
ಮಡಿಕೇರಿ ಜ.7 NEWS DESK : ಗಡಿಗ್ರಾಮ ಕರಿಕೆ ಭಾಗದ ಪಡಿತರ ಚೀಟಿದಾರರಿಗೆ ಅಕ್ಕಿ ವಿತರಿಸುವ ಕೇಂದ್ರವನ್ನು ಮೂರಕ್ಕೆ ಬದಲಾಗಿ ಒಂದಕ್ಕೆ ಸೀಮಿತಗೊಳಿಸಿರುವ ಕ್ರಮವನ್ನು ಗ್ರಾಮಸ್ಥರು ತೀವ್ರವಾಗಿ ವಿರೋಧಿಸಿದ್ದಾರೆ. ಮಾಜಿ ಮಂಡಲ ಪ್ರಧಾನ ಕೋಡಿ ಕೆ.ಪೊನ್ನಪ್ಪ ಹಾಗೂ ಸಾಮಾಜಿಕ ಕಾರ್ಯಕರ್ತ, ಕರಿಕೆ ಹಲ್ಪ್ ಲೈನ್ ಸೆಂಟರ್ ನ ಸ್ಥಾಪಕ ಶಿವಗಿರಿ ರಾಜೇಶ್ ಅವರು ಜಿಲ್ಲಾಧಿಕಾರಿಗಳಿಗೆ ಇಂದು ಮನವಿ ಪತ್ರ ಸಲ್ಲಿಸಿ ಒಂದು ಕೇಂದ್ರದಿಂದ ಎದುರಾಗುತ್ತಿರುವ ಸಮಸ್ಯೆಗಳ ಬಗ್ಗೆ ವಿವರಿಸಿದರು. ಕರಿಕೆ ಗ್ರಾಮದಲ್ಲಿ ಸುಮಾರು 42 ವರ್ಷಗಳಿಂದಲೂ ಕರಿಕೆ ಸೊಸೈಟಿಯ ಅಕ್ಕಿಯನ್ನು ಗ್ರಾಮದ ಒಂದನೇ ಚೆತ್ತುಕಾಯ, ಎರಡನೇ ಎಳ್ಳುಕೊಚ್ಚಿ ಮತ್ತು ಮೂರನೇ ತೋಟಂ ಎಂಬಲ್ಲಿ ಆಯಾ ಭಾಗದ ಬಡವರಿಗೆ ವಿತರಣೆ ಮಾಡಲಾಗುತ್ತಿತ್ತು. ಪಡಿತರ ಚೀಟಿದಾರದಿಂದ ಒಂದೂ ರೂ. ವಸೂಲಿ ಮಾಡಲಾಗುತ್ತಿತ್ತು. ಅಲ್ಲದೆ ಖಾಲಿ ಗೋಣಿಚೀಲ ಮಾರಾಟ ಮಾಡಿಯೂ ಹಣ ಸಂಗ್ರಹಿಸಲಾಗುತ್ತಿತ್ತು. ಈ ನಿಯಮಬಾಹಿರ ಕ್ರಮದ ವಿರುದ್ಧ ಗ್ರಾಮಸ್ಥರು ಧ್ವನಿ ಎತ್ತಿದ ಕಾರಣಕ್ಕಾಗಿ ಅಥವಾ ಪ್ರತೀಕಾರವಾಗಿ ಎರಡು ಕೇಂದ್ರಗಳನ್ನು ಮುಚ್ಚಿ ಇದೀಗ ಒಂದು ಕೇಂದ್ರದಲ್ಲಿ ಮಾತ್ರ ಅಕ್ಕಿಯನ್ನು ನೀಡಲಾಗುತ್ತಿದೆ ಎಂದು ಮನವಿ ಪತ್ರದಲ್ಲಿ ಆರೋಪಿಸಲಾಗಿದೆ. ಒಂದು ಮತ್ತು ಮೂರನೇ ಕೇಂದ್ರಗಳನ್ನು ರದ್ದು ಮಾಡಿ ಎಳ್ಳುಕೊಚ್ಚಿಯಲ್ಲಿರುವ ಎರಡನೇ ಕೇಂದ್ರಕ್ಕೆ ಮಾತ್ರ ಸೀಮಿತಗೊಳಿಸಲಾಗಿದೆ. ಕರಿಕೆ ಗ್ರಾಮವು ಭಾಗಮಂಡಲದಿಂದ ಕರಿಕೆಗೆ ಬರುವ ರಸ್ತೆಯ 6ನೇ ಕಿಲೋಮೀಟರಿನಿಂದ ಗ್ರಾಮದ ಅಂತ್ಯದ ಚಂಬೇರಿಗೆ 27 ಕಿ.ಮೀ. ನಷ್ಟು ದೂರವಿರುತ್ತದೆ. ಗ್ರಾಮದ ದೊಡ್ಡ ಹೊಳೆಯಿಂದ ದಕ್ಷಿಣದ ಅರಣ್ಯದವರೆಗೆ ಜನರು ವಾಸಿಸುತ್ತಿದ್ದಾರೆ. ಅಕ್ಕಿ ಪಡೆಯಲು ಪಡಿತದಾರರು ಸುಮಾರು 18 ರಿಂದ 20 ಕಿ.ಮೀ ದೂರ ಕ್ರಮಿಸಬೇಕಾಗುತ್ತದೆ. ಇದರಿಂದ ಬಡ ಗ್ರಾಹಕರು ಪಡಿತರ ಅಕ್ಕಿಯಿಂದ ವಂಚಿತರಾಗುತ್ತಿದ್ದಾರೆ. ಆದ್ದರಿಂದ ಜಿಲ್ಲಾಡಳಿತ ಹಾಗೂ ಆಹಾರ ಇಲಾಖೆ ಈ ಹಿಂದೆ ಇದ್ದ ರೀತಿಯಲ್ಲೇ ಮೂರು ಕೇಂದ್ರಗಳಲ್ಲಿ ಅಕ್ಕಿ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಕೋಡಿ ಕೆ.ಪೊನ್ನಪ್ಪ ಹಾಗೂ ಶಿವಗಿರಿ ರಾಜೇಶ್ ಅವರು ಮನವಿ ಪತ್ರದ ಮೂಲಕ ಒತ್ತಾಯಿಸಿದ್ದಾರೆ.








