ಮಡಿಕೇರಿ ಜ.5 NEWS DESK : ನಮ್ಮೊಳಗಿನ ‘ದೌರ್ಬಲ್ಯ’ವನ್ನು ಬಳಸಿಕೊಂಡು, ಆಧುನಿಕ ಸಾಮಾಜಿಕ ಜಾಲತಾಣಗಳ ಮೂಲಕ ನಡೆಯುವ ‘ಸೈಬರ್ ಕ್ರೈಂ’, ‘ಡಿಜಿಟಲ್ ಅರೆಸ್ಟ್’ ಮೊದಲಾದ ಆರ್ಥಿಕ ವಂಚನೆ ಪ್ರಕರಣಗಳ ಬಗ್ಗೆ ಸದಾ ಜಾಗೃತರಾಗಿರಿ ಮತ್ತು ಇತರರಲ್ಲಿ ಅರಿವು ಮೂಡಿಸಿ ಎಂದು ಕೊಡಗು ಜಿಲ್ಲಾ ನೂತನ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ ಕರೆ ನೀಡಿದ್ದಾರೆ. ನಗರದ ಪೊಲೀಸ್ ಮೈತ್ರಿ ಭವನದಲ್ಲಿ ನಡೆದ ಮಡಿಕೇರಿ ಉಪ ವಿಭಾಗದ ‘ಜನ ಸಂಪರ್ಕ’ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಸ್ತುತ ಸಾಮಾಜಿಕ ಜಾಲತಾಣಗಳ ಮೂಲಕ ಹಣಕಾಸಿನ ವಂಚನೆ ಪ್ರಕರಣಗಳು, ಪ್ರಮುಖವಾಗಿ ಹಿರಿಯರು, ನಿವೃತ್ತ ಉದ್ಯೋಗಿಗಳನ್ನೆ ಗುರಿಯಾಗಿಸಿಕೊಂಡು ನಡೆಯುತ್ತಿದೆ. ತಮ್ಮನ್ನು ಸಂಪರ್ಕಿಸುವ ವಂಚಕರು ಹಣವನ್ನು ದುಪ್ಪಟ್ಟು ಮಾಡಿಕೊಡುವ ಆಮಿಷವನ್ನೊಡ್ಡಿ, ಆರಂಭಿಕ ಹಂತದಲ್ಲಿ ಸಣ್ಣ ಮೊತ್ತವನ್ನು ನೀವು ಅದರಲ್ಲಿ ತೊಡಗಿಸಿದಲ್ಲಿ ಹೆಚ್ಚಿನ ಮೊತ್ತವನ್ನು ನೀಡುತ್ತಾರೆ. ನಂತರದ ದಿನಗಳಲ್ಲಿ ನಿಮ್ಮಲ್ಲಿ ವಿಶ್ವಾಸವನ್ನು ಮೂಡಿಸುವ ಮೂಲಕ ದೊಡ್ಡ ಮೊತ್ತದ ಹಣವನ್ನು ಹೂಡುವಂತೆ ಪ್ರೇರೇಪಿಸಿ ವಂಚಿಸುತ್ತಾರೆ ಎಂದು ಎಚ್ಚರಿಕೆಯ ಮಾತುಗಳನ್ನಾಡಿದರು. ನಿಮ್ಮಲ್ಲಿನ ದೌರ್ಬಲ್ಯಗಳನ್ನೆ ಬಳಸಿಕೊಂಡು ಸಾಮಾಜಿಕ ಜಾಲತಾಣದ ಮೂಲಕ ವಂಚಿಸುವ ‘ಡಿಜಿಟಲ್ ಅರೆಸ್ಟ್’ನಂತಹ ಪ್ರಕರಣಗಳಲ್ಲಿ ಸಿಲುಕುವ ಬಹುತೇಕ ಮಂದಿ ಶಿಕ್ಷಣವಂತರೇ ಆಗಿದ್ದಾರೆ. ಯಾವುದೇ ಕಾರಣಕ್ಕೂ ನಿಮ್ಮ ವಾಟ್ಸ್ ಅಪ್, ಫೇಸ್ ಬುಕ್ ಸೇರಿದಂತೆ ಯಾವುದೇ ಸಾಮಾಜಿಕ ಜಾಲತಾಣಗಳ ಮೂಲಕ ಬರುವ ಅನಾಮಧೇಯ ‘ಲಿಂಕ್’ಗಳನ್ನು ಬಳಸುವ ಪ್ರಯತ್ನ ಮಾಡಬೇಡಿ ಎಂದು ಮನವಿ ಮಾಡಿದ ಅವರು, ಇಂತಹ ಯಾವುದೇ ಸಂಕಷ್ಟಕ್ಕೆ ಸಿಲುಕಿದಲ್ಲಿ ತಕ್ಷಣವೆ ಪೊಲೀಸ್ ಇಲಾಖೆಯ ‘1930′ ನೆರವಿಗೆ ದೂರನ್ನು ದಾಖಲಿಸುವಂತೆ ಮನವಿ ಮಾಡಿದರು. ಸಾರ್ವಜನಿಕರು ತಮ್ಮ ಸಮಸ್ಯೆಗಳ ಬಗೆಹರಿಕೆಗೆ ಸಹಾಯವಾಣಿ ‘112’ನ್ನು ಬಳಸುವಂತೆ ಕರೆ ನೀಡಿದ ಅವರು, ಮಕ್ಕಳ ಮೇಲಿನ ದೌರ್ಜನ್ಯ, ಬಾಲ್ಯ ವಿವಾಹ ಮೊದಲಾದ ಯಾವುದೇ ಕಾನೂನು ಬಾಹಿರ ಕೃತ್ಯಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಹಾಯವಾಣಿ ‘1098’ಗೆ ಹಾಗೂ ಕೌಟುಂಬಿಕ ಸಮಸ್ಯೆಗಳಿಗೆ ಸಿಲುಕಿ ಸಂಕಷ್ಟಕ್ಕೆ ಒಳಗಾಗುವ ಮಹಿಳೆಯರ ನೆರವಿಗಾಗಿಯೇ ಇರುವ ಸಹಾಯವಾಣಿ ‘181′ ಗೆ ಕರೆ ಮಾಡಿ ನೆರವನ್ನು ಪಡೆಯಬೇಕೆಂದು ಎಸ್ಪಿ ಬಿಂದುಮಣಿ ತಿಳಿಸಿದರು. ಕೊಡಗು ಜಿಲ್ಲೆ ಜನ ವಿರಳವಾದ ಪ್ರದೇಶವಾಗಿದೆ. ದೂರ ದೂರದಲ್ಲಿ ಮನೆಗಳು ಇರುವ ಹಿನ್ನೆಲೆಯಲ್ಲಿ ತಮ್ಮ ಮನೆಗಳಿಗೆ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿಕೊಳ್ಳಿ. ಮನೆಯಿಂದ ಸಾಕಷ್ಟು ದಿನಗಳ ಕಾಲ ಹೊರಗೆ ಇರಬೇಕಾದ ಪ್ರಸಂಗಗಳು ಉದ್ಭವಿಸಿದಾಗ, ತಮ್ಮ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿಯನ್ನು ನೀಡಿ. ಪ್ರಮುಖವಾಗಿ ತಮ್ಮ ಮನೆಗಳಲ್ಲಿ ಇರಬಹುದಾದ ಬೆಲೆಬಾಳುವ ವಸ್ತುಗಳನ್ನು ಬ್ಯಾಂಕ್ ಲಾಕರ್ನಲ್ಲಿ ಸುರಕ್ಷಿತವಾಗಿಡುವಂತೆ ಸಲಹೆ ನೀಡಿದರು. ಪ್ರವಾಸಿ ಕೇಂದ್ರವಾಗಿರುವ ಕೊಡಗು ಜಿಲ್ಲೆಯಲ್ಲಿ ‘ಹೋಂ ಸ್ಟೇ’ ಉದ್ಯಮ ದೊಡ್ಡ ಪ್ರಮಾಣದಲ್ಲಿದೆ. ಅನುಮತಿ ರಹಿತವಾಗಿ ಹೋಂಸ್ಟೇಗಳನ್ನು ನಡೆಸುತ್ತಿದ್ದಲ್ಲಿ ಅಂತಹವರ ವಿರುದ್ಧ ಕಾನೂನು ಬದ್ಧವಾಗಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಬಿಂದುಮಣಿ ಎಚ್ಚರಿಕೆ ನೀಡಿದರು. *ಕಾರ್ಮಿಕರ ಮಾಹಿತಿ ಒದಗಿಸಿ* ಜಿಲ್ಲೆಯ ತೋಟಗಳಲ್ಲಿ ಕಾರ್ಯ ನಿರ್ವಹಿಸಲು ಹೊರ ಜಿಲ್ಲೆ, ರಾಜ್ಯಗಳಿಂದ ಸಾಕಷ್ಟು ಕಾರ್ಮಿಕರು