
ಬೆಂಗಳೂರು ಜ.13 NEWS DESK : ರಾಜ್ಯದಲ್ಲಿ ವ್ಯಕ್ತಿ ಅಥವಾ ಕುಟುಂಬವನ್ನು ಸಾಮಾಜಿಕವಾಗಿ ಬಹಿಷ್ಕರಿಸುವ ಅಮಾನವೀಯ ಪದ್ಧತಿಗೆ ಕಾನೂನುಬದ್ಧ ಕಡಿವಾಣ ಹಾಕುವ ಉದ್ದೇಶದಿಂದ ‘ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ಅಧಿನಿಯಮ–2025’ಕ್ಕೆ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅಂಕಿತ ಹಾಕಿದ್ದು, ಈ ಮೂಲಕ ಅಧಿನಿಯಮವು ರಾಜ್ಯಾದ್ಯಂತ ಕಾನೂನಾಗಿ ಜಾರಿಗೊಳ್ಳಲಿದೆ. ಈ ಮಹತ್ವದ ಬೆಳವಣಿಗೆಯನ್ನು ಸಮಾಜ ಕಲ್ಯಾಣ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ವ್ಯಕ್ತಿ ಘನತೆ ರಕ್ಷಣೆ, ನಾಗರಿಕರಲ್ಲಿ ಭಾತೃತ್ವವನ್ನು ಉತ್ತೇಜಿಸುವುದು ಹಾಗೂ ಮೂಲಭೂತ ಹಕ್ಕುಗಳನ್ನು ಕಾಪಾಡುವುದು ಈ ಕಾನೂನಿನ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ. ಸಾಮಾಜಿಕ ಬಹಿಷ್ಕಾರದಂತಹ ಪದ್ಧತಿಗಳು ಮಾನವೀಯ ಮೌಲ್ಯಗಳಿಗೆ ವಿರುದ್ಧವಾಗಿದ್ದು, ಅವುಗಳನ್ನು ಸಂಪೂರ್ಣವಾಗಿ ನಿಷೇಧಿಸುವ ನಿಟ್ಟಿನಲ್ಲಿ ಈ ಅಧಿನಿಯಮ ಮಹತ್ವದ ಪಾತ್ರ ವಹಿಸಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. :: ಪಂಚಾಯಿತಿ, ಸಮಿತಿಗಳಿಗೆ ನಿರ್ಬಂಧ :: ಈ ಅಧಿನಿಯಮದ ಪ್ರಕಾರ, ಪಂಚಾಯಿತಿ, ನೋಂದಾಯಿತ ಅಥವಾ ನೋಂದಾಯಿತವಲ್ಲದ, ಔಪಚಾರಿಕ ಅಥವಾ ಅನೌಪಚಾರಿಕ ಯಾವುದೇ ಸಮಿತಿ, ನಿಕಾಯಗಳು ಧರ್ಮ, ಜಾತಿ, ಉಪಜಾತಿ ಅಥವಾ ಸಾಮಾಜಿಕ ಕಾರಣಗಳನ್ನು ಉಲ್ಲೇಖಿಸಿ ಯಾರ ಮೇಲಾದರೂ ಸಾಮಾಜಿಕ ತಾರತಮ್ಯಕ್ಕೆ ದಾರಿ ಮಾಡಿಕೊಡುವಂತೆ ನೇರವಾಗಲಿ ಅಥವಾ ಪರೋಕ್ಷವಾಗಲಿ ಸೂಚನೆ ನೀಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.









