
ಮಡಿಕೇರಿ ಜ.16 NEWS DESK : ಕುಶಾಲನಗರ ಗೌಡ ಮಹಿಳಾ ಸಂಘ ಸುಮುಖ – ಸುಕೃತದ ವತಿಯಿಂದ ‘ಸಂಕ್ರಾತಿ ಸಂಭ್ರಮ’ ಮಕರ ಸಂಕ್ರಾಂತಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಕುಶಾಲನಗರ ಗೌಡ ಸಮಾಜದಲ್ಲಿ ನಡೆದ ‘ಸಂಕ್ರಾಂತಿ ಸಂಭ್ರಮ’ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಹಿಳಾ ಸಂಘದ ಅಧ್ಯಕ್ಷೆ ಕಲಾ ಕರಂದ್ಲಾಜೆ ಅವರು ಜೀವನದಲ್ಲಿ ಸುಖ ಮತ್ತು ದು:ಖವನ್ನು ಸಮಾನವಾಗಿ ಸ್ವೀಕರಿಸುವ ಹಾಗೂ ಪ್ರೀತಿಯಿಂದ ಬದುಕು ಸಾಗಿಸುವ ಸಂದೇಶ ಸಂಕ್ರಾಂತಿ ಹಬ್ಬದಲ್ಲಿ ಅಡಗಿದೆ ಎಂದರು. ಸಂಕ್ರಾಂತಿ ಎಳ್ಳು ಬೆಲ್ಲವನ್ನು ಹಂಚಿ ಸಂಭ್ರಮಿಸುವ ಮತ್ತು ಪ್ರಕೃತಿಯೊಂದಿಗಿನ ಒಡನಾಟವನ್ನು ಸೂಚಿಸುವ ಒಂದು ಸುಂದರವಾದ ಹಬ್ಬವಾಗಿದೆ. ಈ ಹಬ್ಬದ ಆಚರಣೆಯ ಮೂಲಕ ಪ್ರೀತಿ, ಸೌಹಾರ್ದತೆ ಮತ್ತು ಒಗ್ಗಟ್ಟಿನ ಸಂದೇಶವನ್ನು ನಾವೆಲ್ಲರೂ ಸಾರಬೇಕು. ಚಳಿಗಾಲದಲ್ಲಿ ದೇಹಕ್ಕೆ ಶಕ್ತಿ ನೀಡುವ ಮತ್ತು ಶಾಖವನ್ನು ಹೆಚ್ಚಿಸುವ ಸಾಮಥ್ರ್ಯ ಹೊಂದಿರುವ ಸಂಕ್ರಾಂತಿ ಹಬ್ಬದ ಕೃಷಿ ಫಸಲು ಮತ್ತು ಖಾದ್ಯಗಳೆಲ್ಲವೂ ವೈಜ್ಞಾನಿಕವಾಗಿಯೂ ಗಮನ ಸೆಳೆದಿವೆ ಎಂದು ವಿವರಿಸಿದರು. ಸಂಘದ ಸದಸ್ಯೆ ಅನಿತಾ ನಂಗಾರು ಅವರು ಮಾತನಾಡಿ ಒಕ್ಕಲಿಗ, ಭೂಮಿ ಹಾಗೂ ರಾಸುಗಳ ನಡುವೆ ಒಂದು ಬಿಡಿಸಲಾಗದ ಬಂಧವಿದೆ, ನಮ್ಮ ಹಳ್ಳಿಗಳಲ್ಲಿ ಬೆಳಿಗ್ಗೆ ಎದ್ದ ತಕ್ಷಣ ಎತ್ತು ನೋಡು, ಹಸುನೋಡು, ನೇಗಿಲು ನೋಡು, ಎನ್ನುವ ಕಾಲವೊಂದಿತ್ತು. ನೇಗಿಲ ಮೇಲೆ ನಿಂತಿದೆ ಭೂಮಿ ಎನ್ನುವುದನ್ನು ನಮ್ಮ ಪೂರ್ವಿಕರು ಅಕ್ಷರಶಃ ಅನುಭವಿಸಿ ಪಾಲಿಸುತ್ತಿದ್ದರು. ಆದರೆ ಬದಲಾದ ಇಂದಿನ ಪರಿಸ್ಥಿತಿ ನಮ್ಮತನವನ್ನು ಮರೆ ಮಾಚಿದೆ ಎಂದು ಬೇಸರ ವ್ಯಕ್ತಪಡಿಸಿದರು. ಮತ್ತೊಬ್ಬ ಸದಸ್ಯೆ ಲತಾ ಕಾಳೇರಮ್ಮನ ಅವರು ಮಾತನಾಡಿ ಸರ್ವಜ್ಞ ಹೇಳುವಂತೆ ಒಕ್ಕಲಿಗ ದುಡಿದು ತಾನಿಕ್ಕುವನು ಅನ್ನವನು, ಜಗದ ಜನ ನಕ್ಕು ನಲಿಸುವುದಕ್ಕೆ ಕಾರಣ, ಒಕ್ಕಲಿಗನ ಅನ್ನ ಎಂಬ ವಚನದ ಸಾಲುಗಳು ಸಾರ್ವಕಾಲಿಕ, ಕೃಷಿ ಕಾಯಕ ಮಾಡುವ ಪ್ರತಿಯೊಬ್ಬ ಭಾಗ್ಯವಂತರಿಗೂ ಸಂಕ್ರಾಂತಿ ಶುಭವನ್ನು ತರಲಿ ಎಂದು ಕೋರಿದರು. ಸಂಘದ ಮಹಿಳಾ ಸದಸ್ಯರು ಮಕರ ಸಂಕ್ರಾಂತಿ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸುವುದರೊಂದಿಗೆ ಜಾನಪದ ಕೃಷಿ ಪರಿಕರಗಳು, ಹಳೆಯ ಕಾಲದ ವಸ್ತುಗಳು ಮತ್ತು ಧಾನ್ಯಲಕ್ಷ್ಮಿಗೆ ದೀಪಗಳನ್ನು ಬೆಳಗಿ ವಿಶೇಷ ಪೂಜೆ ಸಲ್ಲಿಸಿದರು. ಎಳ್ಳು ಬೆಲ್ಲ ಹಂಚಿ ಸಂಭ್ರಮಿಸಿದರು. ಸಂಘದ ಸದಸ್ಯರಾದ ಸೂದನ ಅನಿತಾ ಹಾಗೂ ಸೂದನ ಲಲಿತಾ ಪ್ರಾರ್ಥಿಸಿದರು. ಗೀತಾ ನಂಗಾರು ಸ್ವಾಗತಿಸಿ, ಲೀಲಾವತಿ ತುಂತಜೆ ವಂದಿಸಿದರು.