ಆಗಮಿಸುತ್ತಾರೆ. ಯಾವುದೇ ತೋಟಗಳಲ್ಲಿ ಇಂತಹ ಕಾರ್ಮಿಕರನ್ನು ಇರಿಸಿಕೊಳ್ಳುವ ಸಂದರ್ಭ ಅವರ ಆಧಾರ್ ಕಾರ್ಡ್ ಸೇರಿದಂತೆ ಅಗತ್ಯ ದಾಖಲೆಗಳನ್ನು ಪರಿಶೀಲಿಸಬೇಕು. ಅವರು ಎಲ್ಲಿಂದ ಬಂದವರೆನ್ನುವುದನ್ನು ಖಚಿತಪಡಿಸಿಕೊಳ್ಳುವುದಲ್ಲದೆ, ಈ ಬಗ್ಗೆ ಪೊಲೀಸ್ ಇಲಾಖೆಗೆ ಮಾಹಿತಿಯನ್ನು ಒದಗಿಸುವುದು ತೋಟ ಮಾಲೀಕರ ಜವಾಬ್ದಾರಿಯೂ ಆಗಿದೆ ಎಂದರು. ಮಡಿಕೇರಿ ಸೇರಿದಂತೆ ಜಿಲ್ಲೆಯ ಪಟ್ಟಣ ಪ್ರದೇಶಗಳಲ್ಲಿ ವಾಹನ ನಿಲುಗಡೆ ದೊಡ್ಡ ಸಮಸ್ಯೆಯಾಗಿದೆ. ಈ ಹಿನ್ನೆಲೆಯಲ್ಲಿ ಮಹತ್ತರವಾದ ಬದಲಾವಣೆಗೆ ಚಿಂತನೆಯನ್ನು ನಡೆಸಲಾಗಿದ್ದು, ಇದಕ್ಕೆ ಎಲ್ಲರ ಸಹಕಾರ ಅತ್ಯವಶ್ಯವೆಂದು ಎಸ್ಪಿ ಬಿಂದುಮಣಿ ಮನವಿ ಮಾಡಿದರು. ಗ್ರಾಮೀಣ ಭಾಗಗಳ ಅಂಗಡಿ ಮುಂಗಟ್ಟುಗಳಲ್ಲಿ ಸಿಗರೇಟ್ ಸೇರಿದಂತೆ ಮಾದಕ ಪದಾರ್ಥಗಳ ಮಾರಾಟ ನಡೆಯುತ್ತಿದೆ. ಇದರಿಂದ ವಿದ್ಯಾರ್ಥಿಗಳು ಹಾದಿ ತಪ್ಪುತ್ತಿದ್ದಾರೆ, ಪ್ರತಿ ಅಂಗಡಿಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವಂತೆ, ಹೊರ ರಾಜ್ಯದ ಕಾರ್ಮಿಕರಿಂದ ಗೋಹತ್ಯೆ, ದರೋಡೆ, ಕಳ್ಳತನ ಪ್ರಕರಣಗಳು ನಡೆಯುತ್ತಿದ್ದು, ಇದನ್ನು ನಿಯಂತ್ರಿಸಬೇಕು, ಪೊಲೀಸ್ ಇಲಾಖೆಯ ಸೈಬರ್ ವಿಭಾಗಕ್ಕೆ ದೂರು ಸಲ್ಲಿಸಿದಲ್ಲಿ ಸೂಕ್ತ ಸ್ಪಂದನ ದೊರಕುತ್ತಿಲ್ಲ. ಜಿಲ್ಲೆಯಲ್ಲಿ ಅಕ್ರಮ ಬಾಂಗ್ಲಾದೇಶಿಗರಿದ್ದು, ಪೊಲೀಸರು ಅವರ ದಾಖಲಾತಿಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕೆನ್ನುವ ಒತ್ತಾಯ ಸಾರ್ವಜನಿಕರಿಂದ ಕೇಳಿ ಬಂತು. ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ.ಪಿ.ದಿನೇಶ್ ಕುಮಾರ್, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡಿದ್ದರು. ವೃತ್ತ ನಿರೀಕ್ಷಕ ಪಿ.ಕೆ.ರಾಜು ಸ್ವಾಗತಿಸಿದರು.











