

ವಿರಾಜಪೇಟೆ ಜ.12 NEWS DESK : ಸಮಾಜದಲ್ಲಿ ತಂಬಾಕು ಸೇವನೆ ಪ್ರತಿಷ್ಠೆ ಹಾಗೂ ಗೌರವದ ಪ್ರತಿಕವೆಂಬಂತೆ ಬಿಂಬಿತವಾಗುತ್ತಿರುವುದರಿಂದ ಯುವ ಜನತೆ ಹೆಚ್ಚಾಗಿ ತಂಬಾಕು ಉತ್ಪನ್ನಗಳ ಕಡೆ ಆಕರ್ಷಿತರಾಗುತ್ತಿರುವುದು ಕಳವಳಕಾರಿ ಎಂದು ಆಶೀರ್ವಾದ ಆಸ್ಪತ್ರೆಯ ವೈದ್ಯರಾದ ಡಾ.ಚೇಂದಿರ ಬೋಪಣ್ಣ ಅಭಿಪ್ರಾಯ ವ್ಯಕ್ತಪಡಿಸಿದರು. ಶ್ರೀ ಮುತ್ತಪ್ಪನ್ ಮಲಯಾಳಿ ಸಮಾಜದ ವತಿಯಿಂದ ವಿರಾಜಪೇಟೆ ಸಂತ ಅನ್ನಮ್ಮ ಶಾಲೆಯ ಸಭಾಭವನದಲ್ಲಿ ನಡೆದ ತಂಬಾಕು ಮುಕ್ತ ಸಮಾಜ ಜಾಗೃತಿ ಕಾರ್ಯಕ್ರಮ ಹಾಗೂ ಕೃತಕ ಕಾಲು ಜೋಡಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ಜೀವನವು ವ್ಯಥೆಯಿಂದ ಕೂಡಿದ ಕಥೆಯಾಗಬಾರದು. ಪ್ರಸ್ತುತ ಸಮಾಜದಲ್ಲಿ ಒತ್ತಡದ ಜೀವನ, ಹೊಸತನ ಮುಂತಾದ ಕಾರಣದಿಂದಾಗಿ ವಿವಿಧ ರೀತಿಯ ತಂಬಾಕು ಉತ್ಪನ್ನಗಳ ಸೇವನೆ ಆರಂಭಿಸುತ್ತಿದ್ದಾರೆ. 18 ರಿಂದ 25 ವರ್ಷದೊಳಗಿನ ಯುವ ಜನತೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ವ್ಯಸನಕ್ಕೆ ದಾಸರಾಗುತ್ತಿದ್ದಾರೆ. ತಂಬಾಕು ಸೇವನೆಯಿಂದ ತಮ್ಮ ಆರೋಗ್ಯವನ್ನು ಕೆಡಿಸಿಕೊಳ್ಳುವುದರೊಂದಿಗೆ ಜೀವನವನ್ನು ಕೂಡ ಹಾಳು ಮಾಡಿಕೊಳ್ಳುವುದರತ್ತ ಸಾಗುತ್ತಿದ್ದಾರೆ. ಧೂಮಪಾನ ಮಾಡುವುದರಿಂದ ಕೇವಲ ಧೂಮಪಾನಿಗೆ ಮಾತ್ರ ಹಾನಿಯಲ್ಲ ಧೂಮಪಾನದಿಂದ ಹೊರಗೆ ಸೂಸುವ ವಿಷಕಾರಿ ಅಂಶಗಳನ್ನು ಸೇವನೆ ಮಾಡುವುದರಿಂದ ಇತರರ ಆರೋಗ್ಯದಲ್ಲೂ ತೊಂದರೆಯಾಗುತ್ತದೆ. ಪ್ರಮುಖವಾಗಿ ಕ್ಯಾನ್ಸರ್, ಶ್ವಾಸಕೋಶದ ಸಮಸ್ಯೆ, ಹೃದಯ ಸಂಬಂಧಿ ಕಾಯಿಲೆ, ಅಂಗಾಂಗ ಹಾನಿಯಂತಹ ಸಮಸ್ಯೆಗಳಿಗೆ ತುತ್ತಾಗಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುವುದರೊಂದಿಗೆ ಕುಟುಂಬದ ನೆಮ್ಮದಿ ಹಾಳು ಮಾಡುತ್ತಾರೆ. ಆದ್ದರಿಂದ ಯುವ ಜನತೆ ಉತ್ತಮ ಜೀವನ ಶೈಲಿಯನ್ನು ಅನುಸರಿಸಿಕೊಂಡು ತಂಬಾಕು ಮುಕ್ತ ಉತ್ತಮ ಸಮಾಜ ನಿರ್ಮಾಣ ಮಾಡಬೇಕೆಂದರು. ಸಂತ ಅನ್ನಮ್ಮ ಚರ್ಚ್‍ನ ಬ್ರದರ್ ಜಯಂತ್ ಮಾತನಾಡಿ, ತಂಬಾಕು ಸೇವನೆ ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಹಾನಿ ಮಾಡುತ್ತದೆ. ಆದಷ್ಟು ವ್ಯಸನಕ್ಕೆ ಒಳಗಾದವರನ್ನು ವ್ಯಸನ ಮುಕ್ತಾರನ್ನಾಗಿ ಮಾಡಲು ಪ್ರಯತ್ನ ಮಾಡಬೇಕೆಂದರು. ಸಂತ ಅನ್ನಮ್ಮ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಬೆನ್ನಿ ಜೋಸೆಫ್ ಮಾತನಾಡಿ, ದುಶ್ಚಟಗಳು ಎಳೆಯ ವಿದ್ಯಾರ್ಥಿಗಳಲ್ಲಿ ಎಂದಿಗೂ ಬೆಳೆಯಬಾರದು. ಪ್ರತಿದಿನ ಸಮಾಜದಲ್ಲಿ ವಿವಿಧ ರೀತಿಯ ತಂಬಾಕು ಉತ್ಪನ್ನಗಳನ್ನು ಹಲವರು ಸೇವಿಸುವುದನ್ನು ನಾವು ನೋಡುತ್ತಿದ್ದೇವೆ. ಅದರ ಸೇವನೆಯಿಂದ ಉಂಟಾಗುವ ಪರಿಣಾಮವನ್ನು ಅರಿತು ಆದಷ್ಟು ತಂಬಾಕು ಸೇವನೆಯಿಂದ ದೂರವಿರಬೇಕು. ತಂಬಾಕು ಸೇವನೆ ಕ್ಷಣದ ಆನಂದವನ್ನು ನೀಡಿದರು ಅದು ಬೀರುವ ದುಷ್ಪರಿಣಾಮ ತುಂಬಾ ಕಠಿಣವಾಗಿರುತ್ತದೆ. ಕಾರ್ಬನ್ ಮೋನಾಕ್ಸೈಡ್, ಕಾರ್ಬನ್ ಡೈಆಕ್ಸೈಡ್‍ನಂತಹ ಹಾನಿಕಾರಕ ಅನಿಲಗಳು ನಮ್ಮ ದೇಹವನ್ನು ಸೇರಿ ಆರೋಗ್ಯವನ್ನು ಕೆಡಿಸುತ್ತದೆ. ಇದರಿಂದ ಹೊರ ಬರುವ ರಾಸಾಯನಿಕಗಳು ಮಾನವನ ದೇಹದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬ ಅಂಶವನ್ನು ವಿವರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀ ಮುತ್ತಪ್ಪನ್ ಮಲಯಾಳಿ ಸಮಾಜದ ಅಧ್ಯಕ್ಷ ಪಿ.ಜಿ.ಸುಮೇಶ್, ನಾವೆಲ್ಲಾ ಬಾಲ್ಯದಲ್ಲಿ ಅಡುಗೆ ಮನೆಯಲ್ಲಿದ್ದ ತಿಂಡಿ ತಿನಿಸುಗಳನ್ನು ಕಳುವು ಮಾಡುತ್ತಿದ್ದೆವು. ವಿದ್ಯಾರ್ಥಿಗಳು, ಯುವಜನರು ಆದಷ್ಟು ಹಿರಿಯರಲ್ಲಿರುವ ಒಳ್ಳೆಯ ಗುಣಗಳನ್ನು ಬೆಳೆಸಿಕೊಳ್ಳಬೇಕು. ದುಶ್ಚಟದಿಂದ ದೂರವಿದ್ದು ವ್ಯಸನ ಮುಕ್ತವಾದ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರು ತಮ್ಮದೆಯಾದ ಕೊಡುಗೆ ನೀಡಬೇಕೆಂದರು. ವಿರಾಜಪೇಟೆ ನಗರ ಠಾಣೆಯ ಠಾಣಾಧಿಕಾರಿ ಪ್ರಮೋದ್, ಸಮಾಜ ಸೇವಕ ಚೋಕಂಡ ಸಂಜು, ರಾಷ್ಟೀಯ ಮಹಿಳಾ ಆಯೋಗದ ಸಲಹೆಗಾರ, ಸಂಪನ್ಮೂಲ ವ್ಯಕ್ತಿ ಪಿ.