ಮಡಿಕೇರಿ ಜ.5 NEWS DESK : ಕೊಡಗಿನ ಚಿತ್ರಶಿಲ್ಪ ಕಲಾವಿದ ಬಿ.ಕೆ.ಗಣೇಶ್ ರೈ ಅವರು ವಿನ್ಯಾಸಗೊಳಿಸಿರುವ ಶ್ರೀ ಓಂಕಾರೇಶ್ವರ ದೇವಾಲಯದ ಐತಿಹಾಸಿಕ ಚಿತ್ರಕಥಾ ಪುಸ್ತಕ ಇಂದು ಲೋಕಾರ್ಪಣೆಗೊಂಡಿತು. ಶ್ರೀಓಂಕಾರೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಅರ್ಪಿಸಿದ ನಂತರ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ಶ್ರೀ ಓಂಕಾರೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಅಪ್ಪನೆರವಂಡ ಚುಮ್ಮಿ ದೇವಯ್ಯ ಅವರು ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಮೂಡಿಬಂದಿರುವ ಚಿತ್ರಕಥಾ ಪುಸ್ತಕವನ್ನು ಲೋಕಾರ್ಪಣೆಗೊಳಿಸಿ ಶುಭ ಹಾರೈಸಿದರು. ಮಡಿಕೇರಿ ಪುರಸಭೆಯ ಮಾಜಿ ಅಧ್ಯಕ್ಷ ಹಾಗೂ ಶ್ರೀ ಓಂಕಾರೇಶ್ವರ ದೇವಸ್ಥಾನ ಸಮಿತಿಯ ಮಾಜಿ ಅಧ್ಯಕ್ಷ ಕೊಂಗಂಡ ಎಸ್.ದೇವಯ್ಯ ಅವರು ಅತಿಥಿಗಳಾಗಿ ಪಾಲ್ಗೊಂಡು ಪ್ರಥಮ ಕೃತಿಯನ್ನು ಸ್ವೀಕರಿಸಿದರು. 16ನೇ ಶತಮಾನದಲ್ಲಿ ಕೊಡಗನ್ನು ಆಳಿದ ಹಾಲೇರಿ ವಂಶದ ರಾಜ ಮನೆತನದ ಲಿಂಗರಾಜೇಂದ್ರ ಒಡೆಯರ್ 1820ರಲ್ಲಿ ನಿರ್ಮಿಸಿರುವ ಶ್ರೀಓಂಕಾರೇಶ್ವರ ದೇವಾಲಯದ ಐತಿಹಾಸಿಕ ಚಿತ್ರಕಥೆ ಕೊಡಗಿನ ಕಲಾವಿದ ಬಿ.ಕೆ.ಗಣೇಶ್ ರೈ ಅವರ ಪರಿಕಲ್ಪನೆಯಲ್ಲಿ ಡಿಜಿಟಲ್ ಗ್ರಾಫಿಕ್ಸ್ ಚಿತ್ರದೊಂದಿಗೆ ವಿನ್ಯಾಸಗೊಂಡಿದೆ. ಪುಸ್ತಕ ಲೋಕಾರ್ಪಣೆಗೊಂಡ ನಂತರ ಮಾತನಾಡಿದ ಬಿ.ಕೆ.ಗಣೇಶ್ ರೈ ಮಡಿಕೇರಿಯನ್ನು ಆಳಿರುವ ಹಾಲೇರಿ ವಂಶದ ರಾಜಮನೆತನದ ವಿವರ, ಐತಿಹಾಸಿಕ ಅರಮನೆ ಹಾಗೂ ಶ್ರೀ ಓಂಕಾರೇಶ್ವರ ದೇವಾಲಯ ನಿರ್ಮಾಣದ ಹಿನ್ನೆಲೆಯನ್ನು ವರ್ಣರಂಜಿತ ಚಿತ್ರಗಳೊಂದಿಗೆ ಸುಂದರವಾಗಿ ಮೂಡಿ ಬಂದಿದೆ. ಚಿತ್ರಕಥಾ ಪುಸ್ತಕ ಮಾಲಿಕೆಯು ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಮುದ್ರಣವಾಗಿದೆ ಎಂದರು. ಕೊಡಗಿನ ಕುಲದೇವತೆ ಶ್ರೀ ಕಾವೇರಿ ಮಾತೆಯ ಪುರಾಣ ಚಿತ್ರಕಥೆ ಡಿಜಿಟಲ್ ಗ್ರಾಫಿಕ್ಸ್ ನಲ್ಲಿ ಕನ್ನಡ, ಇಂಗ್ಲೀಷ್, ಅರೆಭಾಷೆ ಮತ್ತು ತಮಿಳು ಭಾಷೆಯಲ್ಲಿ ಅಕ್ಟೋಬರ್ ನಲ್ಲಿ ಕಾವೇರಿ ತುಲಾ ಸಂಕ್ರಮಣದಂದು ಬಿಡುಗಡೆಯಾಗಿತ್ತು. ಇದೀಗ ಬಿಡುಗಡೆಗೊಂಡಿರುವ ಶ್ರೀ ಓಂಕಾರೇಶ್ವರ ದೇವಾಲಯದ ಚಿತ್ರಕಥಾ ಪುಸ್ತಕ ಮಡಿಕೇರಿಯ ಐಶ್ವರ್ಯ ಕ್ರೀಯೇಶನ್ಸ್ ರವರ 27ನೇ ಪ್ರಕಟಣೆಯಾಗಿದೆ. ಪುಸ್ತಕ ಶ್ರೀ ಓಂಕಾರೇಶ್ವರ ದೇವಾಲಯ ಹಾಗೂ ಪ್ರಮುಖ ಪುಸ್ತಕ ಮಳಿಗೆಗಳಲ್ಲಿ ದೊರೆಯಲಿದೆ ಎಂದು ಮಾಹಿತಿ ನೀಡಿದರು.











