
ಮಡಿಕೇರಿ ಜ.16 NEWS DESK : ಸೈಬರ್ ಕ್ರೈಂ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅನುಮಾನಾಸ್ಪದವಾದ ಯಾವುದೇ ಲಿಂಕ್‍ಗಳು ತಮ್ಮ ಇ-ಮೇಲ್, ಫೇಸ್ ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಕಂಡು ಬಂದಲ್ಲಿ ಅದನ್ನು ತೆರೆಯುವ ಪ್ರಯತ್ನ ಮಾಡಬೇಡಿ ಎಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ ಮನವಿ ಮಾಡಿದ್ದಾರೆ. ನಗರದ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಾಮಾಜಿಕ ಜಾಲತಾಣಗಳ ಮೂಲಕ ಸಾರ್ವಜನಿಕರನ್ನು ವಂಚಿಸುವ, ಕೆಟ್ಟ ಸಂದೇಶಗಳನ್ನು ಪಸರಿಸುವ ‘ಸೈಬರ್ ಕ್ರೈಂ’ಗಳ ಕುರಿತು ಜನಸಾಮಾನ್ಯರು ಜಾಗೃತರಾಗಬೇಕು ಎಂದರು. ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣ ಫೇಸ್ ಬುಕ್ ಮೂಲಕ ಅಶ್ಲೀಲ ಸಂದೇಶವನ್ನು ಹರಡಿರುವ ಬಗ್ಗೆ ಇದೇ ಜ.13 ರಂದು ಸೈಬರ್ ಕ್ರೈಂ ವಿಭಾಗದಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತಾಂತ್ರಿಕ ಮಾಹಿತಿಗಳನ್ನು ಕಲೆ ಹಾಕಿ, ಪರಿಶೀಲಿಸುವ ಕಾರ್ಯ ನಡೆದಿರುವುದಾಗಿ ತಿಳಿಸಿದರು. ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಂ ಪ್ರಕರಣಗಳು ಹೆಚ್ಚುತ್ತಿವೆ. ಸಾಮಾಜಿಕ ಜಾಲತಾಣದ ವಿವಿಧ ಮಾಧ್ಯಮಗಳ ಮೂಲಕ ವಂಚನೆಯ ಸಂಚನ್ನು ದುಷ್ಕರ್ಮಿಗಳು ರೂಪಿಸಿ, ಜನ ಸಾಮಾನ್ಯರನ್ನು ಆಮಿಷಗಳಿಗೆ ಒಳಪಡಿಸುತ್ತಿದ್ದಾರೆ. ಒಂದು ವೇಳೆ ಅರಿಯದೆ ಇಂತಹ ವಂಚಕರ ಜಾಲದಲ್ಲಿ ಸಿಲುಕಿದಲ್ಲಿ ಆದಷ್ಟು ಶೀಘ್ರ, ಪೊಲೀಸ್ ಇಲಾಖೆಗೆ ಸೈಬರ್ ಕ್ರೈಂ ಸಹಾಯವಾಣಿ ‘1930’ಗೆ ಕರೆ ಮಾಡಿ ದೂರು ದಾಖಲಿಸುವಂತೆ ಕೋರಿದರು. *ಬೆಳೆಗಾರರ ಸ್ಪಂದನ* ಕಾಫಿ ಕೊಯ್ಲಿನ ಈ ದಿನಗಳಲ್ಲಿ ಜಿಲ್ಲೆಗೆ ಹೊರ ರಾಜ್ಯದಿಂದ ಸಾಕಷ್ಟು ಕಾರ್ಮಿಕರು ಆಗಮಿಸುತ್ತಿದ್ದಾರೆ. ಯಾವುದೇ ತೋಟ ಮಾಲೀಕರು ತಮ್ಮ ತೋಟ ಕೆಲಸಕ್ಕೆಂದು ಕರೆ ತರುವ ಕಾರ್ಮಿಕರ ಮಾಹಿತಿಯನ್ನು ನೀಡುವಂತೆ ಜಿಲ್ಲಾ ಪೊಲೀಸ್ ಇಲಾಖೆ ಮಾಡಿಕೊಂಡ ಮನವಿಗೆ ಪೂರಕ ಸ್ಪಂದನ ದೊರಕಿದೆ ಎಂದರು. ಕಾಫಿ ತೋಟಗಳಲ್ಲಿ ಕೆಲಸಕ್ಕೆ ಬರುವ ಕಾರ್ಮಿಕರ ಬಗ್ಗೆ ಮಾಲೀಕರು ಮೊಟ್ಟ ಮೊದಲಿಗೆ ಮಾಹಿತಿಯನ್ನು ಕಲೆ ಹಾಕಬೇಕೆಂದು ಮನವಿ ಮಾಡಿದ ಎಸ್‍ಪಿ, ಪ್ರಸ್ತುತ ತಮಗೆ ಕಾರ್ಮಿಕರ ಬಗ್ಗೆ ದೊರಕಿರುವ ಮಾಹಿತಿಗಳನ್ನು ಪರಿಶೀಲನೆಗೆ ಒಳಪಡಿಸುತ್ತಿರುವುದಾಗಿ ತಿಳಿಸಿದರು. ಇಲ್ಲಿಯವರೆಗೆ ‘ಬಾಂಗ್ಲಾ ವಲಸಿಗ’ರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲವೆಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. *ಪ್ರಕರಣ ದಾಖಲು* ಕಳೆದ ಡಿಸೆಂಬರ್‍ನಲ್ಲಿ ಮಡಿಕೇರಿಯಲ್ಲಿ ಬೆಂಗಳೂರಿನ ಮಹದೇವ್ ಎಂಬುವವರ ಮೇಲೆ ನಡೆದ ಹಲ್ಲೆ, ಡಕಾಯಿತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿಯ ವಿರುದ್ಧ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಂಗಳೂರಿನ ಪ್ರವೀಣ್ ಮತ್ತು ಸುದರ್ಶನ್ ಸೇರಿದಂತೆ ಮಡಿಕೇರಿಯ ಸುಜಿತ್, ರಚನ, ಮಾಲತಿ, ರವಿ ಮತ್ತು ದರ್ಶನ್ ಎಂಬವರ ವಿರುದ್ಧ ಪ್ರಕರಣ ದಾಖಲಾಗಿರುವುದಾಗಿ ಎಸ್‍ಪಿ ಬಿಂದುಮಣಿ ಮಾಹಿತಿ ನೀಡಿದರು.









