
ಮಡಿಕೇರಿ ಜ.12 NEWS DESK : ಶ್ರೀ ಕಾವೇರಮ್ಮೆ ಮತ್ತು ಅಮ್ಮ ಕೊಡವ ಹಿತರಕ್ಷಣಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಜ.15 ರಂದು ಭಾಗಮಂಡಲದಲ್ಲಿ 13ನೇ ವರ್ಷದ ‘ಚಂಡಿಕಾ ಹೋಮ’ ಮತ್ತು ವಿವಿಧ ಪೂಜಾ ಕಾರ್ಯಗಳನ್ನು ಆಯೋಜಿಸಲಾಗಿದೆಯೆಂದು ಟ್ರಸ್ಟ್ ಅಧ್ಯಕ್ಷರಾದ ಮುದ್ದಂಡ ಬಿ. ದೇವಯ್ಯ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಸ್ಥಾನದ ಮುಂಭಾಗದ ಟ್ರಸ್ಟ್‌ನ ಜಾಗದಲ್ಲಿ ಲೋಕ ಕಲ್ಯಾಣಕ್ಕಾಗಿ ಪೂಜಾ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ. ಅಂದು ಬೆಳಗ್ಗೆ 7 ಗಂಟೆಯಿಂದ ಶ್ರೀ ಗಣಪತಿ ಹೋಮ, ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆ, ಶತರುದ್ರಾಭಿಷೇಕ ಹಾಗೂ ಚಂಡಿಕಾ ಹೋಮ ನಡೆಯಲಿದೆ ಎಂದು ತಿಳಿಸಿದರು. ಪೂಜಾ ಕಾರ್ಯದ ನಳಿಕ ಭಕ್ತಾದಿಗಳಿಗೆ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿದೆ. ಧನ ಸಹಾಯ ಮಾಡುವವರು ಆಡಳಿತ ಮಂಡಳಿ ಸದಸ್ಯರಿಗೆ ನೀಡಬಹುದು ಅಥವಾ ಟ್ರಸ್ಟ್‌ನ ಬ್ಯಾಂಕ್ ಖಾತೆಗೆ ಜಮೆ ಮಾಡಿ ತಮ್ಮ ಹೆಸರು ಮತ್ತು ವಿಳಾಸವನ್ನು ಟ್ರಸ್ಟ್ ಗೆ ತಿಳಿಸಬೇಕೆಂದು ಮನವಿ ಮಾಡಿದರು. ಧನ ಸಹಾಯ ಮಾಡುವವರು ‘ ಶ್ರೀ ಕಾವೇರಮ್ಮೆ ಕೊಡವ ಮತ್ತು ಅಮ್ಮ ಕೊಡವ ಹಿತರಕ್ಷಣಾ ಚಾರಿಟೇಬಲ್ ಟ್ರಸ್ಟ್, ಖಾತೆ-ಕೆಡಿಸಿಸಿ ಬ್ಯಾಂಕ್, ಹೆಚ್.ಒ. ಬ್ರಾಂಚ್, ಮಡಿಕೇರಿ, ಖಾತೆ ಸಂಖ್ಯೆ-121000879391, ಐಎಫ್‍ಎಸ್ ಕೋಡ್-ಕೆಎಸ್‍ಸಿಬಿ0011001’ ಈ ಖಾತೆಗೆ ಹಣ ಪಾವತಿಸಬಹುದೆಂದು ಹೇಳಿದರು. ದಶಕಗಳ ಹಿಂದೆ ನಡೆಸಿದ ತಾಂಬೂಲ ಪ್ರಶ್ನೆಯಲ್ಲಿ ಕಂಡು ಬಂದ ದೋಷಗಳ ನಿವಾರಣೆಗಾಗಿ 2014 ರಿಂದ ಟ್ರಸ್ಟ್ ವತಿಯಿಂದ ವರ್ಷಂಪ್ರತಿ ಪೂಜಾ ಕಾರ್ಯಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಇದರಿಂದ ಸಾಕಷ್ಟು ದೋಷಗಳ ಪರಿಹಾರವಾಗಿದ್ದು, ಪೂಜಾ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗುವುದಾಗಿ ತಿಳಿಸಿದರು. ಕೋಟಿ ವೆಚ್ಚದಲ್ಲಿ ಭವನ ನಿರ್ಮಾಣ- ಟ್ರಸ್ಟ್ ಭಾಗಮಂಡಲ ದೇವಸ್ಥಾನದ ಬಳಿಯಲ್ಲಿ 50.50 ಸೆಂಟ್ಸ್ ಜಾಗವನ್ನು ಹೊಂದಿಕೊಂಡಿದೆ. ಇದರಲ್ಲಿ ಸರ್ಕಾರ ಒದಗಿಸಿರುವ 1 ಕೋಟಿ ಅನುದಾನದ ಸಹಕಾರದೊಂದಿಗೆ ಹಾಗೂ ಭಕ್ತಾದಿಗಳು ಮತ್ತು ದಾನಿಗಳ ನೆರವಿನಿಂದ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲು ಹಾಗೂ ಭಕ್ತಾದಿಗಳು ತಂಗಲು ಅವಕಾಶವಿರುವಂತಹ ಸುಸಜ್ಜಿತ ಕಟ್ಟಡ ನಿರ್ಮಾಣವಾಗಲಿದ್ದು, ಈಗಾಗಲೆ ಇದಕ್ಕೆ ಶಂಕು ಸ್ಥಾಪನೆಯನ್ನು ನೆರವೇರಿಸಲಾಗಿದೆಯೆಂದು ಮಾಹಿತಿ ನೀಡಿದರು. ಗೋಷ್ಠಿಯಲ್ಲಿ ಟ್ರಸ್ಟ್ ಉಪಾಧ್ಯಕ್ಷರಾದ ಮನೆಯಪಂಡ ಕಾಂತಿ ಸತೀಶ್, ಟ್ರಸ್ಟಿಗಳಾದ ನೆರೆಯಂಡಮ್ಮಂಡ ಪ್ರಭು, ತೋಲಂಡ ಸೋಮಯ್ಯ, ಹಂಚೆಟ್ಟಿರ ಮನು ಮುದ್ದಪ್ಪ ಉಪಸ್ಥಿತರಿದ್ದರು.









