
ನಾಪೋಕ್ಲು ಜ.12 NEWS DESK : ಸ್ಥಳೀಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಟಿಪ್ಪರ್ ವಾಹನವನ್ನು ಪೊಲೀಸರು ಮರಳು ಸಹಿತ ವಶಕ್ಕೆ ಪಡೆದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಹಸ್ತಾಂತರಿಸಿ ದಂಡ ವಿಧಿಸಿದ್ದಾರೆ. ಬೇತು ಗ್ರಾಮದ ಕಾರೆಕಾಡು ಬಳಿಯ ಕಾವೇರಿ ನದಿ ದಡದಿಂದ ಟಿಪ್ಪರ್ ವಾಹನದಲ್ಲಿ ಪರವಾನಗಿ ಇಲ್ಲದೆ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಎಸ್‍ಐ ರಾಘವೇಂದ್ರ ಹಾಗೂ ಸಿಬ್ಬಂದಿಗಳು ಮಾಲು ಸಹಿತ ಟಿಪ್ಪರ್ ವಾಹನವನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಪ್ರಕರಣವನ್ನು ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಹಸ್ತಾಂತರಿಸಿ ವಾಹನದ ಮಾಲೀಕನಿಗೆ 32,320 ರೂಗಳ ದಂಡವನ್ನು ವಿಧಿಸಿ ಕಾನೂನಿನ ಕ್ರಮ ಕೈಗೊಂಡಿದ್ದಾರೆ. ಕಾವೇರಿ ನದಿ ದಡದಲ್ಲಿ ಮರಳು ಸಾಗಟಕ್ಕೆ ತೆರಳುವ ರಸ್ತೆಗೆ ಅಡ್ಡಲಾಗಿ ಜೆಸಿಬಿ ಯಂತ್ರವನ್ನು ಬಳಸಿ ಚರಂಡಿ ತೆಗೆಸಿದ ಪೊಲೀಸರು ಮರಳುಗಾರಿಕೆಗೆ ವಾಹನಗಳು ತೆರಳದಂತೆ ಕ್ರಮ ಕೈಗೊಂಡಿದ್ದಾರೆ. ಠಾಣಾ ವ್ಯಾಪ್ತಿಯ ಕೆಲವು ಭಾಗಗಳ ಅಕ್ರಮವಾಗಿ ಮರಳು ದಂಧೆ ನಡೆಸುತ್ತಿರುವ ಬಗ್ಗೆ ತಿಳಿದು ಬಂದಲ್ಲಿ ಸಾರ್ವಜನಿಕರು ಪೊಲೀಸ್ ಠಾಣೆಗೆ ಅಥವಾ ಸಂಬಂಧಪಟ್ಟ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಮಾಹಿತಿ ನೀಡುವಂತೆ ಇಲಾಖೆ ತಿಳಿಸಿದೆ.
ವರದಿ : ದುಗ್ಗಳ ಸದಾನಂದ.