ಎಸ್. ಶರತ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಇವಾಲ್ವ್ ಬ್ಯಾಕ್ ರೆಸಾರ್ಟ್‍ನ ವಸಂತಕುಮಾರ್, ಸಂತ ಅನ್ನಮ್ಮ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಟೀನಾ ಫರ್ನಾಂಡಿಸ್, ಜುಮ್ಮಾ ಮಸೀದಿ ಅಧ್ಯಕ್ಷ ಕೆ.ಪಿರಶೀದ್, ಸಹಾರ ಫ್ರೆಂಡ್ಸ್ ತಂಡದ ರಾವುಫ್, ವಿರಾಜಪೇಟೆ ಗ್ರಾಮಾಂತರ ಠಾಣೆಯ ಠಾಣಾಧಿಕಾರಿ ಲತಾ, ಶ್ರೀ ಮುತ್ತಪ್ಪನ್ ಮಲಯಾಳಿ ಸಮಾಜದ ಸರ್ವ ಸದಸ್ಯರು, ಹಿಂದೂ ಮಲಯಾಳಿ ಮಹಿಳಾ ಅಸೋಸಿಯೇಷನ್‍ನ ಸದಸ್ಯರು, ಸಂತ ಅನ್ನಮ ಪ್ರೌಢಶಾಲೆಯ ಶಿಕ್ಷಕ ವರ್ಗ, ವಿದ್ಯಾರ್ಥಿಗಳು ಹಾಜರಿದ್ದರು. :: ಕೃತಕ ಕಾಲು ಜೋಡಣೆ :: ತನ್ನ ಎರಡು ಕಾಲುಗಳನ್ನು ಕಳೆದುಕೊಂಡು ಮರದ ಕಾಲುಗಳ ಮೂಲಕ ದೈನಂದಿನ ಚಟುವಟಿಕೆಗಳನ್ನು ನಡೆಸಲು ಕಷ್ಟಪಡುತ್ತಿದ್ದ ಧನೇಶ್ ಅವರಿಗೆ ದಾನಿಗಳಾದ ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಚೆರಿಯಪಂಡ ಸುರೇಶ್ ನಂಜಪ್ಪ, ಪೊಯ್ಯೇಟಿರ ಚಂಗಪ್ಪ, ಮಾಳೇಟಿರ ದೇವಯ್ಯ, ಮುಕ್ಕಾಟಿರ ಬೋಪಣ್ಣ, ಸಮಾಜ ಸೇವಕ ಚೋಕಂಡ ಸಂಜು, ಹಿಂದೂ ಮಲಯಾಳಿ ಅಸೋಸಿಯೇಷನ್‍ನ ಜಿಲ್ಲಾ ಕಾರ್ಯದರ್ಶಿ, ಆರೆಂಜ್ ಕೌಂಟಿ ಸಂಸ್ಥೆ, ಕೊಡಗು ಮಲಯಾಳಿ ನಿಧಿ ಬ್ಯಾಂಕ್, ವಿರಾಜಪೇಟೆಯ ದಾನಿಗಳು ಮತ್ತು ಶ್ರೀ ಮುತ್ತಪ್ಪನ್ ಮಲಯಾಳಿ ಸಮಾಜದ ಸದಸ್ಯರ ಸಹಕಾರದಿಂದ ಸುಮಾರು 2.25 ಲಕ್ಷದ ಕಾರ್ಬನ್ ಫೈಬರ್ ಪಾದ, ಸಿಲಿಕಾನ್ ಲೀನಿಯರ್ ಮತ್ತು ಸಾಕೆಟ್‍ನೊಂದಿಗೆ ಹೈಟೆಕ್ ಪ್ರಾಸ್ಟೆಸಿಸ್‍ನ ಕೃತಕ ಕಾಲನ್ನು ಡಾ. ತ್ಯಾಗರಾಜ್ ಅಳವಡಿಸಿದರು. ರಾಷ್ಟೀಯ ಮಹಿಳಾ ಆಯೋಗದ ಸಲಹೆಗಾರ ಪಿ.ಎಸ್.ಶರತ್, ಧನೇಶ್ ಅವರಿಗೆ ಲ್ಯಾಪ್‍ಟಾಪ್ ಕೊಡುಗೆ ನೀಡಿದರು.









