕೂಲಿ ಕಾರ್ಮಿಕರು ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಮಾತ್ರವಲ್ಲದೆ ಶಾಲಾ ವಿದ್ಯಾರ್ಥಿಗಳು ಶಾಲೆಗೆ ತೆರಳಲು ತೀವ್ರ ಸಮಸ್ಯೆ ಉಂಟಾಗಿದ್ದು, ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಸೂಕ್ತ ಕ್ರಮ ಕೈಗೊಂಡು ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ನೀಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ವರದಿ : ದುಗ್ಗಳ ಸದಾನಂದ.











