
ಮಡಿಕೇರಿ NEWS DESK ಜ.9 : ಮಡಿಕೇರಿ ತಾಲ್ಲೂಕಿನ ಬಲ್ಲಮಾವಟಿ ಗ್ರಾಮದ ನಾಲ್ನಾಡ್ ಹಾಕಿ ಕ್ಲಬ್ ವತಿಯಿಂದ 13ನೇ ವರ್ಷದ ನಾಲ್ನಾಡ್ ವ್ಯಾಪ್ತಿಯ ಅಂತರ ಗ್ರಾಮ ಹಾಕಿ ಪಂದ್ಯಾವಳಿ ಮತ್ತು ಹಗ್ಗಜಗ್ಗಾಟ ಸ್ಪರ್ಧೆಯನ್ನು ಗ್ರಾಮದ ನೇತಾಜಿ ವಿದ್ಯಾಸಂಸ್ಥೆಯ ಮೈದಾನದಲ್ಲಿ ಮಾ.29ರಿಂದ 5 ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ ಎಂದು ಕ್ರೀಡಾಕೂಟದ ಸಂಚಾಲಕ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಪಂದ್ಯಾವಳಿಯಲ್ಲಿ ನಾಲ್ನಾಡ್ ವ್ಯಾಪ್ತಿಯ ಬಲ್ಲಮಾವಟಿ, ನಾಪೋಕ್ಲು, ಕಕ್ಕಬೆ-ಕುಂಜಿಲ, ಎಮ್ಮೆಮಾಡು ಗ್ರಾಮ ಪಂಚಾಯ್ತಿ ವ್ಯಾಪ್ತಿಯ 14 ಗ್ರಾಮ ತಂಡಗಳು ಭಾಗವಹಿಸಲಿವೆ. ಪುರುಷರಿಗೆ ಹಾಕಿ ಪಂದ್ಯಾವಳಿ ಮತ್ತು ಮಹಿಳೆಯರಿಗೆ ಹಗ್ಗಜಗ್ಗಾಟ ಸ್ಪರ್ಧೆ ಆಯೋಜಿಸಲಾಗಿದೆ ಎಂದರು. ಹಾಕಿ ಕ್ರೀಡೆಗೆ ಮತ್ತಷ್ಟು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಏ.2ರಿಂದ ಬೇಸಿಗೆ ರಜೆ ಸಂದರ್ಭ ಮಕ್ಕಳಿಗೆ ನುರಿತ ತರಬೇತುದಾರರಿಂದ 20 ದಿನಗಳ ಕಾಲ ಉಚಿತ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗುತ್ತಿದೆ. ಕಳೆದ ಬಾರಿ 70 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಆಸಕ್ತ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಿಕೊಂಡು ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು. ಕ್ರೀಡಾಕೂಟದ ಭಾಗವಾಗಿ ನಾಲ್ನಾಡು ವ್ಯಾಪ್ತಿಯ ಪ್ರೌಢಶಾಲಾ ಮಕ್ಕಳಿಗೆ ಅಂತರ್ ಶಾಲಾ ಮಟ್ಟದ ಹಾಕಿ ಪಂದ್ಯಾವಳಿಯನ್ನು ಮಾ.29 ರಿಂದ ಹಮ್ಮಿಕೊಳ್ಳಲಾಗಿದೆ. ಮಾ.15 ತಂಡಗಳ ನೋಂದಣಿಗೆ ಕೊನೆಯ ದಿನವಾಗಿದೆ ಎಂದು ತಿಳಿಸಿದ ಅವರು, ಹಾಕಿ ಪಂದ್ಯಾವಳಿ ಮತ್ತು ಮಹಿಳೆಯರಿಗೆ ಹಗ್ಗಜಗ್ಗಾಟ ವಿಜೇತರಿಗೆ ಆಕರ್ಷಕ ಟ್ರೋಫಿ ಮತ್ತು ನಗದು ಬಹುಮಾನ ನೀಡಲಾಗುವುದು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಕ್ಲಬ್ ಅಧ್ಯಕ್ಷ ಕರವಂಡ ಟಿ.ಸುರೇಶ್, ಕಾರ್ಯದರ್ಶಿ ಮಚ್ಚುರ ಯದು ಕುಮಾರ್, ನಿದೇರ್ಶಕರಾದ ಅಪ್ಪಚೆಟ್ಟೋಳಂಡ ಹರ್ಷಿತ್ ಅಯ್ಯಪ್ಪ, ಕೋಟೇರ ಬೋಪಣ್ಣ ಹಾಗೂ ಪಾಲೆಯಡ ಸಂತೋಷ್ ಉಪಸ್ಥಿತರಿದ್ದರು.








