
ಸುಂಟಿಕೊಪ್ಪ ಜ.12 NEWS DESK : ಸುಂಟಿಕೊಪ್ಪ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಟ್ರ್ಯಾಕ್‍ಶೂಟ್ ವಿತರಿಸಲಾಯಿತು. ಸುಂಟಿಕೊಪ್ಪದ ಸಮಾಜ ಸೇವಕ ಇಬ್ರಾಹಿಂ (ಬಾಪ್ಪು) ಶಾಲೆಯ 94 ವಿದ್ಯಾರ್ಥಿಗಳಿಗೆ ಟ್ರ್ಯಾಕ್‍ಶೂಟ್ ವಿತರಿಸಿದರು. ಈ ಸಂದರ್ಭ ಶಾಲಾ ಉಪಪ್ರಾಂಶುಪಾಲ ಬಾಲಕೃಷ್ಣ ಅವರು ಮಾತನಾಡಿ, ಕೇವಲ ಒಂದು ಮಾತಿಗೆ ಇಬ್ರಾಹಿಂ ಬಾಪ್ಪು ಅವರು ನಮ್ಮ ಶಾಲೆಯ ಬಹುಮುಖ್ಯ ಅವಶ್ಯಕತೆಯೊಂದನ್ನು ಈಡೇರಿಸಿಕೊಟ್ಟಿದ್ದಾರೆ. ಹಣವನ್ನು ಸದುಪಯೋಗ ಪಡಿಸಿಕೊಳ್ಳುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ ಎಂದರು. ವಿದ್ಯಾರ್ಥಿಗಳು ಶೇ.100 ರಷ್ಟು ಫಲಿತಾಂಶ ಪಡೆಯುವ ಮೂಲಕ ಶಾಲೆಗೆ ಉತ್ತಮ ಹೆಸರು ತರಬೇಕು ಎಂದರು. ಹಿರಿಯ ಪತ್ರಕರ್ತರಾದ ಬಿ.ಡಿ.ರಾಜು ರೈ ಮಾತನಾಡಿ, ಇಬ್ರಾಹಿಂ ಬಾಪ್ಪು ಅವರು 2018 ರಿಂದ ಎಲೆಮರೆ ಕಾಯಿಯಂತೆ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ತನ್ನ ಆದಾಯದಿಂದ ಏನಾನದರೂ ಸಮಾಜಕ್ಕೆ ನೀಡಬೇಕೆಂಬ ಬಹುದೊಡ್ಡ ಇರಾದೆಯನ್ನು ಇರಿಸಿಕೊಂಡಿರುವುದು ಶ್ಲಾಘನೀಯ ಕಾರ್ಯವೆಂದು ಅವರು ಬಣ್ಣಿಸಿದರು. ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ಅವರಿಗೆ ಧನ ಸಹಾಯವನ್ನು ಮಾಡುತ್ತಿರುವುದು ಸಮಾಜ ಸೇವೆಗೆ ಹಿಡಿದಿರುವ ಕನ್ನಡಿಯಾಗಿದೆ ಎಂದು ಪ್ರಶಂಸಿದರು. ಸುಂಟಿಕೊಪ್ಪ ಟಿನೆಜ್ ಸೆಂಟರ್ ಮಾಲೀಕ ಹಸೈನಾರ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸಿರಿಲ್ ರಾಡ್ರಿಗಸ್, ಶಾಲಾ ಸಹಶಿಕ್ಷಕರುಗಳಾದ ಪ್ರಕಾಶ್, ಚಿತ್ರ, ಲಿಯೋನಾ, ಸುನಂದ, ಜಯಶ್ರೀ, ಶಾಂತ ಹೆಗ್ಡೆ ಇದ್ದರು.









